ADVERTISEMENT

ಬೆಂಗಳೂರು | ಈಜ್ಹೀ ಹೈಟೆಕ್‌ ಶೌಚಾಲಯ: ಸರ್ವರಿಗೂ ಸೌಕರ್ಯ

ಶುಭ್ರ ಬೆಂಗಳೂರು ಅನುದಾನದಲ್ಲಿ ಹೊಸ ತಲೆಮಾರಿನ ಶೌಚಾಲಯಗಳು l ಎಲ್ಲರಿಗೂ ಉಚಿತ l ಪ್ರೀಕಾಸ್ಟ್‌ ಕಾಂಕ್ರೀಟ್‌ ಪ್ಯಾನಲ್‌ಗಳಲ್ಲಿ ನಿರ್ಮಾಣ

ಆರ್. ಮಂಜುನಾಥ್
Published 25 ಮಾರ್ಚ್ 2025, 0:30 IST
Last Updated 25 ಮಾರ್ಚ್ 2025, 0:30 IST
ಯಲಹಂಕದಲ್ಲಿ ಆರಂಭವಾಗಿರುವ ಈಜ್ಹೀ ಶೌಚಾಲಯ
ಯಲಹಂಕದಲ್ಲಿ ಆರಂಭವಾಗಿರುವ ಈಜ್ಹೀ ಶೌಚಾಲಯ   

ಬೆಂಗಳೂರು: ನಗರದಲ್ಲಿ ಮೂತ್ರಾಲಯ– ಶೌಚಾಲಯಗಳ ಸಮಸ್ಯೆ ಅತಿಯಾಗಿರುವ ಬಗ್ಗೆ ನಾಗರಿಕರು ಆಗಾಗ್ಗೆ ದೂರುತ್ತಲೇ ಇರುತ್ತಾರೆ. ಅಂಗವಿಕಲರಿಗೆ ಸಾರ್ವಜನಿಕ ಶೌಚಾಲಯಗಳೇ ಇಲ್ಲ ಎನ್ನಬಹುದು. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು, ಸರ್ವರೂ ಬಳಸಲು ಪ್ರತ್ಯೇಕ ವ್ಯವಸ್ಥೆಯುಳ್ಳ ಹೈಟೆಕ್‌ ‘ಈಜ್ಹೀ’ ಶೌಚಾಲಯಗಳು ನಗರದಲ್ಲಿ ನಿರ್ಮಾಣವಾಗುತ್ತಿವೆ.

ಪುರುಷರು, ಮಹಿಳೆಯರು, ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ‘ಈಜ್ಹೀ  ಶೌಚಾಲಯ’ಗಳು ಹೊಂದಿವೆ. ನಗರದ ಹಲವು ಭಾಗಗಳಲ್ಲಿ ಈ ಶೌಚಾಲಯಗಳನ್ನು ‘ಶುಭ್ರ ಬೆಂಗಳೂರು’ ಅನುದಾನದಡಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಮಿಸುತ್ತಿದೆ. ಸರ್ವರಿಗೂ ಸೌಕರ್ಯಗಳನ್ನು ಕಲ್ಪಿಸುವ ಈ ಪರಿಸರಸ್ನೇಹಿ ಶೌಚಾಲಯಗಳು ನಾಗರಿಕರಿಗೆ ಉಚಿತವಾಗಿ ಬಳಕೆಗೆ ಲಭ್ಯವಾಗಲಿವೆ.

ಈಜ್ಹೀ ಶೌಚಾಲಯದ ಒಳಾಂಗಣ

ಸೆನ್ಸಾರ್‌ ಫ್ಲಷಿಂಗ್‌ ಮೂತ್ರಾಲಯಗಳನ್ನು ಒಳಗೊಂಡಿರುವ ಈಜ್ಹೀ ಶೌಚಾಲಯಗಳಲ್ಲಿ ಕಮೋಡ್‌ಗಳನ್ನು ಗೋಡೆಗೆ ಅಳವಡಿಸಲಾಗಿದ್ದು, ಪೈಪ್‌ಗಳೂ ಕಾಣುವುದಿಲ್ಲ. ನೀರನ್ನು ಉಳಿತಾಯ ಮಾಡಲು ಪ್ರತಿ ನಲ್ಲಿಗೂ ಸೆನ್ಸಾರ್‌ಗಳನ್ನು ಅಳವಡಿಸಲಾಗಿರುತ್ತದೆ. ಎರಡು ರೀತಿಯ ಒಳಚರಂಡಿ ವ್ಯವಸ್ಥೆ ಹೊಂದಿದ್ದು, ಸಂಸ್ಕರಿತ ನೀರನ್ನು ಮೂತ್ರಾಲಯ, ಶೌಚಾಲಯಗಳಿಗೆ ಬಳಸಲಾಗುತ್ತದೆ. ಗಾಳಿ ಮತ್ತು ಬೆಳಕಿಗಾಗಿ ಪರ್ಫೊರೇಟೆಡ್‌ ಶೀಟ್‌ ಹಾಗೂ ಪಾಲಿ ಕಾರ್ಬೊನೇಟ್‌ ಶೀಟ್‌ಗಳನ್ನು ಅಳವಡಿಸಲಾಗುತ್ತದೆ. ಸೌರಶಕ್ತಿಯನ್ನು ಬಳಸಿಕೊಳ್ಳುವ ವ್ಯವಸ್ಥೆಯೂ ಇದೆ.

ADVERTISEMENT

‘ಶೌಚಾಲಯಗಳು ಸುಲಭವಾಗಿ ಬಳಸಲು, ಪ್ರವೇಶಿಸಲು ಅನುಕೂಲವಾಗುವಂತೆ ಸ್ವಚ್ಛವಾಗಿರುವ ಹಾಗೂ ಅಗತ್ಯ ಸ್ಥಳದಲ್ಲಿ ಲಭ್ಯವಿರುತ್ತವೆ. ಹೀಗಾಗಿ, ಇಂಗ್ಲಿಷ್‌ನ ‘ಈಸಿ’ ಪದವನ್ನು ‘ಈಜ್ಹೀ’ ಎಂದು ಬಳಸಿ, ಹೆಸರಿಡಲಾಗಿದೆ. ನಗರದಲ್ಲಿ 40 ಈಜ್ಹೀ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಯಲಹಂಕ ಕೆರೆ ದಡದಲ್ಲಿ ಪ್ರಥಮ ಶೌಚಾಲಯ ಕಾರ್ಯಾರಂಭಿಸಿದೆ. ಬೊಮ್ಮನಹಳ್ಳಿ ಹಾಗೂ ಬಿಟಿಎಂ ವಿಭಾಗದಲ್ಲಿರುವ ಕೆರೆಗಳ ದಡದಲ್ಲಿ ಹತ್ತು ಶೌಚಾಲಯಗಳು ನಿರ್ಮಾಣ ಹಂತದಲ್ಲಿವೆ. ನಗರದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಲಭ್ಯವಿರುವ ಪ್ರದೇಶಗಳಲ್ಲಿ ಇನ್ನುಳಿದ ಶೌಚಾಲಯಗಳನ್ನು ಈ ವರ್ಷದ ಅಂತ್ಯದೊಳಗೆ ನಿರ್ಮಾಣ ಮಾಡಲಾಗುತ್ತದೆ’ ಎಂದು ಬಿಬಿಎಂಪಿಯ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್‌ಗಳು ಮಾಹಿತಿ ನೀಡಿದರು.

ಈಜ್ಹೀ ಶೌಚಾಲಯದ ಒಳಾಂಗಣದಲ್ಲಿರುವ ವಾಶ್‌ಬೇಸಿನ್‌

‘ಪರಿಸರ ಸ್ನೇಹಿ ಶೌಚಾಲಯಗಳನ್ನು ನಿರ್ಮಿಸುವ ಮೊದಲನೇ ಹಂತದ ಯೋಜನೆಯಡಿ ಸಾರಕ್ಕಿ ಕೆರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ 20 ಶೌಚಾಲಯಗಳು ನಿರ್ಮಾಣಗೊಂಡಿವೆ. ಸಾರ್ವಜನಿಕರ ಬಳಕೆಗೆ ಉಚಿತವಾಗಿರುವ ಈ ಶೌಚಾಲಯಗಳಲ್ಲಿ ಹೈಟೆಕ್‌ ಸೌಲಭ್ಯಗಳಿಲ್ಲ. ಎರಡನೇ ಹಂತದಲ್ಲಿ ಈಜ್ಹೀ ಶೌಚಾಲಯಗಳನ್ನು ಪರಿಸರಸ್ನೇಹಿ ಜೊತೆಗೆ ವಿಮಾನ ನಿಲ್ದಾಣ, ಐಷಾರಾಮಿ ಹೋಟಲ್‌ಗಳಲ್ಲಿರುವಂತೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾಗುತ್ತಿದೆ’ ಎಂದರು.

ಈಜ್ಹೀ ಶೌಚಾಲಯದ ನಕ್ಷೆ

ಎರಡು ತಿಂಗಳಲ್ಲಿ ನಿರ್ಮಾಣ; ಐದು ವರ್ಷ ನಿರ್ವಹಣೆ

ಸ್ವಚ್ಛ ಭಾರತ ಯೋಜನೆಯ ಮಾರ್ಗಸೂಚಿಯಂತೆ ‘ಈಜ್ಹೀ ಶೌಚಾಲಯಗಳನ್ನು ‘ನ್ಯೂ ಜನರೇಷನ್‌ ಟಾಯ್ಲೆಟ್‌’ ಶೀರ್ಷಿಕೆಯಡಿ  ನಿರ್ಮಿಸಲಾಗುತ್ತಿದೆ. ಬಯಲು ಬಹಿರ್ದೆಸೆಯಿಂದ ನಗರವನ್ನು ಮುಕ್ತಗೊಳಿಸುವ (ಒಡಿಎಫ್‌) ಗುರಿ ಸಾಧನೆಗೆ ಪೂರಕವಾಗಿವೆ. ಪ್ರೀಕಾಸ್ಟ್‌ ಮಾದರಿಯಲ್ಲಿ ಎರಡು ತಿಂಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ.  ‘ಈಜ್ಹೀ ಶೌಚಾಲಯಗಳನ್ನು ನಿರ್ಮಿಸುವ ಗುತ್ತಿಗೆದಾರರೇ ಅದನ್ನು ಐದು ವರ್ಷ ನಿರ್ವಹಣೆ ಮಾಡಬೇಕೆಂಬ ಮಾದರಿಯಲ್ಲಿ ಗುತ್ತಿಗೆ ನೀಡಲಾಗಿದೆ. ಸಾರ್ವಜನಿಕರು ಈಜ್ಹೀ ಶೌಚಾಲಯಗಳ ಬಳಕೆಗೆ ಯಾವುದೇ ರೀತಿಯ ಹಣ ನೀಡುವಂತಿಲ್ಲ. ವಿದ್ಯುತ್‌ ನೀರು ಸೇರಿದಂತೆ ನಿರ್ವಹಣಾ ವೆಚ್ಚವನ್ನು ಗುತ್ತಿಗೆದಾರರಿಗೆ ಬಿಬಿಎಂಪಿಯೇ ಭರಿಸಲಿದೆ’ ಎಂದು ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್‌ಗಳು ತಿಳಿಸಿದರು.

ಈಜ್ಹೀ ಶೌಚಾಲಯದ ಮಾದರಿ

ಎಲ್ಲೆಲ್ಲಿ ಈಜ್ಹೀ ಶೌಚಾಲಯ?

ಯಲಹಂಕ ಕೆರೆ (ಆರಂಭವಾಗಿದೆ) ಬೊಮ್ಮನಹಳ್ಳಿ ವಿಭಾಗದ ಕೂಡ್ಲು ಚಿಕ್ಕಕೆರೆ ಅಂಜನಾಪುರ ಕೆರೆ ಸುಬ್ರಮಣ್ಯಪುರ ಕೆರೆ ಗೊಟ್ಟಿಗೆರೆ ಕೆರೆ ಬೇಗೂರು ಕೆರೆ ಬಸವನಪುರ ಕೆರೆ ಬಿಟಿಎಂ ಲೇಔಟ್‌ ವಿಭಾಗದ ತಾವರೆಕೆರೆ.

‘ಶುಭ್ರ ಬೆಂಗಳೂರು’ ಅನುದಾನದಲ್ಲಿ ಮೊದಲ ಹಂತದಲ್ಲಿ ಸಾರಕ್ಕಿ ಕೆರೆಯಲ್ಲಿ ನಿರ್ಮಿಸಿರುವ ಶೌಚಾಲಯ -ಪ್ರಜಾವಾಣಿ ಚಿತ್ರ

ಜಾಗದ ಕೊರತೆ: ವಿಕಾಸ್‌ ಕಿಶೋರ್‌

‘ಪರಿಸರ ಸ್ನೇಹಿ ಹೈಟೆಕ್‌ ಶೌಚಾಲಯಗಳನ್ನು ಎಲ್ಲೆಡೆ ನಿರ್ಮಿಸಬೇಕೆಂಬ ಉದ್ದೇಶವಿದೆ. ಆದರೆ ಜಾಗದ ಕೊರತೆ ಇದೆ. ಕೆಲವು ಭಾಗದಲ್ಲಿ ಶೌಚಾಲಯ ನಿರ್ಮಿಸುವುದು ಬೇಡ ಎಂದು ಜನರು ವಿರೋಧಿಸುತ್ತಾರೆ. ಆದರೆ ಈಜ್ಹೀ ಶೌಚಾಲಯಗಳು ಪರಿಸರಸ್ನೇಹಿಯಾಗಿದ್ದು  ಸುತ್ತಮುತ್ತಲಿನ ಜನರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಸ್ಥಳಗಳನ್ನು ಆದಷ್ಟು ಬೇಗ ನಿಗದಿ ಮಾಡಿ ಈ ವರ್ಷದ ಅಂತ್ಯಕ್ಕೆ ಎಲ್ಲ ಶೌಚಾಲಯಗಳನ್ನೂ ನಿರ್ಮಿಸಿ ಬಳಕೆಗೆ ಅನುವು ಮಾಡಿಕೊಡಲಾಗುತ್ತದೆ’ ಎಂದು ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್‌ ವಿಕಾಸ್ ಕಿಶೋರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.