ಕೆ.ಆರ್.ಪುರ: ಅವೈಜ್ಞಾನಿಕ ಕಾಮಗಾರಿಯಿಂದಾಗಿ ರಾಜಕಾಲುವೆ ಮೂಲಕ ಕೊಳಚೆ ನೀರು ಕೆರೆ ಸೇರುತ್ತಿದೆ. ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ದುರ್ವಾಸನೆ ಹೊರ ಹೊಮ್ಮುತ್ತಿದೆ. ಜಲಚರಗಳ ಸಾಯುತ್ತಿವೆ ..!
ಇದು ಕೆ.ಆರ್.ಪುರ ಕ್ಷೇತ್ರದ ರಾಮಮುರ್ತಿ ನಗರ ವಾರ್ಡ್‌ನ ಜನರ ಜೀವನಾಡಿಯಾಗಿರುವ ಕೌದೇನಹಳ್ಳಿಯ ಕೆರೆಯ ದುಸ್ಥಿತಿ.
ಸುಮಾರು 25 ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆಯನ್ನು ಒಂದೂವರೆ ವರ್ಷದ ಹಿಂದೆ ₹1.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜಲಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳ ಸಮನ್ವಯದ ಕೊರತೆ ಹಾಗೂ ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ರಾಜಕಾಲುವೆಯ ಮೂಲಕ ಕೊಳಚೆ ನೀರು ಕೆರೆಯನ್ನು ಸೇರುತ್ತಿದೆ.
‘ಹೊರಮಾವು, ಅಗರ, ವಿಜಿನಾಪುರ, ರಾಮಮೂರ್ತಿನಗರ ಮೂಲಕ ಹಾದುಹೋಗುವ ರಾಜಕಾಲುವೆಯನ್ನು ಕೆರೆಗೆ ನೇರವಾಗಿ ಸಂಪರ್ಕ ಕಲ್ಪಿಸಲಾಗಿದೆ. ರಾಮಮೂರ್ತಿನಗರದ ವಿವಿಧ ಬಡಾವಣೆಯ ಮನೆಗಳ ತ್ಯಾಜ್ಯ ನೀರು ರಾಜಕಾಲುವೆಯಲ್ಲಿ ಹರಿದು ಕೆರೆ ಸೇರುತ್ತಿದೆ. ಕೊಳಚೆ ನೀರಿನ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯವೂ ಮಿಶ್ರವಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ವಿಶ್ವನಾಥ್ ಹೇಳಿದರು.
ಕೆರೆ ಅಭಿವೃದ್ಧಿ ಮಾಡುವಾಗ ರಾಜಕಾಲುವೆ ನೀರನ್ನು ಕೆರೆಗೆ ತಿರುಗಿಸದಂತೆ ತಿಳಿಸಲಾಗಿತ್ತು. ಆದರೂ, ಕೊಳಚೆ ನೀರು ಕೆರೆಗೆ ಹರಿಯುವಂತೆ ಮಾಡಿದ್ದಾರೆ. ಜಲಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು ತಕ್ಷಣ ಪರಿಶೀಲಿಸಿ, ಸಮಸ್ಯೆ ಪರಿಹರಿಸಬೇಕು’ ಎಂದು ಕೆ.ಆರ್.ಪುರ ಪರಿಸರ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ನಾರಾಯಣಪ್ಪ ಒತ್ತಾಯಿಸಿದರು.
‘ಕೆರೆ ಭರ್ತಿಯಾಗಿ ಕೋಡಿ ನೀರು ಹರಿಯುವ ಜಾಗದಲ್ಲಿ ಮಣ್ಣನ್ನು ಹಾಗೆಯೇ ಬಿಡಲಾಗಿದೆ. ಕೆರೆಯ ನಿರ್ವಹಣೆಯನ್ನೂ ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ’ ಎಂದು ಟ್ರಸ್ಟ್ ಉಪಾಧ್ಯಕ್ಷ ಶಿವಲಿಂಗೇಗೌಡ ದೂರಿದರು.
ಶುದ್ಧೀಕರಣ ಘಟಕ ಅಗತ್ಯ
ಕೌದೇನಹಳ್ಳಿ ಕೆರೆಯಲ್ಲಿ ಶುದ್ಧೀಕರಣ ಘಟಕವಿಲ್ಲ(ಎಸ್‌ಟಿಪಿ). ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ವೇಳೆ ನಡಿಗೆದಾರರು ಶುದ್ಧೀಕರಣ ಘಟಕ ನಿರ್ಮಿಸುವಂತೆ ಮನವಿ ಮಾಡಿದ್ದರು. ಆದರೆ ಬಿಬಿಎಂಪಿ ಮತ್ತು ಜಲಮಂಡಳಿಯವರು ‘ಕೆರೆಗೆ ಅಷ್ಟು ಪ್ರಮಾಣ ಬರುವುದಿಲ್ಲ. ಕೆರೆಗೆ ನೀರಿನ ಕೊರತೆಯಿದೆ. ಶುದ್ಧೀಕರಣ ಘಟಕ ಅವಶ್ಯಕತೆ ಇಲ್ಲ’ ಎಂದು ಹೇಳಿದ್ದರು. ಆದರೆ ಈ ಕೆರೆಗೆ ಎಸ್‌ಟಿಪಿ ಅಗತ್ಯವಿದೆ’ ಎಂದು ನಡಿಗೆದಾರ ಸಂದೀಪ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.