
ಸಾವು
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ರಾಮಮೂರ್ತಿನಗರದ ಬಳಿಯ ಸುಬ್ರಹ್ಮಣ್ಯ ಲೇಔಟ್‍ನ ವಸತಿ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಶನಿವಾರ ರಾತ್ರಿ ಅಗ್ನಿ ಅನಾಹುತ ಸಂಭವಿಸಿದ್ದು, ಘಟನೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಶರ್ಮಿಳಾ (34) ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಶರ್ಮಿಳಾ ಅವರು ಸ್ನೇಹಿತೆಯ ಜತೆ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಅವರು ಬೆಳ್ಳಂದೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶರ್ಮಿಳಾರ ಸ್ನೇಹಿತೆ ರಜೆಯ ಕಾರಣ ಕೆಲ ದಿನಗಳ ಹಿಂದೆ ಊರಿಗೆ ಹೋಗಿದ್ದರು. ಹೀಗಾಗಿ, ಅವರು ಒಬ್ಬರೇ ಫ್ಲ್ಯಾಟ್‌ನಲ್ಲಿ ಇದ್ದರು. ರಾತ್ರಿ ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಗಾಢ ನಿದ್ದೆಯಲ್ಲಿದ್ದ ಕಾರಣ ಬೆಂಕಿ ಹೊತ್ತಿಕೊಂಡಿರುವುದು ತಕ್ಷಣವೇ ಅವರ ಗಮನಕ್ಕೆ ಬಂದಿಲ್ಲ. ಬಳಿಕ ಮನೆಯ ತುಂಬೆಲ್ಲಾ ಹೊಗೆ ಆವರಿಸಿಕೊಂಡಿದೆ. ಸಾಕಷ್ಟು ಸಮಯದ ಬಳಿಕ ಎಚ್ಚರಗೊಂಡ ಶರ್ಮಿಳಾ, ಫ್ಲ್ಯಾಟ್‍ನಿಂದ ಹೊರ ಬರಲಾಗದೆ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಫ್ಲ್ಯಾಟ್‌ನಿಂದ ಹೊಗೆ ಬರುತ್ತಿರುವುದನ್ನು ನೋಡಿದ ನೆರೆಹೊರೆಯವರು ಠಾಣೆಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅವರು ಮೃತಪಟ್ಟಿರುವುದು ಗೊತ್ತಾಯಿತು. ಸಿಲಿಂಡರ್‌ನಿಂದ ಅಡುಗೆ ಅನಿಲ ಸೋರಿಕೆಯಾಗಿರುವ ಯಾವುದೇ ಕುರುಹುಗಳಿಲ್ಲ. ಹೀಗಾಗಿ, ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಬೆಂಕಿ ಹೊತ್ತಿಕೊಂಡು ಈ ಅವಘಡ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಫ್ಲ್ಯಾಟ್‌ನಲ್ಲಿದ್ದ ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ. ರಾಮಮೂರ್ತಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.