ಬಂಧನ
(ಪ್ರಾತಿನಿಧಿಕ ಚಿತ್ರ)
ಪ್ರಜಾವಾಣಿ ವಾರ್ತೆ
ಬೆಂಗಳೂರು: ಜಿಮ್‌ಗೆ ನುಗ್ಗಿ ತರಬೇತುದಾರರೊಬ್ಬರಿಗೆ ಥಳಿಸಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುಸ್ಕೂರಿನ ಗೌತಮ್(32), ಗೌತಮ್(30) ಮತ್ತು ಅರುಣ್(30) ಬಂಧಿತರು.
ಜಿಮ್ ತರಬೇತುದಾರ, ಆನೇಕಲ್ ನಿವಾಸಿ ಸಂದೀಪ್ ಅವರ ಮೇಲೆ ಸೆ.23ರಂದು ಆರೋಪಿಗಳು ಹಲ್ಲೆ ನಡೆಸಿ ಪರಾರಿ ಆಗಿದ್ದರು. ಸಂದೀಪ್ ಅವರ ಸಂಬಂಧಿಕರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.
ಸಂದೀಪ್ ಅವರು ಹೆಬ್ಬಗೋಡಿಯಲ್ಲಿ ಜಿಮ್ ನಡೆಸುತ್ತಿದ್ದಾರೆ. ಅರುಣ್ ಅವರ ಸಹೋದರಿಯನ್ನು ಪರಿಚಯಿಸಿಕೊಂಡಿದ್ದ ಸಂದೀಪ್, ಅವರೊಂದಿಗೆ ಚಾಟಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದು ಅರುಣ್, ಸಂದೀಪ್ ಅವರಿಗೆ ಎಚ್ಚರಿಕೆ ನೀಡಿದ್ದ. ಆದರೂ ಸಂದೀಪ್ ಚಾಟಿಂಗ್ ಮುಂದುವರಿಸಿದ್ದರು. ಸೆ.23ರಂದು ತನ್ನ ಸ್ನೇಹಿತರ ಜತೆ ಜಿಮ್‌ಗೆ ಬಂದಿದ್ದ ಅರುಣ್, ಸಂದೀಪ್ ಅವರ ಮೇಲೆ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸಂದೀಪ್ ಅವರನ್ನು ಜಿಮ್‌ನಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಮೂಲಗಳು ಹೇಳಿವೆ.
‘ಸಂದೀಪ್ ಅವರು ಅಪಾಯದಿಂದ ಪಾರಾಗಿದ್ದಾರೆ. ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.