ADVERTISEMENT

ಉದ್ಯಮಿ ದಂಪತಿ ಅಪಹರಣ ಪ್ರಕರಣ: ಎಂಟು ಮಂದಿ ಸೆರೆ; ₹1.01 ಕೋಟಿ ನಗದು ಜಪ್ತಿ

ಉದ್ಯಮಿ ದಂಪತಿ, ಅಡಿಕೆ ವ್ಯಾಪಾರಿಗಳಿಂದ ಹಣ ದೋಚಿದ್ದ ಪ್ರಕರಣ; 20 ನಿಮಿಷದಲ್ಲಿ ಪ್ರಕರಣ ಭೇದಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 15:38 IST
Last Updated 28 ಸೆಪ್ಟೆಂಬರ್ 2025, 15:38 IST
ಆರೋಪಿಗಳಿಂದ ನಗದು ಜಪ್ತಿ ಮಾಡಿರುವುದನ್ನು ವೀಕ್ಷಿಸಿದ ಸೀಮಾಂತ್ ಕುಮಾರ್ ಸಿಂಗ್. 
ಆರೋಪಿಗಳಿಂದ ನಗದು ಜಪ್ತಿ ಮಾಡಿರುವುದನ್ನು ವೀಕ್ಷಿಸಿದ ಸೀಮಾಂತ್ ಕುಮಾರ್ ಸಿಂಗ್.    

ಬೆಂಗಳೂರು: ಉದ್ಯಮಿ ದಂಪತಿ ಮತ್ತು ಅಡಿಕೆ ವ್ಯಾಪಾರಿಯನ್ನು ಅಪಹರಿಸಿ ₹1.01 ಕೋಟಿ ನಗದು ದೋಚಿದ್ದ ದರೋಡೆಕೋರರನ್ನು ಘಟನೆ ನಡೆದ ಕೆಲವೇ ಸಮಯದಲ್ಲಿ ಬಂಧಿಸುವಲ್ಲಿ ಹುಳಿಮಾವು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನರಸಿಂಹ (30), ಜೀವನ್ (28), ಕುಮಾರ್ (33), ವೆಂಕಟರಾಜು (32), ಕಿಶೋರ್ (37), ನಮನ್ (19), ರವಿಕಿರಣ್ (30), ಚಂದ್ರು (34) ಬಂಧಿತರು.

ಆರೋಪಿಗಳು ಜಿಗಣಿ, ಬೇಗೂರು ಮತ್ತು ಚಂದಾಪುರ ನಿವಾಸಿಗಳಾಗಿದ್ದಾರೆ. ಭದ್ರತಾ ಸಿಬ್ಬಂದಿ ಕೆಲಸದ ಜತೆಗೆ ಸ್ವಿಗ್ಗಿ ಡೆಲಿವರಿ ಬಾಯ್‌ಗಳಾಗಿದ್ದಾರೆ. ಆರೋಪಿಗಳಾದ ವೆಂಕಟರಾಜು ಮತ್ತು ಕಿಶೋರ್ ವಿರುದ್ಧ ಗ್ರಾಮಾಂತರ ಭಾಗದ ಠಾಣೆಯೊಂದರಲ್ಲಿ ಕೊಲೆ, ದರೋಡೆ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್‌ ಸೀಮಾಂತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಆರೋಪಿಗಳು ತುಮಕೂರು ಜಿಲ್ಲೆಯ ಹೇಮಂತ್ ಮತ್ತು ಅಕ್ಷಯನಗರ ನಿವಾಸಿ ಮೋಟರಾಮು ದಂಪತಿಯನ್ನು ಅಪಹರಿಸಿ, ನಗದು ದರೋಡೆ ಮಾಡಿದ್ದರು.

ತುಮಕೂರಿನ ಅಡಿಕೆ ವ್ಯಾಪಾರಿ ಮೋಹನ್ ಅವರು ಆನೇಕಲ್ ಭಾಗದಲ್ಲಿ ಆಸ್ತಿಯೊಂದನ್ನು ₹1.75 ಕೋಟಿಗೆ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು. ಈ ಪೈಕಿ ₹1.01 ಕೋಟಿ ನಗದು ಪಡೆದುಕೊಂಡು ಬರುವಂತೆ ತನ್ನ ಚಿಕ್ಕಪ್ಪನ ಮಗ ಹೇಮಂತ್‌ಗೆ ಸೂಚಿಸಿದ್ದರು. ಅದರಂತೆ ಸೆಪ್ಟೆಂಬರ್‌ 27ರ ರಾತ್ರಿ 10.15ರ ಸುಮಾರಿಗೆ ಹುಳಿಮಾವು ಅಕ್ಷಯನಗರದ ಬಳಿ ಕಾರಿನಲ್ಲಿ ಬಂದಿದ್ದಾರೆ. ಅದೇ ವೇಳೆ ಹಣ ಕೊಡಲು ಮೋಟರಾಮು ದಂಪತಿ ಮತ್ತೊಂದು ಕಾರಿನಲ್ಲಿ ಬಂದಿದ್ದು, ನಂತರ ಹೇಮಂತ್, ಹಣದ ಸಮೇತ ಮೋಟರಾಮು ಅವರ ಕಾರಿನಲ್ಲಿ ಕುಳಿತುಕೊಂಡಿದ್ದಾರೆ.

ಅದೇ ವೇಳೆ ಅಲ್ಲೇ ಇದ್ದ ಆರೋಪಿಗಳ ಪೈಕಿ ಇಬ್ಬರು, ಅವರ ಚಲವಲನಗಳ ಮೇಲೆ ಅನುಮಾನಗೊಂಡು ಪ್ರಶ್ನಿಸಿದ್ದಾರೆ. ‘ನೀವು ಯಾರು? ಕಾರಿನಿಂದ ಕೆಳಗೆ ಇಳಿಯಿರಿ? ತಪಾಸಣೆ ಮಾಡಬೇಕು’ ಎಂದು ವಿಡಿಯೊ ಮಾಡಲು ಮುಂದಾಗಿದ್ದಾರೆ. ಅದನ್ನು ಪ್ರಶ್ನಿಸಿದ ಹೇಮಂತ್ ಮತ್ತು ಮೋಟರಾಮು ದಂಪತಿ ಮೇಲೆ ಹಲ್ಲೆ ನಡೆಸಿ ಹಣ ಕಸಿದುಕೊಳ್ಳಲು ಮುಂದಾಗಿದ್ದರು. ಇದರಿಂದ ಗಾಬರಿಗೊಂಡ ಮೂವರು ಕಾರಿನ ಡೋರ್ ಲಾಕ್ ಮಾಡಿಕೊಂಡು ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ.

ಆದರೆ, ಆರೋಪಿಗಳು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದು, ಅಡ್ಡಗಟ್ಟಿದ್ದಾರೆ. ಬಳಿಕ ಮೂವರನ್ನು ಕಾರಿನಿಂದ ಇಳಿಸಿ, ಹಣ ಮತ್ತು ಮೊಬೈಲ್ ಕಿತ್ತುಕೊಂಡು ಅಲ್ಲೇ ಇದ್ದ ಖಾಲಿ ಶೆಡ್‌ನಲ್ಲಿ ಕೂಡಿ ಹಾಕಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು

₹20 ಲಕ್ಷಕ್ಕೆ ಬ್ಲ್ಯಾಕ್ ಮೇಲ್

ಹೇಮಂತ್ ಮೋಟರಾಮು ದಂಪತಿಯನ್ನು ಶೆಡ್‌ನಲ್ಲಿ ಕೂಡಿಹಾಕಲು ಪ್ರಯತ್ನಿಸುತ್ತಿದ್ದಾಗ ಇತರೆ ಆರು ಮಂದಿ ಆರೋಪಿಗಳು ಸ್ಥಳಕ್ಕೆ ಬಂದು ‘₹20 ಲಕ್ಷ ನೀಡಿದರೆ ಬಿಟ್ಟು ಬಿಡುತ್ತೇವೆ. ಇಲ್ಲವಾದರೆ ಹವಾಲಾ ದಂಧೆ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಸುವುತ್ತೇವೆ’ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.

ದುಷ್ಕರ್ಮಿಗಳು ಬೈಕ್‌ನಿಂದ ಕಾರನ್ನು ಹಿಂಬಾಲಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಸ್ಥಳೀಯರೊಬ್ಬರು ಪೊಲೀಸರಿಗೆ ನೀಡಿದ್ದರು. ಅದೇ ವೇಳೆ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎಸಿಪಿ ಕೆ.ಎಂ.ಸತೀಶ್ ಮತ್ತು ಹುಳಿಮಾವು ಠಾಣೆಯ ಪಿಐ ಬಿ.ಜಿ.ಕುಮಾರಸ್ವಾಮಿ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದರು. ಘಟನಾ ಸ್ಥಳದ ಅನತಿ ದೂರವಾದ ಡಿಎಲ್‌ಎ ವೃತ್ತದ ಬಳಿ ನಾಕಾಬಂದಿ ಹಾಕಿ ರಾತ್ರಿ ಗಸ್ತು ನಡೆಸುತ್ತಿದ್ದರು. 15 ನಿಮಿಷದಿಂದ 20 ನಿಮಿಷದಲ್ಲಿಯೇ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹೆಚ್ಚಿನ ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ ನಗದು ಕಾರು ಮತ್ತು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುಳಿಮಾವು ಪೊಲೀಸರ ಕಾರ್ಯವನ್ನು ಶ್ಲಾಘಿಸಿ ಕಮಿಷನರ್ ₹20 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.