ರಾಜರಾಜೇಶ್ವರಿನಗರ: ಐಟಿಐ ಬಡಾವಣೆಯಲ್ಲಿರುವ ಉದ್ಯಾನದ ಮುಖ್ಯದ್ವಾರವೇ ಕಿತ್ತು ಬಂದಿದೆ, ಪಾದಚಾರಿ ಮಾರ್ಗ ಕಿತ್ತುಹೋಗಿ, ಗುಂಡಿಗಳು ಬಿದ್ದಿವೆ, ತಂತಿಬೇಲಿ ಕಿತ್ತುಹೋಗಿ, ಶೌಚಾಲಯದ ಕಡೆ ಸುಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿ ವರ್ಷಗಳು ಕಳೆದರೂ ಬಿಬಿಎಂಪಿ ಅಧಿಕಾರಿಗಳು ಇತ್ತ ತಿರುಗಿ ನೋಡುತ್ತಿಲ್ಲ.
‘ಗೇಟು ಕಿತ್ತುಹೋಗಿ ಐದು ವರ್ಷವಾಗಿದೆ. ಈ ಬಗ್ಗೆ ಬಿಬಿಎಂಪಿಗೆ ಹಲವು ಬಾರಿ ದೂರು ಸಲ್ಲಿಸಲಾಗಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ವಾಯುವಿಹಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
‘ಉದ್ಯಾನದಲ್ಲಿ ಅಳವಡಿಸಿರುವ ಬೆಂಚುಗಳು ಮುರಿದಿಬಿದ್ದಿವೆ. ಪಾದಚಾರಿ ಮಾರ್ಗ ಅಲ್ಲಲ್ಲಿ ಕಿತ್ತುಹೋಗಿ, ಗುಂಡಿಗಳು ಬಿದ್ದಿದ್ದರೂ ಉದ್ಯಾನ ನಿರ್ವಹಣೆಗೆ ಲಕ್ಷಾಂತರ ವೆಚ್ಚ ಮಾಡುವ ಬಿಬಿಎಂಪಿ ಎಂಜಿನಿಯರ್‌ಗಳು ಇತ್ತ ಗಮನಹರಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಯಾನ ಅವ್ಯವಸ್ಥೆಯ ಆಗರವಾಗಿದೆ‘ ಎಂದು ಸ್ಥಳೀಯರು ದೂರಿದರು.
ಸ್ಥಳೀಯ ನಿವಾಸಿ ಪದ್ಮಾ ಭಟ್ ಮಾತನಾಡಿ, ‘ಐಟಿಐ, ಎಂಪಿಎಂ ಬಡಾವಣೆಯಲ್ಲಿರುವ ಉದ್ಯಾನಗಳ ನಿರ್ವಹಣೆ ಸರಿಯಾಗಿಲ್ಲ. ಹಲವು ವರ್ಷಗಳು ಕಳೆದಿದ್ದರೂ ಕಿತ್ತುಹೊಗಿರುವ ಬೆಂಚು, ತಂತಿಬೇಲಿಯನ್ನು ದುರಸ್ತಿಮಾಡಿಲ್ಲ. ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲ. ಮೂಲಸೌಕರ್ಯ ಮರೀಚಿಕೆಯಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜಾವಾಬ್ದಾರಿಯಿಂದ ಉದ್ಯಾನದಲ್ಲಿ ಅಸಹ್ಯಕರ ವಾತಾವರಣ ನಿರ್ಮಾಣವಾಗಿದೆ’ ಎಂದರು.
‘ಆರೋಗ್ಯ, ಮಾನಸಿಕ ನೆಮ್ಮದಿಗಾಗಿ ವಯಸ್ಸಿನ ಅಂತರವಿಲ್ಲದೆ ಪ್ರತಿನಿತ್ಯ ವಾಯುವಿಹಾರ ನಡೆಸಲು ವೃದ್ದರು, ಮಧುಮೇಹಿಗಳು, ಬಾಲಕರು ಉದ್ಯಾನಕ್ಕೆ ಬರುತ್ತಾರೆ. ನಂತರ ಕೊಂಚ ವಿಶ್ರಾಂತಿ ಪಡೆಯಲೂ ಇಲ್ಲಿ ಸಾಧ್ಯವಿಲ್ಲದಂತಾಗಿದೆ’ ಎಂದು ವಾಯುವಿಹಾರಿ ಸುನೀಲ್ ಹೇಳಿದರು.
ತೋಟಗಾರಿಕೆ ಅಧೀಕ್ಷಕ ಎಸ್.ಎಚ್.ಕೇಶವ ಮಾತನಾಡಿ, ‘ಬಿಬಿಎಂಪಿಯ ಯೋಜನಾ ವಿಭಾಗದಿಂದ ನಮ್ಮ ವಿಭಾಗಕ್ಕೆ ಉದ್ಯಾನ ನಿರ್ವಹಣೆ ಹಸ್ತಾಂತರ ಪ್ರಕ್ರಿಯೆಯಲ್ಲಿದೆ. ಇದು ಮುಗಿದ ಮೇಲೆ, ಕ್ರಿಯಾಯೋಜನೆ ತಯಾರಿಸಿ ಉದ್ಯಾನ ಅಭಿವೃದ್ಧಿ ಮಾಡಲಾಗುವುದು’ ಎಂದರು.
ಆರ್.ಆರ್. ನಗರ ವಲಯ ಜಂಟಿ ಆಯುಕ್ತೆ ಆರತಿ ಆನಂದ್, ‘ವಲಯ ಆಯುಕ್ತರ ಜೊತೆ ಶೀಘ್ರದಲ್ಲಿಯೇ ಸಭೆ ನಡೆಸಿ ಎಲ್ಲಾ ಉದ್ಯಾನಗಳ ಅಭಿವೃದ್ದಿ, ದುರಸ್ತಿಗೆ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.