ADVERTISEMENT

ಬೆಂಗಳೂರು | ಕಿದ್ವಾಯಿಯಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ

ರೋಗಿಗಳು ಹಾಗೂ ಸಹಾಯಕರ ವಾಹನಗಳ ನಿಲುಗಡೆಗೆ ಮೂರು ಮಹಡಿ ನಿರ್ಮಾಣ

ವರುಣ ಹೆಗಡೆ
Published 10 ಡಿಸೆಂಬರ್ 2025, 23:17 IST
Last Updated 10 ಡಿಸೆಂಬರ್ 2025, 23:17 IST
ಬಹುಮಹಡಿ ಪಾರ್ಕಿಂಗ್ ಕಟ್ಟಡದ ಕಾಮಗಾರಿ ನಡೆಸುತ್ತಿರುವ ಕಾರ್ಮಿಕರು
ಬಹುಮಹಡಿ ಪಾರ್ಕಿಂಗ್ ಕಟ್ಟಡದ ಕಾಮಗಾರಿ ನಡೆಸುತ್ತಿರುವ ಕಾರ್ಮಿಕರು   

ಬೆಂಗಳೂರು: ರೋಗಿಗಳ ಹಾಗೂ ಅವರ ಸಹಾಯಕರ ವಾಹನಗಳನ್ನು ಒಂದೆಡೆ ನಿಲುಗಡೆ ಮಾಡಲು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಆವರಣದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. 

ಈ ಪಾರ್ಕಿಂಗ್ ಕಟ್ಟಡವು ಸದ್ಯ ಮೂರು ಮಹಡಿಗಳನ್ನು ಹೊಂದಿದ್ದು, ವೈದ್ಯರು ಹಾಗೂ ಸಿಬ್ಬಂದಿ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ರೋಗಿಗಳು ಹಾಗೂ ಅವರ ಸಹಾಯಕರಿಗೆ ಸಂಸ್ಥೆಯ ಆವರಣದಲ್ಲಿರುವ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ಆದರೆ, ಇಲ್ಲಿ ಸ್ಥಳಾವಕಾಶ ಸಾಕಾಗದ ಕಾರಣ ಸಂಸ್ಥೆಯ ಸುತ್ತಮುತ್ತ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಹೊರರೋಗಿ ವಿಭಾಗದ ಬಳಿಯೂ ವಾಹನಗಳನ್ನು ನಿಲ್ಲಿಸುವ ಪರಿಣಾಮ, ಆಂಬುಲೆನ್ಸ್‌ಗಳಿಗೆ ಸಮಸ್ಯೆ ಆಗುತ್ತದೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ಈಗಾಗಲೇ ಇರುವ ಮೂರು ಮಹಡಿಗಳ ಪಾರ್ಕಿಂಗ್ ಕಟ್ಟಡದ ಮೇಲೆ ಹೆಚ್ಚುವರಿಯಾಗಿ ಮತ್ತೆ ಮೂರು ಮಹಡಿಗಳನ್ನು ನಿರ್ಮಿಸಲಾಗುತ್ತಿದೆ. 

ಸಂಸ್ಥೆಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ವಸತಿನಿಲಯದ ಪಕ್ಕದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡವಿದೆ. ಈಗಾಗಲೇ ಹೆಚ್ಚುವರಿ ಮಹಡಿ ನಿರ್ಮಾಣದ ಕಾಮಗಾರಿ ‍ಪ್ರಗತಿಯಲ್ಲಿದೆ. ಈ ಪಾರ್ಕಿಂಗ್ ಕಟ್ಟಡದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಜತೆಗೆ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದೆ. ಅದರಂತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಈಗಾಗಲೇ ಒಂದು ಮಹಡಿ ನಿರ್ಮಿಸಲಾಗಿದೆ. ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಜಿಬಿಎ 12 ತಿಂಗಳ ಗಡುವು ನೀಡಿದೆ.

ADVERTISEMENT

₹13 ಕೋಟಿ: ಮೂರು ಮಹಡಿಗಳನ್ನು ₹13.82 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಹಿಂದೆ ಮೂರು ಮಹಡಿಗಳನ್ನು ಬಿಬಿಎಂಪಿ ನಿರ್ಮಿಸಿಕೊಟ್ಟಿತ್ತು. ಅಲ್ಲಿ ವೈದ್ಯರು, ಶುಶ್ರೂಷಕರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಉಚಿತವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ರೋಗಿಗಳು ಹಾಗೂ ಅವರ ಸಹಾಯಕರು ಹಣ ಪಾವತಿ ಆಧಾರದಲ್ಲಿ ವಾಹನಗಳನ್ನು ಮೈದಾನದಲ್ಲಿ ನಿಲ್ಲಿಸುತ್ತಿದ್ದಾರೆ. ಪಾರ್ಕಿಂಗ್ ಶುಲ್ಕದಿಂದ ತಪ್ಪಿಸಿಕೊಳ್ಳಲು ಕೆಲವರು ಒಪಿಡಿ ಬಳಿ ಸೇರಿ ವಿವಿಧೆಡೆ ನಿಲ್ಲಿಸುತ್ತಿದ್ದಾರೆ. ಸಂಸ್ಥೆಯ ಸುತ್ತಮುತ್ತ ವಾಹನಗಳ ಓಡಾಟ ರೋಗಿಗಳಿಗೂ ಸಮಸ್ಯೆಯಾಗಿತ್ತು. 

‘ಸಂಸ್ಥೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಇದರಿಂದ ಸಹಜವಾಗಿಯೇ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಯ ಆವರಣ ಪ್ರವೇಶಿಸುತ್ತಿವೆ. ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದರಿಂದ ಎಲ್ಲರಿಗೂ ಸಮಸ್ಯೆಯಾಗುತ್ತದೆ. ಆದ್ದರಿಂದ ಒಂದೇ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ರೂಪಿಸಲಾಗುತ್ತಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಟಿ. ನವೀನ್ ತಿಳಿಸಿದರು. 

ಜಿಬಿಎ ಜತೆಗಿನ ಒಡಂಬಡಿಕೆ ಅನುಸಾರ ಪಾರ್ಕಿಂಗ್‌ಗೆ ಮೂರು ಮಹಡಿಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಎಲ್ಲ ವಾಹನಗಳಿಗೆ ಈ ಕಟ್ಟಡದಲ್ಲಿ ಅವಕಾಶ ನೀಡಲಾಗುತ್ತದೆ
ಡಾ.ಟಿ. ನವೀನ್ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

ಸಂಸ್ಥೆಗೆ ಭೇಟಿ ಹೆಚ್ಚಳ

ಇಲ್ಲಿನ ಹೊಂಬೇಗೌಡ ನಗರದಲ್ಲಿರುವ ಸಂಸ್ಥೆಗೆ ಭೇಟಿ ನೀಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ರಾಜ್ಯದ ವಿವಿಧ ಭಾಗಗಳ ಜತೆಗೆ ಹೊರ ರಾಜ್ಯಗಳಿಂದಲೂ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದಾರೆ. ಪ್ರತಿ ತಿಂಗಳು ಸರಾಸರಿ 33946 ಮಂದಿ ಹೊರ ರೋಗಿಗಳಾಗಿ ಭೇಟಿ ನೀಡಿದರೆ 1839 ಮಂದಿ ಒಳ ರೋಗಿಗಳಾಗಿ ದಾಖಲಾಗುತ್ತಿದ್ದಾರೆ. ಸಂಸ್ಥೆಯ ಹೊರರೋಗಿ ವಿಭಾಗಕ್ಕೆ 2024ರಲ್ಲಿ ಕ್ಯಾನ್ಸರ್ ಪರೀಕ್ಷೆ ಹಾಗೂ ಚಿಕಿತ್ಸೆ ಸಂಬಂಧ 4.07 ಲಕ್ಷ ಮಂದಿ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.