ADVERTISEMENT

ಬೆಂಗಳೂರು: ಪತ್ನಿ ಕೊಂದ ಪತಿ, ಕೆಲಸಗಾರನ ಬಂಧನ

ಉಸಿರುಗಟ್ಟಿಸಿ ಕೊಲೆ ಮಾಡಿ ನೇಣು ಹಾಕಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 23:30 IST
Last Updated 21 ಜನವರಿ 2026, 23:30 IST
ವಿರೂಪಾಕ್ಷ 
ವಿರೂಪಾಕ್ಷ    

ಬೆಂಗಳೂರು: ಪತ್ನಿ ಕೊಲೆ ಮಾಡಿದ್ದ ಪತಿ ಹಾಗೂ ಅವರೊಂದಿಗೆ ಕೆಲಸ ಮಾಡುತ್ತಿದ್ದ ಯುವಕನನ್ನು ಆರ್‌.ಆರ್‌ ನಗರ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್‌ ತಾಲ್ಲೂಕು ಸಂತೆಮಾವತ್ತೂರು ಗ್ರಾಮದ ಎಸ್.ಆಶಾ ಅವರನ್ನು ಜ.10ರಂದು ಆರೋಪಿಗಳು ಕೊಲೆ ಮಾಡಿ, ನೇಣುಹಾಕಿದ್ದರು.

ರಾಜರಾಜೇಶ್ವರಿ ನಗರದ ಚನ್ನಸಂದ್ರದ ನಿವಾಸಿ, ಆಶಾ ಅವರ ಪತಿ ವಿರೂಪಾಕ್ಷಗೌಡ (29) ಹಾಗೂ ಗುಟ್ಟಹಳ್ಳಿಯ ಪುಂಡಲೀಕ ಜಾನಪ್ಪ ಲಮಾಣಿ (19) ಬಂಧಿತರು.

ಆಶಾ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಅವರ ಸಹೋದರ ಅರುಣ್‌ಕುಮಾರ್ ಅವರು ನೀಡಿದ ದೂರಿನ ಮೇಲೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ತುಮಕೂರಿನ ವಿರೂಪಾಕ್ಷಗೌಡ ಅವರು ಆಶಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ರಾಜರಾಜೇಶ್ವರಿ ನಗರದಲ್ಲಿ ದಂಪತಿ ನೆಲಸಿದ್ದರು. ವಿರೂಪಾಕ್ಷ ಅವರು ಆರ್‌ಆರ್ ನಗರದಲ್ಲಿ ಚಾಟ್ಸ್ ಅಂಗಡಿ ನಡೆಸುತ್ತಿದ್ದರು. ಅದೇ ಅಂಗಡಿಯಲ್ಲಿ ವಿಜಯಪುರದ ಮುದ್ದೇಬಿಹಾಳದ ಗೆದ್ದಲಮರಿ ಗ್ರಾಮದ ಪುಂಡಲೀಕ ಜಾನಪ್ಪ ಅವರು ಕೆಲಸ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಆಶಾ ಅವರನ್ನು ವಿರೂಪಾಕ್ಷ ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಕೆಲಸಕ್ಕೂ ಹೋಗುತ್ತಿರಲಿಲ್ಲ. ಆಶಾ ಅವರೇ ಕೆಲಸಕ್ಕೆ ಹೋಗಿ ಮನೆಯ ಬಾಡಿಗೆ ಕಟ್ಟುತ್ತಿದ್ದರು. ಆಶಾ ದುಡಿದ ಹಣವನ್ನೂ ಪತಿ ಮದ್ಯ ಸೇವನೆಗೆ ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದರು.

ದಂಪತಿಯ ಮಧ್ಯೆ ಹೊಂದಾಣಿಕೆ ಇಲ್ಲದೇ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯು ವಿಚಾರಣೆ ಹಂತದಲ್ಲಿತ್ತು. ಜ.10ರಂದು ದಂಪತಿ ನಡುವೆ ಜಗಳ ವಿಕೋಪಕ್ಕೆ ಹೋಗಿ ವಿರೂಪಾಕ್ಷ ಹಾಗೂ ಪುಂಡಲೀಕ ಸೇರಿಕೊಂಡು ಆಶಾ ಅವರನ್ನು ಕೊಲೆ ಮಾಡಿ ನೇಣು ಹಾಕಿದ್ದರು.

ಮರಣೋತ್ತರ ಪರೀಕ್ಷೆ ನಡೆಸಿದ್ದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ವರದಿ ನೀಡಿದ್ದರು. ವರದಿ ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಪುಂಡಲಿಕ ಜಾನಪ್ಪ ಲಮಾಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.