ADVERTISEMENT

ಬೈಕ್‌ನಲ್ಲಿ ಬಂದು ಮನೆಗಳ್ಳತನ: ತಲೆ ಮರೆಸಿಕೊಂಡಿರುವ ಆರೋಪಿ ವಿರುದ್ಧ 40 ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 22:30 IST
Last Updated 20 ಜನವರಿ 2026, 22:30 IST
ಆರೋಪಿಯಿಂದ ವಶಪಡಿಸಿಕೊಂಡ ಚಿನ್ನಾಭರಣ
ಆರೋಪಿಯಿಂದ ವಶಪಡಿಸಿಕೊಂಡ ಚಿನ್ನಾಭರಣ   

ಬೆಂಗಳೂರು: ಮನೆಗಳ ಬೀಗ ಒಡೆದು ಚಿನ್ನಾಭರಣಗಳನ್ನು ಕಳ್ಳತನ ಮಾಡಿ, ಮಾರಾಟ ಮಾಡಿದ್ದ ಆರೋಪಿಯನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರದ ಶ್ರೀಕಾಂತ್ (36) ಎಂಬಾತನನ್ನು ಬಂಧಿಸಿ, 348 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಸೇರಿ ₹42 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.

ಕೃತ್ಯದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ ಸಿದ್ದು ಅಲಿಯಾಸ್ ನಾಗರಾಜ್‌ ಬಂಧನಕ್ಕೆ ಶೋಧ ಮುಂದುವರಿದಿದ್ದು, ಈತನ ವಿರುದ್ಧ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ 40 ಪ್ರಕರಣಗಳು ದಾಖಲಾಗಿವೆ. ಈತನಿಂದಲೂ ಆಭರಣ ವಶಪಡಿಸಿಕೊಳ್ಳಬೇಕಾಗಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಆಗಸ್ಟ್‌ 9ರಂದು ಠಾಣಾ ವ್ಯಾಪ್ತಿಯ ಅಂಚೆಪಾಳ್ಯ ಗ್ರಾಮದ ನಿವಾಸಿಯೊಬ್ಬರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ತಮಿಳುನಾಡಿಗೆ ಹೋಗಿದ್ದರು. ಆಗ ಮನೆಯ ಬೀಗ ಒಡೆದು ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು.

ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿ, ಬಾತ್ಮಿದಾರರ ಮಾಹಿತಿ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನದ ಸುಳಿವಿನ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸಂಬಂಧಿ ಜತೆ ಸೇರಿ ಕಳ್ಳತನ ಮಾಡಿರುವುದು ಹಾಗೂ ಮಾದನಾಯಕನಹಳ್ಳಿಯ ಮತ್ತೊಂದು ಮನೆಯಲ್ಲೂ ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ಕೃತ್ಯಕ್ಕೆ ಬಳಸಿದ್ದ ಬೈಕ್‌ಗೆ ನಂಬರ್ ಪ್ಲೇಟ್ ಇರಲಿಲ್ಲ. ರಾತ್ರಿ ವೇಳೆ ಬೈಕ್​ನಲ್ಲಿ ಬಂದು ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗುತ್ತಿದ್ದರು. ವಾಹನದ ಎಂಜಿನ್ ಮತ್ತು ಚಾಸಿ ಸಂಖ್ಯೆಯನ್ನು ಪರಿಶೀಲಿಸಿದಾಗ, ಕಳ್ಳತನಕ್ಕೆ ಬಳಸಿರುವುದು ಇದೇ ವಾಹನ ಎಂಬುದು ಗೊತ್ತಾಯಿತು ಎಂದರು.

ಆರೋಪಿ ನೀಡಿದ ಮಾಹಿತಿ ಆಧರಿಸಿ, ಪಾಡವಪುರ ಮತ್ತು ಮೈಸೂರಿನ ಆಭರಣ ಅಂಗಡಿಗಳಲ್ಲಿ ಅಡವಿಟ್ಟಿದ್ದ 348 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಯಿತು. ಈತನ ಬಂಧನದಿಂದ ಠಾಣೆಯ ಎರಡು ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.