ಬೆಂಗಳೂರು: ಹೆಲ್ಮೆಟ್ ಮಾರಾಟ ಮಳಿಗೆಗಳ ಮೇಲೆ ಪಶ್ಚಿಮ ವಿಭಾಗದ ಸಂಚಾರ ಪೊಲೀಸರು, ಆರ್‌ಟಿಒ ಅಧಿಕಾರಿಗಳು ಹಾಗೂ ಕಾನೂನು ಮಾಪನ ಇಲಾಖೆಯ ಅಧಿಕಾರಿಗಳು ಜಂಟಿ ದಾಳಿ ನಡೆಸಿ ಕಳಪೆ ಗುಣಮಟ್ಟ ಹಾಗೂ ಅರ್ಧ ಹೆಲ್ಮೆಟ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಆರು ಮಳಿಗೆಗಳ ಮಾಲೀಕರಿಗೆ ತಲಾ ₹50 ಸಾವಿರ ದಂಡ ವಿಧಿಸಿದ್ದಾರೆ.
ಕಳಪೆ ಗುಣಮಟ್ಟ ಮತ್ತು ಅರ್ಧ ಹೆಲ್ಮೆಟ್ ಧರಿಸಿ ಸಾಗುವಾಗ ರಸ್ತೆ ಅಪಘಾತಗಳು ಸಂಭವಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಹಾನಿಯಾಗುತ್ತಿತ್ತು. ನಿಷೇಧವಿದ್ದರೂ ಕಳಪೆ ಗುಣಮಟ್ಟ ಹಾಗೂ ಅರ್ಧ ಹೆಲ್ಮೆಟ್ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯೂ ಕಾರ್ಯಾಚರಣೆ ತಂಡಕ್ಕೆ ಸಿಕ್ಕಿತ್ತು. ಅದನ್ನು ಆಧರಿಸಿ ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣವರ್ ಅವರ ನೇತೃತ್ವದಲ್ಲಿ ಜಂಟಿ ದಾಳಿ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.
ಸಿದ್ದಯ್ಯ ರಸ್ತೆ, ಕಲಾಸಿಪಾಳ್ಯ ರಸ್ತೆ, ಲಾಲ್‌ಬಾಗ್ ರಸ್ತೆ, ಮಾಗಡಿ ರಸ್ತೆ, ಸುಮನಹಳ್ಳಿ, ವಿಜಯನಗರ, ಅಗ್ರಹಾರ ದಾಸರಹಳ್ಳಿ, ನಾಗರಭಾವಿ, ಹೊರ ವರ್ತುಲ ರಸ್ತೆ ಸೇರಿದಂತೆ ಒಟ್ಟು 19 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಮಾಪನ ಇಲಾಖೆಯು ಆರು ಅಂಗಡಿಗಳಿಗೆ ತಲಾ ₹50 ಸಾವಿರ ದಂಡ ವಿಧಿಸಿದೆ. ಜೊತೆಗೆ, ದಿ ಲೀಗಲ್ ಮೆಟ್ರಾಲಜಿ ಕಾಯ್ದೆ 2009 ಕಲಂ 15ರ ಅಡಿ (ಮಾಪನಶಾಸ್ತ್ರ ಕಾಯ್ದೆ) ಅಡಿ ನೋಟಿಸ್ ಜಾರಿ ಮಾಡಲಾಗಿದೆ. 13 ಅಂಗಡಿ ಮಾಲೀಕರಿಗೆ ಕೋರ್ಟ್ನಲ್ಲಿ ದಂಡ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಇದೇ ವೇಳೆ ಕಳಪೆ ಹಾಗೂ ಅರ್ಧ ಹೆಲ್ಮೆಟ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳಪೆ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ 38 ಸವಾರರಿಗೆ ದಂಡ ವಿಧಿಸಿ, ಚಾಲನಾ ಪರವಾನಗಿ ಅಮಾನತು ಮಾಡುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮೋಟಾರು ವಾಹನ ಕಾಯ್ದೆಯ ಅನ್ವಯ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಐಎಸ್ಐ ಮಾರ್ಕ್‌ನ ಹೆಲ್ಮೆಟ್ ಅನ್ನು ಧರಿಸಬೇಕು. ವಾಹನ ಸವಾರರು ಮತ್ತು ಹಿಂಬದಿ ಸವಾರರು ಪೂರ್ಣ ಹೆಲ್ಮೆಟ್ ಧರಿಸುವುದೂ ಕಡ್ಡಾಯ. ಈ ನಿಯಮ ಉಲ್ಲಂಘಿಸಿದ ಸವಾರರನ್ನು ಪತ್ತೆಹಚ್ಚಿ ಎಚ್ಚರಿಕೆ ನೀಡಿ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.