ADVERTISEMENT

ಬೆಂಗಳೂರು | ಒತ್ತುವರಿ ತೆರವಿಗೆ ಜಿಲ್ಲಾಡಳಿತ ಮೀನಮೇಷ

ಖರಾಬು ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಬಾಡಿಗೆ ವಸೂಲಿ!

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 20:00 IST
Last Updated 25 ನವೆಂಬರ್ 2021, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇಲ್ಲಿನ ವೀರಭದ್ರನಗರದ ಪಂತರಪಾಳ್ಯದಲ್ಲಿ (ನಾಯಂಡಹಳ್ಳಿ ಸಮೀಪ) ಸರ್ಕಾರಿ ಖರಾಬು ಜಮೀನನ್ನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದು, ಇದರ ತೆರವಿಗೆ ನಗರ ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ.

‘ಸರ್ವೆ ನಂಬರ್‌ 47ರಲ್ಲಿ 24 ಎಕರೆ 37 ಗುಂಟೆ ಬಿ–ಖರಾಬು ಜಮೀನು ಇದೆ. ಇಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ಇಲ್ಲ. ಖಾಸಗಿ ವ್ಯಕ್ತಿಯೊಬ್ಬರು ಈ ಜಮೀನನ್ನು ಕಳೆದ 40 ವರ್ಷಗಳಿಂದ ವಾಣಿಜ್ಯ ಚಟುವಟಿಕೆಗೆ ದುರ್ಬಳಕೆ ಮಾಡುತ್ತಿದ್ದಾರೆ. ಶೆಡ್‌ಗಳನ್ನು ನಿರ್ಮಿಸಲಾಗಿದೆ. ಜಾಗವನ್ನು ಬಾಡಿಗೆಗೆ ನೀಡಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ವಸೂಲಿ ಮಾಡಲಾಗುತ್ತಿದೆ’ ಎಂದು ಆರೋಪಿಸಿ ವಕೀಲ ಕೆ.ದಿವಾಕರ್‌ ಹಾಗೂ ಸ್ಥಳೀಯ ನಿವಾಸಿರಾಮಣ್ಣ ಟಿ. ಅವರು ಜಿಲ್ಲಾಧಿಕಾರಿಗೆ ಹಾಗೂ ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದಾರೆ. ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ವಿಶೇಷ ಜಿಲ್ಲಾಧಿಕಾರಿ ಅವರು ದಕ್ಷಿಣ ತಹಶೀಲ್ದಾರ್‌ಗೆ2020ರ ಡಿ. 14ರಂದು ಸೂಚನೆ ನೀಡಿದ್ದರು. ಆದರೆ, ಈವರೆಗೂ ಒತ್ತುವರಿ ತೆರವಿಗೆ ಯಾವುದೇ ಕ್ರಮ ಆಗಿಲ್ಲ.

ಇಲ್ಲಿ ಎಕರೆಗೆ ಮಾರುಕಟ್ಟೆ ಮೌಲ್ಯ ₹20 ಕೋಟಿಯಷ್ಟು ಇದೆ. ಒಟ್ಟು ಈ ಜಾಗದ ಮೌಲ್ಯ ₹500 ಕೋಟಿ
ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ADVERTISEMENT

‘ಕೆಲವು ಅಧಿಕಾರಿಗಳು ಒತ್ತುವರಿದಾರರ ಜತೆಗೆ ಶಾಮೀಲಾಗಿದ್ದಾರೆ. ಹೀಗಾಗಿ, ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಒತ್ತುವರಿ ತೆರವು ಮಾಡಬೇಕು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೆ.ದಿವಾಕರ್‌ ಆಗ್ರಹಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಒತ್ತುವರಿ ತೆರವು ಮಾಡಬೇಕು ಎಂದು ಬೆಂಗಳೂರು ದಕ್ಷಿಣ ಭೂ ನ್ಯಾಯ ಮಂಡಳಿಯು 2016ರಲ್ಲಿ ಆದೇಶ ಹೊರಡಿಸಿತ್ತು.

‘ಚಿಕ್ಕಹನುಮಯ್ಯ ಎಂಬುವವರು ಪಂತರಪಾಳ್ಯ ಗ್ರಾಮಕ್ಕೆ ಜೋಡಿದಾರರು ಆಗಿದ್ದರು. ಅವರಿಗೆ 100 ಎಕರೆ ಜಾಗ ಇತ್ತು. ಈ ಗ್ರಾಮವನ್ನು ಇನಾಂ ಗ್ರಾಮ ಎಂದು 1959ರಲ್ಲಿ ಘೋಷಿಸಲಾಯಿತು. ಆಗ ಜೋಡಿದಾರರೆಲ್ಲ ಜಾಗ ಕಳೆದುಕೊಂಡರು’.

‘ರಾಜ್ಯ ಸರ್ಕಾರಕ್ಕೆ ಮತ್ತೆ ಅರ್ಜಿ ಸಲ್ಲಿಸಿ ಜಾಗ ಮರಳಿ ಪಡೆಯಲು ಅವಕಾಶ ಇತ್ತು. ಚಿಕ್ಕಹನುಮಯ್ಯ ಅವರು ಅರ್ಜಿ ಸಲ್ಲಿಸಿ ಜಾಗ ಪಡೆದರು. ಅದರ ಜತೆಗೆ 24 ಎಕರೆ 37 ಗುಂಟೆ ಜಾಗವನ್ನೂ ವಿಶೇಷ ಜಿಲ್ಲಾಧಿಕಾರಿ ಮಂಜೂರು ಮಾಡಿದರು. ಇದನ್ನು ಪ್ರಶ್ನಿಸಿ ಸಾರ್ವಜನಿಕರು ಮೈಸೂರು ಕಂದಾಯ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು’.

‘ಮಂಜೂರು ಮಾಡಲು ವಿಶೇಷ ಜಿಲ್ಲಾಧಿಕಾರಿ ಅವರಿಗೆ ಅಧಿಕಾರವೇ ಇಲ್ಲ ಎಂದು ಪ್ರಾಧಿಕಾರ ಆದೇಶ ನೀಡಿತ್ತು. ಆದೇಶದಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ಚಿಕ್ಕಹನುಮಯ್ಯ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಇದು ಹಿಡುವಳಿ ಜಾಗವೇ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಇದು ಖರಾಬು ಭೂಮಿ ಎಂದು ಕಂದಾಯ
ಇಲಾಖೆಯ ಅಧಿಕಾರಿಗಳು ವರದಿ ನೀಡಿದ್ದರು.’

‘ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಅರ್ಜಿದಾರರು, ‘ಈ ಜಾಗದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದೆವು’ ಎಂದು ವಾದಿಸಿದ್ದರು. ಇದು ಕೃಷಿ ಭೂಮಿಯೇ ಎಂದು ಪರಿಶೀಲಿಸುವಂತೆ ನ್ಯಾಯಾಲಯ ಸೂಚನೆ ನೀಡಿತ್ತು’.

‘ಚಿಕ್ಕಹನುಮಯ್ಯ ಕುಟುಂಬದ ಅನಂತಸ್ವಾಮಿ ಎಂಬುವವರು ಬೇರೆ ಜಾಗದ ದಾಖಲೆಗಳನ್ನು ಪ್ರಸ್ತುತಪಡಿಸಿ ಸರ್ಕಾರದಿಂದ ಮಂಜೂರಾಗಿದೆ ಎಂದು ವಾದ ಮಂಡಿಸಿದ್ದರು. ಈ ಬಗ್ಗೆಯೂ ಕಂದಾಯ ಇಲಾಖೆ ಪರಿಶೀಲನೆ ನಡೆಸಿದಾಗ, ನಕಲಿ ದಾಖಲೆಗಳನ್ನುಸೃಷ್ಟಿ ಮಾಡಿರುವುದು ಬಹಿರಂಗಗೊಳ್ಳುತ್ತದೆ. ಇದು ಖರಾಬು ಭೂಮಿ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.ಬಳಿಕ ಈ ಜಾಗದ ಒತ್ತುವರಿ ತೆರವು ಮಾಡಲಾಗಿತ್ತು. ಒತ್ತುವರಿ ತೆರವಿನ ವೇಳೆ ಅನಂತಸ್ವಾಮಿ, ‘ಈ ಜಾಗ ಪಿತ್ರಾರ್ಜಿತವಾಗಿ ಬಂದಿದ್ದು, ಜಿಲ್ಲಾಡಳಿತ ಯಾವುದೇನೋಟಿಸ್‌ ನೀಡದೆ ವಶಕ್ಕೆ ಪಡೆದಿದೆ. ಇದು ಕಾನೂನುಬಾಹಿರ’ ಎಂದುಅವರು ಪ್ರತಿ‍ಪಾದಿಸಿದ್ದರು.

ವರದಿ ಸಲ್ಲಿಕೆಗೆ ಜಿಲ್ಲಾಧಿಕಾರಿ ಸೂಚನೆ

ಒತ್ತುವರಿ ಬಗ್ಗೆ ಪರಿಶೀಲಿಸಿ ನಿಯಮದ ಪ್ರಕಾರ ಕ್ರಮ ಕೈಗೊಂಡು ಜಿಲ್ಲಾಧಿಕಾರಿ ಕಚೇರಿಗೆ ಕೂಡಲೇ ವರದಿ ಸಲ್ಲಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರು ಬೆಂಗಳೂರು ದಕ್ಷಿಣ ತಹಶೀಲ್ದಾರ್‌ಗೆ ಸೂಚನೆ ನೀಡಿದ್ದಾರೆ.

ಕ್ರಮದ ಭರವಸೆ ನೀಡಿದ್ದ ಕಾಗೋಡು

‘ಜಿಲ್ಲಾಡಳಿತವು 2016ರ ಜುಲೈನಲ್ಲಿ ಈ ಜಮೀನನ್ನು ವಶಕ್ಕೆ ಪಡೆದಿತ್ತು. ಆ ವ್ಯಕ್ತಿಯು ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್‌ ಆದೇಶ ಮಾಡಿದೆ. ಈ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂದೂ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ಆದರೂ, ಆ ವ್ಯಕ್ತಿ ಆ ಜಾಗದಲ್ಲಿ ಮಣ್ಣು ತುಂಬಿಸಿದ್ದಾರೆ. ಇಲ್ಲಿ ಅನಿಲ ಸಾಗಿಸುವ ಲಾರಿಗಳನ್ನು ನಿಲ್ಲಿಸಲು ಅವಕಾಶ ಮಾಡಿಕೊಟ್ಟು ಪ್ರತಿ ಲಾರಿಗೆ ಇಂತಿಷ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಕಾವಲುಗಾರನ್ನು ನೇಮಿಸಿ, ಆತನಿಗೆ ಶೆಡ್‌ ಕಟ್ಟಿಕೊಟ್ಟಿದ್ದಾರೆ. ದಿನವೊಂದಕ್ಕೆ ಏನಿಲ್ಲವೆಂದೂ ₹2 ಲಕ್ಷ ದಿಂದ ₹2.5 ಲಕ್ಷದಷ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಪಿ.ಆರ್‌.ರಮೇಶ್‌ ಸದನದಲ್ಲಿ ಧ್ವನಿ ಎತ್ತಿದ್ದರು.

ಆಗ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ, ‘ಬಿ–ಖರಾಬು ಜಾಗವನ್ನು ಈ ರೀತಿ ಬಳಸಿಕೊಳ್ಳಲು ಅವಕಾಶವೇ ಇಲ್ಲ. ಇಂದೇ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಇದನ್ನು ತಡೆಯುವಂತೆ ಸೂಚಿಸುತ್ತೇನೆ’ ಎಂದು ಭರವಸೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.