ಬೆಂಗಳೂರು: ‘ಬೆಂಗಳೂರು ಕರಗ’ ಏಪ್ರಿಲ್ 12ರಂದು ನಡೆಯಲಿದ್ದು, ಇದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಆರಂಭಿಸಬೇಕು ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್ ಸೂಚಿಸಿದರು.
ಕರಗ ಮಹೋತ್ಸವಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಕರಗ ಸಮಿತಿಯ ಪದಾಧಿಕಾರಿಗಳೊಂದಿಗೆ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕರಗದ ಕೇಂದ್ರ ಸ್ಥಳವಾದ ಧರ್ಮರಾಯಸ್ವಾಮಿ ದೇವಸ್ಥಾನದ ರಸ್ತೆಯ ಸಮೀಪ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ ಮಾತನಾಡಿ, ಕರಗ ಶಕ್ತ್ಯೋತ್ಸವ ಹೊರಡುವ ಮಾರ್ಗದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳನ್ನು ದುರಸ್ತಿ ಮಾಡಬೇಕು. ಉತ್ಸವ ಸಾಗುವ ರಸ್ತೆಗಳಲ್ಲಿನ ಬೀದಿ ದೀಪಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ, ಎಲ್ಲಾ ಕಡೆ ವಿದ್ಯುತ್ ದೀಪಗಳ ಅಳವಡಿಸಬೇಕು. ವಿದ್ಯುತ್ ಸಂಪರ್ಕ ಕಡಿತಗೊಳ್ಳದಂತೆ ಬೆಸ್ಕಾಂ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.
ಕರಗ ಮಹೋತ್ಸವವು ಏಪ್ರಿಲ್ 4ರಿಂದ 14ರವರೆಗೆ ನಡೆಯಲಿದ್ದು, ಘನತ್ಯಾಜ್ಯ ವಿಭಾಗದಿಂದ ಹೆಚ್ಚುವರಿಯಾಗಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ಸ್ವಚ್ಛತೆ ಕಾರ್ಯ ನಿರ್ವಹಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆ ಇರಬೇಕು. ಜಲಮಂಡಳಿ ವತಿಯಿಂದ ಒಳಚರಂಡಿಗಳನ್ನು ಸ್ವಚ್ಛಗೊಳಿಸಿ, ಎಲ್ಲೂ ಕೊಳಚೆ ನೀರು ಹೊರಹರಿಯದಂತೆ ಕ್ರಮ ವಹಿಸಲು ಸೂಚಿಸಿದರು.
ಸಂಚಾರ ಪೊಲೀಸ್ ವಿಭಾಗವು ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟಣೆಯಾಗದಂತೆ ಮಾರ್ಗ ಬದಲಾವಣೆ ಹಾಗೂ ವಾಹನಗಳ ನಿಲುಗಡೆಗೆ ಸ್ಥಳ ನಿಗದಿಪಡಿಸಬೇಕು.
ಕರಗ ಮಹೋತ್ಸವ ನಡೆಯುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಬ್ಯಾರಿಕೇಡ್ ವ್ಯವಸ್ಥೆ ಹಾಗೂ ಅಗ್ನಿಅವಘಡಗಳು ಸಂಭವಿಸದಂತೆ ಅಗ್ನಿ ಶಾಮಕ ವ್ಯವಸ್ಥೆ ಕೈಗೊಳ್ಳಬೇಕು.
ಕರಗ ವೀಕ್ಷಿಸಲು ಬರುವವರಿಗೆ ಆರೋಗ್ಯದಲ್ಲಿ ಏರುಪೇರಾದಲ್ಲಿ ಅವರಿಗೆ ಕೂಡಲೆ ಚಿಕಿತ್ಸೆ ನೀಡುವ ಸಲುವಾಗಿ ಪಾಲಿಕೆ ಆರೋಗ್ಯ ವಿಭಾಗದಿಂದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ನಿಯೋಜನೆ ಮಾಡಬೇಕು. ಜೊತೆಗೆ ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್ ವ್ಯವಸ್ಥೆಯೂ ಇರಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ. ಗರುಡಾಚಾರ್, ವಲಯ ಆಯುಕ್ತರಾದ ಅರ್ಚನಾ, ದಿಗ್ವಿಜಯ್ ಬೋಡ್ಕೆ, ಉಪ ಆಯುಕ್ತ ಮಂಜುನಾಥ ಸ್ವಾಮಿ, ಬಿಬಿಎಂಪಿ, ಮುಜರಾಯಿ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ದೇವಸ್ಥಾನ ವ್ಯವಸ್ಥಾಪನಾ ಸಮಿತಿಯವರು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.