ಪೊಲೀಸ್ – ಪ್ರಾತಿನಿಧಿಕ ಚಿತ್ರ
ಬೆಂಗಳೂರು: ವಿದೇಶಿ ಪ್ರಜೆಗಳಿಂದ ಸರಿಯಾದ ದಾಖಲಾತಿಗಳನ್ನು ಪಡೆಯದ ಹಾಗೂ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಸಿ–ಫಾರಂ ಸಲ್ಲಿಸದೇ ಮನೆಗಳನ್ನು ಬಾಡಿಗೆಗೆ ನೀಡಿದ್ದ 23 ಮಾಲೀಕರ ವಿರುದ್ಧ ಈಶಾನ್ಯ ವಿಭಾಗದ ಒಂಬತ್ತು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಈಶಾನ್ಯ ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಅವಧಿ ಮೀರಿ ವಾಸವಾಗಿರುವ ವಿದೇಶಿಯರ ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ವೀಸಾ ಅವಧಿ ಮುಕ್ತಾಯವಾದ ಮೇಲೂ ವಿದೇಶಿಯರು ನಗರದಲ್ಲಿ ನೆಲಸಿರುವುದು ಪತ್ತೆಯಾಗಿದೆ. ಯಾವುದೇ ದಾಖಲಾತಿಗಳನ್ನು ಪಡೆದುಕೊಳ್ಳದ ಮನೆಯ ಮಾಲೀಕರ ವಿರುದ್ಧ ರಿಜಿಸ್ಟ್ರೇಷನ್ ಆಫ್ ಫಾರಿನರ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಮೃತಹಳ್ಳಿ, ಬಾಗಲೂರು, ಸಂಪಿಗೆಹಳ್ಳಿ, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ತಲಾ ಒಂದು, ಚಿಕ್ಕಜಾಲ ಹಾಗೂ ಕೊಡಿಗೆಹಳ್ಳಿಯಲ್ಲಿ ಎರಡು, ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಮೂರು, ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಐದು, ಯಲಹಂಕ ಪೊಲೀಸ್ ಠಾಣೆಯಲ್ಲಿ ಏಳು ಪ್ರಕರಣಗಳು ದಾಖಲಾಗಿವೆ.
‘ಈಶಾನ್ಯ ಸೇರಿದಂತೆ ನಗರದ ಎಲ್ಲ ವಿಭಾಗಗಳಲ್ಲೂ ಕಾರ್ಯಾಚರಣೆ ಮುಂದುವರಿಸಲಾಗುವುದು. ನಿಯಮಮೀರಿ ವಿದೇಶಿ ಪ್ರಜೆಗಳಿಗೆ ಮನೆಗಳನ್ನು ಬಾಡಿಗೆಗೆ ನೀಡಿದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾವುದು’ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.