(ಸಾಂದರ್ಭಿಕ ಚಿತ್ರ)
ಬೆಂಗಳೂರು: ಮದುವೆಯಾಗುವಂತೆ ಒತ್ತಾಯಿಸಿದ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ರೇಣುಕಾ ಎಂದು ಗುರುತಿಸಲಾಗಿದ್ದು, ಈಕೆಯ ಪ್ರಿಯಕರ ಅಂಬೇಡ್ಕರ್ ಅಲಿಯಾಸ್ ಕುಟ್ಟಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ರೇಣುಕಾ ಅವರು ವರ್ಷದ ಹಿಂದೆ ಪತಿಯನ್ನು ತೊರೆದು, ಕೆ.ಜಿ.ಹಳ್ಳಿಯ ಪಿಳ್ಳಣ್ಣ ಗಾರ್ಡನ್‌ನಲ್ಲಿ ಪ್ರತ್ಯೇಕವಾಗಿ ಮಗನ ಜತೆ ವಾಸವಿದ್ದರು. ಈ ವೇಳೆ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅಂಬೇಡ್ಕರ್ ಅವರ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿದೆ. ಇಬ್ಬರ ನಡುವೆ ಸಲುಗೆ ಬೆಳೆದಿದ್ದು, ಬಳಿಕ ಮದುವೆಯಾಗುವಂತೆ ಒತ್ತಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ರೇಣುಕಾ ಅವರನ್ನು ಮಾತನಾಡುವ ಸಲುವಾಗಿ ಕರೆಯಿಸಿಕೊಂಡ ಕುಟ್ಟಿ, ಪಿಳ್ಳಣ್ಣ ಗಾರ್ಡನ್‌ನ ಸರ್ಕಾರಿ ಶಾಲೆ ಬಳಿ ಕರೆದುಕೊಂಡು ಹೋಗಿ ಜಗಳವಾಡಿದ್ದಾರೆ. ಈ ವೇಳೆ ಚಾಕುವಿನಿಂದ ಅವರಿಗೆ ಆರು ಬಾರಿ ಇರಿದು ಕೊಲೆ ಮಾಡಿ, ಪರಾರಿಯಾಗಿದ್ದಾರೆ. ಇದನ್ನು ಕಂಡ ಸಾರ್ವಜನಿಕರು ಆರೋಪಿ ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ರೇಣುಕಾ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸಲಿಲ್ಲ.
ಮೃತಳ ಸಂಬಂಧಿಕರ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.