ADVERTISEMENT

ತ್ಯಾಜ್ಯ ಎಸೆಯುವವರಿಗೆ ದಂಡ: ಮನೆ ಮುಂದೆ ‘ಕಸ ಸುರಿಯುವ ಹಬ್ಬ’

ಜಾಗೃತಿ ಮೂಡಿಸಲು ಬಿಎಸ್‌ಡಬ್ಲ್ಯುಎಂಲ್‌ನಿಂದ ಅಭಿಯಾನ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 15:49 IST
Last Updated 30 ಅಕ್ಟೋಬರ್ 2025, 15:49 IST
ರಸ್ತೆಗಳಲ್ಲಿ ತ್ಯಾಜ್ಯ ಎಸೆಯುತ್ತಿದ್ದ ನಾಗರಿಕರ ಮನೆಗಳ ಮುಂದೆ ಬಿಎಸ್‌ಡಬ್ಲ್ಯುಎಂಎಲ್‌ ಸಿಬ್ಬಂದಿ ಕಸ ಸುರಿದು ಮತ್ತೊಮ್ಮೆ ಹಾಗೆ ಮಾಡದಂತೆ ಅರಿವು ಮೂಡಿಸಿದರು
ರಸ್ತೆಗಳಲ್ಲಿ ತ್ಯಾಜ್ಯ ಎಸೆಯುತ್ತಿದ್ದ ನಾಗರಿಕರ ಮನೆಗಳ ಮುಂದೆ ಬಿಎಸ್‌ಡಬ್ಲ್ಯುಎಂಎಲ್‌ ಸಿಬ್ಬಂದಿ ಕಸ ಸುರಿದು ಮತ್ತೊಮ್ಮೆ ಹಾಗೆ ಮಾಡದಂತೆ ಅರಿವು ಮೂಡಿಸಿದರು   

ಬೆಂಗಳೂರು: ಉದ್ಯಾನ ಹಬ್ಬ, ಕೆರೆ ಹಬ್ಬ, ನಮ್ಮೂರ ಹಬ್ಬ, ಬೆಂಗಳೂರು ಹಬ್ಬದಂತಹ ಹೈಟೆಕ್‌ ಹಬ್ಬಗಳನ್ನು ಕಂಡಿದ್ದ ನಗರದಲ್ಲಿ, ‘ಕಸ ಸುರಿಯುವ ಹಬ್ಬ’ವನ್ನು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ಮನೆಗಳ ಮುಂದೆ ಗುರುವಾರ ಆಚರಿಸಲಾಯಿತು.

ರಸ್ತೆ ಅಥವಾ ಖಾಲಿ ನಿವೇಶನಗಳಲ್ಲಿ ನಿಯಮಿತವಾಗಿ ತ್ಯಾಜ್ಯ ಎಸೆಯುತ್ತಿದ್ದ ನಾಗರಿಕರ ಮನೆ ಮುಂದೆ ತ್ಯಾಜ್ಯ ಸುರಿದು, ನೀವು ಎಸೆದ ಕಸದ ಸಮಸ್ಯೆ ಹೇಗಿರುತ್ತದೆ ಎಂಬ ಅರಿವು ನಿಮಗಾಯಿತೇ? ಎಂದು ಅರಿವು ಮೂಡಿಸಿ, ದಂಡ ವಿಧಿಸಿ ಮುಂದೆಂದೂ ಹೀಗೆ ಎಲ್ಲೆಂದರಲ್ಲಿ ಕಸ ಬಿಸಾಡಬೇಡಿ ಎಂದು ಎಚ್ಚರಿಸಲಾಯಿತು.

ರಸ್ತೆ ಹಾಗೂ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಎಸೆಯುವವರನ್ನು ಗುರುತಿಸಿ, ಅವರ ಮನೆ ಮುಂದೆ ತ್ಯಾಜ್ಯ ಹಾಕುವ, ‘ಕಸ ಸುರಿಯುವ ಹಬ್ಬ’ ಅಭಿಯಾನವನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌) ಆರಂಭಿಸಿದೆ.

ADVERTISEMENT

‘ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದೂ ನಗರ ಪಾಲಿಕೆಗಳಲ್ಲಿ ಬೆಳಿಗ್ಗೆ ಆಟೊ ಟಿಪ್ಪರ್‌ಗಳಲ್ಲಿ ಮನೆಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಆದರೂ ಕೆಲ ಸಾರ್ವಜನಿಕರು ಕಸವನ್ನು ರಸ್ತೆ ಬದಿ, ಪಾದಚಾರಿ ಮಾರ್ಗ ಹಾಗೂ ಖಾಲಿ ಜಾಗಗಳಲ್ಲಿ ಎಸೆಯುತ್ತಿದ್ದಾರೆ. ಅದನ್ನು ವಿಡಿಯೊ ಹಾಗೂ ಚಿತ್ರ ದಾಖಲೆ ಮಾಡಿಕೊಳ್ಳಲಾಗಿದೆ. ಇಂತಹ ಸಾವಿರಾರು ಜನರ ಮಾಹಿತಿ ನಮ್ಮಲ್ಲಿದೆ. ಅಭಿಯಾನದ ಮೊದಲ ದಿನ 218 ಮನೆಗಳ ಮುಂದೆ ಕಸ ಸುರಿದು ₹2.80 ಲಕ್ಷ ದಂಡ ವಿಧಿಸಲಾಗಿದೆ. ಈ ಪ್ರಕ್ರಿಯೆ ಮುಂದುವರಿಯಲಿದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಸಿಇಒ ಕರೀಗೌಡ ತಿಳಿಸಿದರು.

ರಸ್ತೆ ಬದಿ ಕಸ ಸುರಿಯುವುದರಿಂದ ನಗರ ನೈರ್ಮಲ್ಯ ಹಾಳಾಗುತ್ತಿದೆ. ಇಂತಹ ಪ್ರಕರಣಗಳನ್ನು ತಪ್ಪಿಸುವ ಉದ್ದೇಶದಿಂದ ‘ಕಸ ಸುರಿಯುವ ಹಬ್ಬ’ ಎಂಬ ವಿನೂತನ ಜಾಗೃತಿ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

‘ಆಟೊ ಟಿಪ್ಪರ್‌ಗಳಿಗೆ ಕಸ ಕೊಡದೆ ರಾತ್ರಿ ವೇಳೆ ರಸ್ತೆ ಬದಿ ಹಾಗೂ ಇನ್ನಿತರ ಕಡೆ ಕಸ ಎಸೆಯುತ್ತಾರೆ. ಬೇರೆಯವರ ಮನೆ ಮುಂದೆ/ರಸ್ತೆಗಳಲ್ಲಿ ಕಸ ಬಿದ್ದಾಗ ಹೇಗೆ ಅನ್ನಿಸುತ್ತದೆ ಎಂದು ಮನವರಿಕೆ ಮಾಡಿಕೊಡುವ ಸಲುವಾಗಿ ಅವರ ಮನೆ ಮುಂದೆಯೇ ಕಸ ಸುರಿಯಲಾಯಿತು. ತದನಂತರ ಕಸವನ್ನು ತೆರವುಗೊಳಿಸಲಾಗಿದೆ. ಬೆಂಗಳೂರು ನಗರದ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಲು ದಯವಿಟ್ಟು ಸಹಕರಿಸಿ, ಆಟೊ ಟಿಪ್ಪರ್ ಬಂದಾಗ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕಸವನ್ನು ನೀಡಬೇಕು’ ಎಂದು ಮನವಿ ಮಾಡಿದರು.

ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು. ನಗರ ಪಾಲಿಕೆ ವತಿಯಿಂದ ಮನೆ ಮನೆಗೆ ಬರುವ ಆಟೊ ಟಿಪ್ಪರ್‌ಗಳಿಗೇ ಕಸವನ್ನು ಒಣ ಕಸ ಮತ್ತು ಹಸಿ ಕಸವನ್ನಾಗಿ ಬೇರ್ಪಡಿಸಿ ನಿಗದಿತ ಸಮಯದಲ್ಲಿ ಕಸವನ್ನು ನೀಡುವಂತೆ ಐದೂ ನಗರ ಪಾಲಿಕೆಗಳ ಹಲವು ಪ್ರದೇಶಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

65 ಕಸ ಕಿಯೋಸ್ಕ್: ರಸ್ತೆ ಬದಿ ಕಸ ಬಿಸಾಡುವುದನ್ನು ನಿಯಂತ್ರಿಸುವ ಸಲುವಾಗಿ ನಗರದಾದ್ಯಂತ ಸುಮಾರು 65 ಕಸ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಸ್ವಚ್ಛ ಬೆಂಗಳೂರಿನ ನಿರ್ಮಾಣಕ್ಕೆ ಇದು ಸಹಕಾರಿಯಾಗಲಿದೆ ಎಂದು ಕರೀಗೌಡ ಹೇಳಿದರು.

‘ಕಸ ಕಿಯೋಸ್ಕ್‌ನಿಂದ ಸ್ಥಳೀಯವಾಗಿ ಬ್ಲ್ಯಾಕ್‌ಸ್ಪಾಟ್‌ಗಳ ನಿರ್ಮೂಲನೆ, ತ್ಯಾಜ್ಯ ದುರ್ವಾಸನೆ ಸೇರಿದಂತೆ ಇತರ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ. ಪ್ರತಿ ಕಸ ಕಿಯೋಸ್ಕ್‌ನಲ್ಲಿ 100 ಲೀಟರ್ ಸಾಮರ್ಥ್ಯದ ನಾಲ್ಕು ಸಂಗ್ರಹಣಾ ಬಿನ್‌ಗಳನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ನಿಗದಿಪಡಿಸಿದ ಸಮಯದಲ್ಲಿ ತಮ್ಮ ಬೇರ್ಪಡಿಸಿದ ಕಸವನ್ನು ಯಾವುದೇ ಶುಲ್ಕವಿಲ್ಲದೆ ಈ ಕಿಯೋಸ್ಕ್‌ಗಳಿಗೆ ಉಚಿತವಾಗಿ ನೀಡಬಹುದಾಗಿದೆ’ ಎಂದರು.

ರಸ್ತೆಗಳಲ್ಲಿ ತ್ಯಾಜ್ಯ ಎಸೆಯುತ್ತಿದ್ದ ನಾಗರಿಕರ ಮನೆಗಳ ಮುಂದೆ ಬಿಎಸ್‌ಡಬ್ಲ್ಯುಎಂಎಲ್‌ ಸಿಬ್ಬಂದಿ ಕಸ ಸುರಿದು ಮತ್ತೊಮ್ಮೆ ಹಾಗೆ ಮಾಡದಂತೆ ಅರಿವು ಮೂಡಿಸಿದರು

ತಮಟೆಗೆ ಸದ್ಯಕ್ಕೆ ವಿರಾಮ!

‘ರಸ್ತೆ–ಬೀದಿ, ಖಾಲಿ ನಿವೇಶನಗಳಲ್ಲಿ ಕಸ ಬಿಸಾಡುವವರ ಮನೆ ಮುಂದೆ ತ್ಯಾಜ್ಯ ಸುರಿದು, ತಮಟೆ ಹೊಡೆಯುವ ಅಭಿಯಾನ ನಡೆಸಲು ಯೋಜಿಸಲಾಗಿತ್ತು. ನಾಗರಿಕರಿಗೆ ತೀರಾ ಮುಜುಗರವಾಗುವುದನ್ನು ತಪ್ಪಿಸಲು ಸದ್ಯಕ್ಕೆ ಅವರ ಮನೆ ಮುಂದೆ ಕಸ ಸುರಿಯಲಾಗುತ್ತಿದೆ. ಎಚ್ಚೆತ್ತುಕೊಳ್ಳದೆ ಮತ್ತೆ ತ್ಯಾಜ್ಯ ಬಿಸಾಡುವುದನ್ನು ಮುಂದುವರಿಸಿದರೆ ತಮಟೆಯನ್ನೂ ಹೊಡೆಯಲಾಗುತ್ತದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್ ಸಿಇಒ ಕರೀಗೌಡ ತಿಳಿಸಿದರು.

ಸಂಗ್ರಹಕ್ಕೆ ಬಾರದಿದ್ದರೆ ದೂರು ನೀಡಿ

‘ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯ ಸಂಗ್ರಹವಾಗುತ್ತಿಲ್ಲವಾದರೆ ಚಿತ್ರಸಹಿತ ಬಿಎಸ್‌ಡಬ್ಲ್ಯುಎಂಎಲ್‌ ಸ್ಥಾಪಿಸಿರುವ ಪ್ರತ್ಯೇಕ ವಾಟ್ಸ್‌ಆ್ಯಪ್‌ಗೆ 9448197197 ನಾಗರಿಕರು ಸಂದೇಶ ಕಳುಹಿಸಬಹುದು. ದೂರು ಸ್ವೀಕರಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ತ್ಯಾಜ್ಯ ಅಥವಾ ಕಸ ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಲಿದ್ದಾರೆ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.