ಬೆಂಗಳೂರು: 'ಬೆಂಗಳೂರು ನಗರವು ಯಾವತ್ತೂ ಅತ್ಯುತ್ತಮ ಪ್ರತಿಭೆ, ಉತ್ತಮ ಹವಾಮಾನ ಹಾಗೂ ಉತ್ಸಾಹಭರಿತವಾಗಿದೆ. ಆದರೆ ಮೂಲಸೌಕರ್ಯ ಸಮಸ್ಯೆಯನ್ನು ಬಗೆಹರಿಸುವ ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇತ್ತು. ಅದನ್ನೀಗ ಕಾಂಗ್ರೆಸ್ ಸರ್ಕಾರವು ಸರಿಪಡಿಸಿಕೊಳ್ಳುತ್ತಿದೆ' ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು (ಗುರುವಾರ) ಹೇಳಿದ್ದಾರೆ.
ಬೆಂಗಳೂರು ನಗರ ಅತ್ಯುತ್ತಮ ಪ್ರತಿಭೆ ಹಾಗೂ ಹವಾಮಾನವನ್ನು ಪಡೆದಿದೆ. ಆದರೆ ಕೆಟ್ಟ ಮೂಲಸೌಕರ್ಯವನ್ನು ಹೊಂದಿದೆ ಎಂಬ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಡಿಕೆಶಿ ಈ ರೀತಿಯಾಗಿ ಹೇಳಿದ್ದಾರೆ.
'ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತೇವೆ. ಬೆಂಗಳೂರಿನಲ್ಲಿ ಉತ್ತಮ ಪ್ರತಿಭೆ, ಹವಾಮಾನ ಹಾಗೂ ಉತ್ಸಾಹಭರಿತವಾಗಿದೆ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿತ್ತು. ಅದನ್ನೀಗ ನಾವು ಸರಿಪಡಿಸಲು ಯತ್ನಿಸುತ್ತಿದ್ದೇವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದೊಂದಿಗೆ (ಜಿಬಿಎ) ಈ ದೂರದೃಷ್ಟಿಯನ್ನು ನನಸುಗೊಳಿಸುವ ಉತ್ತಮ ಅವಕಾಶವಿದೆ. ನಾವದನ್ನು ಸಾಕಾರಗೊಳಿಸಲಿದ್ದೇವೆ' ಎಂದು ಡಿಕೆಶಿ ತಿಳಿಸಿದ್ದಾರೆ.
'ಈ ಎಲ್ಲ ಸವಾಲುಗಳನ್ನು ತುರ್ತಾಗಿ ಪರಿಗಣಿಸಲಾಗಿದೆ. ನಮ್ಮ ಬೆಂಗಳೂರು ಯಾವಾಗಲೂ ನಾವೀನ್ಯತೆ, ಅವಕಾಶಗಳಿಗೆ ಹೆಸರುವಾಸಿಯಾಗಿದೆ. ನಗರದಲ್ಲಿ ಉತ್ತಮ ಮೂಲಸೌಕರ್ಯ ಒದಗಿಸಲು ನಾವು ಬದ್ಧರಾಗಿದ್ದೇವೆ' ಎಂದು ತಿಳಿಸಿದ್ದಾರೆ.
ಬೆಂಗಳೂರಿಗೆ ಹೊಸ ಅಧ್ಯಾಯ ರೂಪಿಸಲು ನಾವೆಲ್ಲರೂ ಸೇರಿ ಭವಿಷ್ಯವನ್ನು ನಿರ್ಮಿಸಬೇಕಿದೆ ಎಂದು ಡಿಕೆಶಿ ಪ್ರತಿಪಾದಿಸಿದ್ದಾರೆ.
'ನಗರದೆಲ್ಲೆಡೆ ಕಸ ಹಾಗೂ ಕಳಪೆ ರಸ್ತೆಗಳನ್ನು ಸರಿಪಡಿಸಿದರೆ ಬೆಂಗಳೂರು ವಿಶ್ವದ ಅತ್ಯುತ್ತಮ ನಗರಗಳಲ್ಲಿ ಒಂದಾಗಬಹುದು. ಜಿಬಿಎ ಮೂಲಕ ಇದಕ್ಕೊಂದು ಉತ್ತಮ ಅವಕಾಶವಿದೆ' ಎಂದು ಡಿಕೆಶಿ ಅವರನ್ನು ಟ್ಯಾಗ್ ಮಾಡಿ ಮಜುಮ್ದಾರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.