ADVERTISEMENT

ಪ್ರೌಢಶಾಲೆಯೊಂದರಲ್ಲಿ ಬಾಲಕಿಗೆ ಹೆರಿಗೆ:ನಿರ್ಲಕ್ಷ್ಯ ತೋರಿದ ಶಿಕ್ಷಕರಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 15:35 IST
Last Updated 24 ಜನವರಿ 2026, 15:35 IST
   

ಬೆಂಗಳೂರು: ಉತ್ತರ ವಲಯದ ಸರ್ಕಾರಿ ಪ್ರೌಢಶಾಲೆಯೊಂದರ 16 ವರ್ಷದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಪ್ರಕರಣ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದ ಮುಖ್ಯಶಿಕ್ಷಕ ಹಾಗೂ ಶಿಕ್ಷಕರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ.

ಬಾಲಕಿ ಹೊಟ್ಟೆನೋವು ಕಾಣಿಸಿಕೊಂಡ ನಂತರ ವೈದ್ಯರು ಪರಿಶೀಲನೆ ನಡೆಸಿದ್ದು, ಆ ವೇಳೆ ಆಕೆ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಬಳಿಕ, ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಬಾಲಕಿಯ ಮನೆ ಸಮೀಪವೇ ವಾಸವಿರುವ ಖಾಸಗಿ ಕಂಪನಿಯ ಉದ್ಯೋಗಿಯನ್ನು (19) ಬಂಧಿಸಿದ್ದಾರೆ. 

ಘಟನೆ ನಂತರ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ತರಗತಿಗಳಿಗೆ ನಿಯಮಿತವಾಗಿ ಹಾಜರಾಗುತ್ತಿದ್ದರೂ ಬಾಲಕಿಯ ದೈಹಿಕ ಬದಲಾವಣೆಗಳನ್ನು ಗುರುತಿಸಲು ವಿಫಲರಾದ ಕಾರಣ ಶಾಲೆಯ ಮುಖ್ಯಶಿಕ್ಷಕ ಹಾಗೂ ಇತರೆ ಶಿಕ್ಷಕರಿಗೆ ವಿವರಣೆ ಕೇಳಿ ನೋಟಿಸ್‌ ನೀಡಲಾಗಿದೆ. 

ADVERTISEMENT

‘ಘಟನೆ ಶಾಲೆಯಲ್ಲಿ ನಡೆದಿದ್ದಲ್ಲ. ಆರೋಪಿಗೂ ಶಾಲೆಗೂ ನೇರ ಸಂಬಂಧ ಇಲ್ಲ. ಬಾಲಕಿ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಆರೋಗ್ಯಕರ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಶಾಲೆಗೆ ನಿತ್ಯವೂ ಬರುತ್ತಿದ್ದ ವಿದ್ಯಾರ್ಥಿನಿಯ ದೈಹಿಕ ಬದಲಾವಣೆಗಳನ್ನು ಗಮನಿಸದಿರುವುದು ನಿರ್ಲಕ್ಷ್ಯಕ್ಕೆ ಸಮಾನ. ಹಾಗಾಗಿ, ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಹೇಳಿವೆ. 

ಘಟನೆ ನಂತರ ಎಚ್ಚೆತ್ತುಕೊಂಡ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಬಾಲಕಿಯರ ಆರೋಗ್ಯ, ಬೆಳವಣಿಗೆ, ವರ್ತನೆಗಳ ಮೇಲೆ ನಿಗಾವಹಿಸುವಂತೆ ಇತರೆ ಶಾಲೆಗಳಿಗೂ ಸೂಚನೆ ನೀಡಿದ್ದಾರೆ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.