ಬೆಂಗಳೂರು: ಬಾಗಲಗುಂಟೆ ಬಳಿಯ ಬಾಬಣ್ಣ ಲೇಔಟ್‍ನಲ್ಲಿ ಐಶ್ವರ್ಯಾ(26) ಎಂಬ ನವವಿವಾಹಿತೆ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಐಶ್ವರ್ಯಾ ಅವರು ಒಂದು ತಿಂಗಳ ಹಿಂದೆ ಬಾಬಣ್ಣ ಲೇಔಟ್ ನಿವಾಸಿ ಲಿಖಿತ್ ಅವರನ್ನು ಮದುವೆ ಆಗಿದ್ದರು. ಐಶ್ವರ್ಯಾ ಅವರು ಎಂಬಿಎ ಓದಿದ್ದರು. ಲಿಖಿತ್ ಡಿಪ್ಲೊಮಾ ಓದಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.
‘ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಐಶ್ವರ್ಯಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕುಟುಂಬಸ್ಥರು ಆರೋಪಿಸಿ ದೂರು ನೀಡಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಐಶ್ವರ್ಯಾ ಅವರ ಮೃತದೇಹ ಪತ್ತೆಯಾಗಿದೆ.
‘ಲಿಖಿತ್ ಮತ್ತು ಕುಟುಂಬ ಸದಸ್ಯರು ತವರು ಮನೆಯಿಂದ ಹಣ ಹಾಗೂ ಚಿನ್ನಾಭರಣ ತರುವಂತೆ ಐಶ್ವರ್ಯಾ ಅವರಿಗೆ ಕಿರುಕುಳ ನೀಡುತ್ತಿದ್ದರು. ಲಿಖಿತ್, ಸಣ್ಣಪುಟ್ಟ ವಿಚಾರಕ್ಕೂ ಪತ್ನಿಯೊಂದಿಗೆ ಜಗಳವಾಡಿ ನಿಂದಿಸುತ್ತಿದ್ದರು. ಪ್ರತಿ ವಿಚಾರದಲ್ಲೂ ತಾಯಿಯ ಆಣತಿಯಂತೆ ನಡೆದುಕೊಳ್ಳುತ್ತಿದ್ದರು. ಈ ವಿಷಯ ತಿಳಿದು ಐಶ್ವರ್ಯಾ ಕುಟುಂಬಸ್ಥರು ಬುಧವಾರ ಬೆಳಿಗ್ಗೆ ಲಿಖಿತ್ ಮನೆಗೆ ಬಂದು ಮಾತುಕತೆ ನಡೆಸಿ ಹೋಗಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಲಿಖಿತ್ ಹಾಗೂ ಕುಟುಂಬಸ್ಥರು, ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಪುತ್ರಿಯನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಐಶ್ವರ್ಯಾ ಅವರ ತಂದೆ ಕೃಷ್ಣ ಅವರು ದೂರು ಕೊಟ್ಟಿದ್ದಾರೆ.
ಕೊಲೆ, ವರದಕ್ಷಿಣೆ ಸಾವು ಪ್ರಕರಣ ದಾಖಲಿಸಿಕೊಂಡು ಲಿಖಿತ್ ಹಾಗೂ ಅವರ ಕುಟುಂಬದವರಾದ ಅರುಣಾ, ವರುಣ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.