ADVERTISEMENT

65 ವಾರ್ಡ್‌ಗಳಲ್ಲಿ ಅಂತರ್ಜಲ ಕುಸಿತ: ಕೆರೆಗೆ ನೀರು ತುಂಬಿಸಲು ಮುಂದಾದ ಜಲಮಂಡಳಿ

ಉಮೇಶ ಭಟ್ಟ ಪಿ.ಎಚ್.
Published 26 ಫೆಬ್ರುವರಿ 2026, 23:40 IST
Last Updated 26 ಫೆಬ್ರುವರಿ 2026, 23:40 IST
   

ಬೆಂಗಳೂರು: ಬೇಸಿಗೆ ಆರಂಭದಲ್ಲಿಯೇ ನಗರದ 65 ವಾರ್ಡ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದನ್ನು ವಿಜ್ಞಾನಿಗಳು ಹಾಗೂ ತಜ್ಞರ ತಂಡ ಪತ್ತೆ ಮಾಡಿದೆ.

ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಸಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿಗಳು ದತ್ತಾಂಶಗಳನ್ನು ಸಂಗ್ರಹಿಸಿದಾಗ ವಿಜಯನಗರ, ಶಿವಾಜಿನಗರ, ಚಾಮರಾಜಪೇಟೆ, ಕೆಂಗೇರಿ, ಕೋರಮಂಗಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಂತರ್ಜಲ ಕುಸಿತ ಕಂಡಿರುವುದು ಕಂಡು ಬಂದಿದೆ. 

ಕೇಂದ್ರ ಅಂತರ್ಜಲ ಸಂಸ್ಥೆ ಅಧಿಕಾರಿಗಳು, ಕರ್ನಾಟಕ ಅಂತರ್ಜಲ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರ ತಂಡವು ಮಾಹಿತಿ ಕಲೆ ಹಾಕಿದೆ. ಈ ಮಾಹಿತಿ ಆಧರಿಸಿ ಸಮಸ್ಯೆ ಇರುವ ಕಡೆಗಳಲ್ಲಿ ನೀರಿನ ಸಂಪರ್ಕ ಹೆಚ್ಚಿಸುವುದು ಸೇರಿದಂತೆ ತುರ್ತು ಕಾರ್ಯಕ್ರಮಗಳನ್ನು ರೂಪಿಸಲು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ತೀರ್ಮಾನಿಸಿದೆ.

ADVERTISEMENT

ನೀರಿನ ಸಂಪರ್ಕಕ್ಕೆ ಅನುಮತಿ: 

ನಗರದಲ್ಲಿ 15 ಲಕ್ಷ ನೀರಿನ ಸಂಪರ್ಕಗಳನ್ನು ಕಲ್ಪಿಸಲಾಗಿದೆ. ಕಾವೇರಿ 5ನೇ ಹಂತದ ಯೋಜನೆ ಜಾರಿಯಾದ ನಂತರ ಅಕ್ರಮ ನೀರು ಬಳಕೆದಾರರನ್ನು ಪತ್ತೆ ಹಚ್ಚಿ ಸಂಪರ್ಕ ನೀಡಲು ಜಲಮಂಡಳಿ ಅಭಿಯಾನ ನಡೆಸಿದ್ದು, ಬೇಸಿಗೆಯಲ್ಲಿ ಇದನ್ನು ಇನ್ನಷ್ಟು ತೀವ್ರಗೊಳಿಸಲಿದೆ.

ಅಂತರ್ಜಲ ಸಮಸ್ಯೆ ಕಂಡು ಬಂದಿರುವ 65 ವಾರ್ಡ್‌ಗಳಲ್ಲಿ ಆದ್ಯತೆ ಮೇರೆಗೆ ನೀರಿನ ಸಂಪರ್ಕ ನೀಡಲಾಗುತ್ತದೆ. ಅಪಾರ್ಟ್‌ಮೆಂಟ್‌ಗಳಿಗೆ ತ್ವರಿತವಾಗಿ ನೀರಿನ ಸಂಪರ್ಕ ನೀಡುವಂತೆಯೂ ಸೂಚಿಸಲಾಗಿದೆ. ಈ ವಾರ್ಡ್‌ಗಳಲ್ಲಿ ನೀರಿನ ಸಂಪರ್ಕಕ್ಕೆ ಬೇಕಾದ ಕೊಳವೆ ಮಾರ್ಗ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳುವಂತೆಯೂ ಅಧಿಕಾರಿಗಳಿಗೆ ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್‌ ಮನೋಹರ್‌ ಆದೇಶಿಸಿದ್ದಾರೆ.

‘ನಗರದ ಎಲ್ಲಾ ಪ್ರದೇಶಗಳಿಗೂ ಸಮರ್ಪಕ ರೀತಿಯಲ್ಲಿ ನೀರು ವಿತರಣೆಯಾಗಬೇಕು. ನೀರಿನ ಉಳಿತಾಯಕ್ಕಾಗಿ ಏರಿಯೇಟರ್‌ಗಳ  ಅಳವಡಿಕೆಗೆ ಹೆಚ್ಚಿನ ಗಮನ ಹರಿಸಬೇಕು. ಕುಡಿಯುವ ನೀರನ್ನು ವಾಹನ ಶುದ್ಧೀಕರಣ, ತೋಟಗಾರಿಕೆ ಹಾಗೂ ಮನೆ ಅಂಗಳ ತೊಳೆಯಲು ಬಳಸಿದರೆ ದಂಡ ವಿಧಿಸಬೇಕು. ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನೇ ಬಳಸುವಂತೆ ನಿಗಾವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

‘ಹಿಂದಿನ ವರ್ಷಗಳಲ್ಲಿ ಸಮಸ್ಯೆ ಎದುರಾದಾಗ 12 ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲಾಗಿತ್ತು. ಈ ಬಾರಿ ಇನ್ನೂ ಎರಡು ಕೆರೆಗಳನ್ನು ಸೇರಿಸಿಕೊಂಡು ನೀರು ತುಂಬುವ ಕ್ರಿಯಾಯೋಜನೆ ರೂಪಿಸಲಾಗಿದೆ’ ಎಂದು ಜಲಮಂಡಳಿ ಅಧಿಕಾರಿ ತಿಳಿಸಿದರು.

ಬೇಸಿಗೆ ವೇಳೆ ನೀರು ಸರಬರಾಜು ಸಂಬಂಧ ನಿರ್ವಹಣಾ ವಿಭಾಗದ ಸಭೆಯಲ್ಲಿ ಹಿರಿಯ ಅಧಿಕಾರಿಗಳು ನೀಡುವ ಕ್ರಿಯಾಯೋಜನೆಗಳ ಕುರಿತು ಚರ್ಚಿಸಲಾಗುತ್ತದೆ
ಡಾ.ರಾಮಪ್ರಸಾತ್‌ ಮನೋಹರ್‌ ಅಧ್ಯಕ್ಷ ಬೆಂಗಳೂರು ಜಲಮಂಡಳಿ

ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್‌ ಮನೋಹರ್‌

ಯಾವ ವಾರ್ಡ್‌ನಲ್ಲಿ ಅಂತರ್ಜಲ ಕುಸಿತ?
ಜಕ್ಕೂರು ದೊಡ್ಡ ಬೊಮ್ಮಸಂದ್ರ ಶೆಟ್ಟಿಹಳ್ಳಿ ಮಲ್ಲಸಂದ್ರ ಟಿ.ದಾಸರಹಳ್ಳಿ ಜಾಲಹಳ್ಳಿ ಸಂಜಯನಗರ ಹೆಬ್ಬಾಳ ನಾಗವಾರ ಹೊರಮಾವು ರಾಮಮೂರ್ತಿ ನಗರ ಕಮ್ಮನಹಳ್ಳಿ ಕಾಡುಗೊಂಡನಹಳ್ಳಿ ಕಾವಲ್‌ ಬೈರಸಂದ್ರ ಮನೋರಾಯನಪಾಳ್ಯ ದೊಡ್ಡ ಬಿದರಕಲ್ಲು ಪೀಣ್ಯ ಕೈಗಾರಿಕಾ ಪ್ರದೇಶ ನಂದಿನಿ ಲೇಔಟ್‌ ಜೆ.ಸಿ. ನಗರ ಲಿಂಗರಾಜಪುರ ಕೆ.ಆರ್‌. ಪುರ ಎ.ನಾರಾಯಣಪುರ ಕಾಡು ಮಲ್ಲೇಶ್ವರ ಮಹಾಲಕ್ಷ್ಮಿಪುರ ಶಕ್ತಿ ಗಣಪತಿ ನಗರ ಶಂಕರಮಠ ಗಾಯತ್ರಿನಗರ ಹೊಯ್ಸಳನಗರ ಶಿವಾಜಿನಗರ ಗಾಂಧಿನಗರ ದಯಾನಂದನಗರ ಬಸವೇಶ್ವರನಗರ ವೃಷಭಾವತಿ ನಗರ ಅಗ್ರಹಾರ ದಾಸರಹಳ್ಳಿ ಅಗರ ಬಿನ್ನಿಪೇಟೆ ಕೆಂಪಾಪುರ ಅಗ್ರಹಾರ ವಿಜಯನಗರ ಹೊಸಹಳ್ಳಿ ಮಾರುತಿ ಮಂದಿರ ಮೂಡಲಪಾಳ್ಯ ನಾಗರಬಾವಿ ನಾಯಂಡಹಳ್ಳಿ ಛಲವಾದಿಪಾಳ್ಯ ಚಾಮರಾಜಪೇಟೆ ಸಿದ್ದಾಪುರ ಕೋರಮಂಗಲ ಶ್ರೀನಗರ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ದೀಪಾಂಜಲಿ ನಗರ ಕೆಂಗೇರಿ ಹೊಸಕೆರೆಹಳ್ಳಿ ಗಿರಿನಗರ ಕತ್ರಿಗುಪ್ಪೆ ಕರಿಸಂದ್ರ ಪಟ್ಟಾಭಿರಾಮನಗರ ಗುರಪ್ಪನಪಾಳ್ಯ ಮಡಿವಾಳ ಬೊಮ್ಮನಹಳ್ಳಿ ಬಿಟಿಎಂ ಲೇಔಟ್‌ ಸಾರಕ್ಕಿ ಕುಮಾರಸ್ವಾಮಿ ಲೇಔಟ್‌ ಯಲಚೇನಹಳ್ಳಿ ಗೊಟ್ಟಿಗೆರೆ ಕೋಣನಕುಂಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.