ADVERTISEMENT

ಡ್ರಾಪ್ ಕೊಡುವ ಸೋಗಿನಲ್ಲಿ ವ್ಯಕ್ತಿಯ ಅಪಹರಣ: ಪಿಸ್ತೂಲ್‌ ತೋರಿಸಿ ಸುಲಿಗೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 14:40 IST
Last Updated 24 ಸೆಪ್ಟೆಂಬರ್ 2025, 14:40 IST
   

ಬೆಂಗಳೂರು: ಡ್ರಾಪ್ ಕೊಡುವ ಸೋಗಿನಲ್ಲಿ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಕರೆದೊಯ್ದು ಪಿಸ್ತೂಲ್‍ನಿಂದ ಬೆದರಿಸಿ ಹಣ ಹಾಗೂ ಮೊಬೈಲ್‌ ಸುಲಿಗೆ ಮಾಡಿದ್ದ ನಾಲ್ವರು ದರೋಡೆಕೋರರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆಯ ಕನಕಮೂರ್ತಿ (25), ಆತನ ಸಹೋದರ ಶ್ರೀಕಾಂತ್ (22), ಸಂಬಂಧಿ ಕಿರಣ್ (29) ಹಾಗೂ ಸಿಕಂದರ್ (38) ಬಂಧಿತ ಆರೋಪಿಗಳು.

ಬಂಧಿತರಿಂದ ಪಿಸ್ತೂಲ್, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಐದು ಮೊಬೈಲ್‍ ಫೋನ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ವಿಜಯಪುರದ ವ್ಯಕ್ತಿಯೊಬ್ಬರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಸೆಂಟ್ರಿಂಗ್ ಕೆಲಸ ಮಾಡುವ ವ್ಯಕ್ತಿಯನ್ನು ಅಪಹರಿಸಿ ಆರೋಪಿಗಳು ಸುಲಿಗೆ ಮಾಡಿದ್ದರು. ‌

ಆಗಸ್ಟ್‌ 14ರಂದು ಕೆಲಸದ ನಿಮಿತ್ತ ದೂರುದಾರ ನಗರಕ್ಕೆ ಬಂದಿದ್ದರು. ಕೆಲಸ ಮುಗಿಸಿಕೊಂಡು ವಿಜಯಪುರಕ್ಕೆ ವಾಪಸ್ ತೆರಳಲು ಜಾಲಹಳ್ಳಿ ಕ್ರಾಸ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಅಲ್ಲಿಗೆ ಕಾರಿನಲ್ಲಿ ಬಂದಿದ್ದ ಆರೋಪಿಗಳು, ತಾವು ಕಾರಿನಲ್ಲಿ ವಿಜಯಪುರಕ್ಕೆ ತೆರಳುತ್ತಿದ್ದೇವೆ. ಕಾರಿನಲ್ಲೇ ಬರುವಂತೆ ಕೋರಿದ್ದರು. ಆರೋಪಿಗಳ ಮಾತು ನಂಬಿದ್ದ ದೂರುದಾರ ಕಾರು ಹತ್ತಿದ್ದರು. ಕಾರಿಗೆ ಹತ್ತಿಸಿಕೊಂಡು ದಾಬಸ್‍ಪೇಟೆಗೆ ಕರೆದೊಯ್ದು ಪಿಸ್ತೂಲ್‍ನಿಂದ ಬೆದರಿಸಿ ₹5 ಸಾವಿರ ನಗದು ಹಾಗೂ ₹ 75 ಸಾವಿರ ಮೌಲ್ಯದ ಎರಡು ಮೊಬೈಲ್‍ಗಳನ್ನು ದೋಚಿದ್ದರು. ಬಳಿಕ ಅವರ ಮೇಲೆ ಹಲ್ಲೆ ನಡೆಸಿ, ಕಾರಿನಿಂದ ಕೆಳಗೆ ತಳ್ಳಿ ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.

ದೂರುದಾರ ನೀಡಿದ ಕಾರಿನ ನೋಂದಣಿ ಸಂಖ್ಯೆಯ ಸುಳಿವು ಆಧರಿಸಿ, ಆರೋಪಿಗಳನ್ನು ಪತ್ತೆ ಮಾಡಿ ಮಾರತ್‍ಹಳ್ಳಿ ಬಳಿಯ ದೊಡ್ಡನೆಕ್ಕುಂದಿಯಲ್ಲಿ ಬಂಧಿಸಲಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.