ಬೆಂಗಳೂರು: ಕಲಾಸಿಪಾಳ್ಯದ ಬಿಎಂಟಿಸಿ ಬಸ್‌ನಿಲ್ದಾಣದ ಶೌಚಾಲಯದ ಬಳಿ ಸ್ಫೋಟಕ ವಸ್ತುಗಳನ್ನು ಇಟ್ಟು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪಶ್ಚಿಮ ವಿಭಾಗದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆಯ ಹಂಚಾಲ ಗ್ರಾಮದ ಎಚ್.ಎಂ.ಗಣೇಶ್ (38), ಮುನಿರಾಜ್ (32) ಹಾಗೂ ಕೋಲಾರ ತಾಲ್ಲೂಕು ಬೆಂಜನಹಳ್ಳಿಯ ಶಿವಕುಮಾರ್ (32) ಬಂಧಿತರು. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಜುಲೈ 23ರಂದು ಬಿಎಂಟಿಸಿ ಬಸ್ ನಿಲ್ದಾಣದ ಬಳಿ 22 ಜಿಲೆಟಿನ್ ಕಡ್ಡಿಗಳು ಹಾಗೂ 30 ಡಿಟೊನೇಟರ್‌ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. ಈ ಸಂಬಂಧ ಕಲಾಸಿಪಾಳ್ಯ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ತನಿಖೆಗೆ ಆರು ತಂಡಗಳನ್ನು ರಚಿಸಲಾಗಿತ್ತು. ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಎಟಿಎಸ್ ಮಲ್ಲಪ್ಪ ಅವರು ದೂರು ನೀಡಿದ್ದರು. ಕಲಾಸಿಪಾಳ್ಯ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಬಾಂಬ್ ಪತ್ತೆದಳ ಹಾಗೂ ಶ್ವಾನ ದಳದಿಂದ ಪರಿಶೀಲನೆ ನಡೆಸಲಾಗಿತ್ತು.
ಹೆದರಿ ಚೀಲ ಬಿಟ್ಟು ಹೋಗಿದ್ದ ಆರೋಪಿಗಳು:
‘ಕೋಲಾರದಲ್ಲಿ ಜಿಲೆಟಿನ್ ಕಡ್ಡಿ ಹಾಗೂ ಡಿಟೊನೇಟರ್‌ಗಳನ್ನು ಖರೀದಿಸಿದ್ದ ಆರೋಪಿಗಳು, ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಕ್ವಾರಿಯಲ್ಲಿ ಕಲ್ಲು ಬಂಡೆ ಸ್ಫೋಟಿಸಲು ಕೊಂಡೊಯ್ಯುತ್ತಿದ್ದರು. ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಬಂದಿದ್ದ ಆರೋಪಿಗಳು, ಶೌಚಾಲಯಕ್ಕೆ ತೆರಳಿದ್ದರು. ಅಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಗಮನಿಸಿ ಹೆದರಿ ಚೀಲವನ್ನು ಶೌಚಾಲಯದ ಎದುರು ಇಟ್ಟು ಪರಾರಿ ಆಗಿದ್ದರು. ಚೀಲವನ್ನು ಗಮನಿಸಿದ್ದ ಬಿಎಂಟಿಸಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.