ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಮನೆಗೆ ಫುಡ್ ಡೆಲಿವರಿ ಹುಡುಗರ ಸೋಗಿನಲ್ಲಿ ನುಗ್ಗಿ ನಗದು ಹಾಗೂ ದಾಖಲೆಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಮೂವರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿಯ ಮಡಿವಾಳಪ್ಪ ಅಲಿಯಾಸ್ ಮ್ಯಾಡಿ (26), ಆತನ ಸೋದರ ಗಣೇಶ್ ಚೌಕಿ(24) ಹಾಗೂ ಸಂಬಂಧಿ ವಿಠಲ್ (24) ಬಂಧಿತ ಆರೋಪಿಗಳು.
ಆರೋಪಿಗಳಿಂದ ₹3.75 ಲಕ್ಷ ನಗದು ಮತ್ತು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಸೆ.14ರ ರಾತ್ರಿ ರಿಯಲ್ ಎಸ್ಟೇಟ್ ಉದ್ಯಮಿ ರಾಹುಲ್ ಅವರ ಮನೆಗೆ ಆರೋಪಿಗಳು ನುಗ್ಗಿ ಅವರ ತಾಯಿ ಕನಕಪುಷ್ಪಾ ಅವರಿಗೆ ಚಾಕುವಿನಿಂದ ಇರಿದು ₹8 ಲಕ್ಷ ನಗದು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳ್ಳತನ ಮಾಡಿಕೊಂಡು ಪರಾರಿ ಆಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
‘ದೂರುದಾರೆ ಕನಕಪುಷ್ಪಾ ಅವರ ಪುತ್ರ ರಾಹುಲ್ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದು, ನಾಲ್ಕು ತಿಂಗಳ ಹಿಂದೆ ಕಲುಬುರಗಿ ಮೂಲದ ಮಡಿವಾಳಪ್ಪನನ್ನು ಕಾರು ಚಾಲಕನಾಗಿ ಕೆಲಸಕ್ಕೆ ಸೇರಿಸಿಕೊಂಡಿದ್ದರು. ತಮ್ಮ ಮನೆಯ ಕೊಠಡಿಯೊಂದರಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಿದ್ದರು. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ನೆರವು ನೀಡುವಂತೆ ಮಡಿವಾಳಪ್ಪನಿಗೆ ಸೂಚಿಸಿದ್ದರು. ನೆರವು ನೀಡಿದರೆ ಕಮಿಷನ್ ನೀಡುವುದಾಗಿಯೂ ಭರವಸೆ ನೀಡಿದ್ದರು. ಈ ಮಧ್ಯೆ ವ್ಯವಹಾರವೊಂದರಲ್ಲಿ ಮಡಿವಾಳಪ್ಪ ಅವರು ಹೆಚ್ಚಿನ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದರು. ಇಬ್ಬರ ಮಧ್ಯೆ ಗಲಾಟೆ ನಡೆದು, ಚಾಲಕ ಕೆಲಸದಿಂದ ಮಡಿವಾಳಪ್ಪನನ್ನು ತೆಗೆದುಹಾಕಿದ್ದರು. ಕೆಲಸದಿಂದ ತೆಗೆದುಹಾಕಿದ್ದಕ್ಕೆ ರಾಹುಲ್ ಅವರ ಮೇಲೆ ಆರೋಪಿ ದ್ವೇಷ ಸಾಧಿಸುತ್ತಿದ್ದ. ಅವರ
ಮನೆಯಲ್ಲಿ ದರೋಡೆ ನಡೆಸಲು ಸಂಚು ರೂಪಿಸಿದ್ದ’ ಎಂದು ಮೂಲಗಳು ಹೇಳಿವೆ.
‘ಸೆ.14ರಂದು ರಾತ್ರಿ ಕನಕಪುಷ್ಪಾ ಒಬ್ಬರೇ ಇರುವುದನ್ನು ತಿಳಿದಿದ್ದ ಆರೋಪಿಗಳು, ರಾಹುಲ್ ಅವರ ಮನೆ ಬಳಿ ಬಂದಿದ್ದರು. ರಾತ್ರಿ 9.45ರ ಸುಮಾರಿಗೆ ಫುಡ್ ಡೆಲಿವರಿ ಹುಡುಗರ ಸೋಗಿನಲ್ಲಿ ಬಾಗಿಲು ಬಡಿದಿದ್ದರು. ಮನೆಯ ಒಳಗಿದ್ದ ಕನಕಪುಷ್ಪಾ ಅವರು ಯಾರು ಎಂದು ಪ್ರಶ್ನಿಸಿದಾಗ, ಫುಡ್ ಡೆಲಿವರಿ ಹುಡುಗರು ಎಂಬುದಾಗಿ ಆರೋಪಿಗಳು ಹೇಳಿದ್ದರು. ಅದನ್ನು ನಂಬಿದ ಕನಕಪುಷ್ಪಾ ಅವರು ಬಾಗಿಲು ತೆರೆಯುತ್ತಿದ್ದಂತೆಯೇ ಮೂವರು ಒಳಗೆ ನುಗ್ಗಿದ್ದರು. ಬಳಿಕ ಕನಕಪುಷ್ಪಾ ಅವರ ಬಾಯಿಗೆ ಬಟ್ಟೆ ತುರುಕಿ ಹಲ್ಲೆ ನಡೆಸಿದ್ದರು. ಬಳಿಕ ಚಾಕುವಿನಿಂದ ಚುಚ್ಚಿ ಬೀರುವಿನಲ್ಲಿಟ್ಟಿದ್ದ ₹8 ಲಕ್ಷ ನಗದು ಮತ್ತು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳವು ಮಾಡಿಕೊಂಡು ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.