ವಿಧಾನ ಪರಿಷತ್ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಬೆಂಗಳೂರಿನಲ್ಲಿ ನಿರ್ಮಾಣವಾಗುವ ಅವಳಿ ಸುರಂಗ ರಸ್ತೆ ದೇಶದಲ್ಲೇ ಅತಿದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಸಿ.ಟಿ. ರವಿ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಮೂರು + ಒಂದು ವಾಹನ ಸಂಚರಿಸಲು ಅವಕಾಶವಿರುವ 14 ಮೀಟರ್ ಅಗಲದ ಸುರಂಗ ರಸ್ತೆ ಇದು. ನೀವು ಅಟಲ್ ಸುರಂಗ ಹಾಗೂ ಇತರೆ ಚಿಕ್ಕ ಸುರಂಗಗಳಿಗೆ ಹೋಲಿಕೆ ಮಾಡಿಕೊಳ್ಳುವುದು ಬೇಡ’ ಎಂದರು.
‘ಬೇರೆ ಸುರಂಗ ರಸ್ತೆಗೆ ತಗುಲಿರುವ ವೆಚ್ಚಕ್ಕೂ ಇಲ್ಲಿನ ಸುರಂಗ ರಸ್ತೆಗೂ ವೆಚ್ಚ ದುಪ್ಪಟ್ಟು ಆಗಿದೆ ಹಾಗೂ ಕಪ್ಪುಪಟ್ಟಿಗೆ ಸೇರಿದ ಸಂಸ್ಥೆಗಳು ಯಾಕೆ ಡಿಪಿಆರ್ ಮಾಡಿವೆ? ಇದು ಮತ್ತೊಂದು ನೈಸ್ ರಸ್ತೆ ಆಗಬಾರದು’ ಎಂದು ಸಿ.ಟಿ. ರವಿ ಹೇಳಿದರು.
‘ಕಪ್ಪುಪಟ್ಟಿಗೆ ಸೇರಿವೆ ಎಂದು ಹೇಳುತ್ತಿರುವ ಸಂಸ್ಥೆಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿವೆ. ಇನ್ನು ಡಿಪಿಆರ್‌ನಲ್ಲಿ ಕಟ್ ಅಂಡ್ ಪೇಸ್ಟ್ ಮಾಡಿರುವ ವಿಚಾರ ನಿಜ. ನಾವು ಎಚ್ಚೆತ್ತುಕೊಂಡು, ಸಂಸ್ಥೆಗೆ ದಂಡ ವಿಧಿಸಲಾಗಿದೆ’ ಎಂದರು.
‘ನಮ್ಮ ಸುರಂಗ ರಸ್ತೆಗೆ ಪ್ರತಿ ಕಿ.ಮೀಗೆ ₹770 ಕೋಟಿ ಆಗಲಿದೆ. ಗಾಯ್ ಮುಖೆ ಸುರಂಗ, ಆರೆಂಜ್ ಗೇಟ್ ಸುರಂಗನಲ್ಲಿ ಪ್ರತಿ ಕಿ.ಮೀಗೆ ₹1,316 ಕೋಟಿ ವೆಚ್ಚ ಮಾಡಲಾಗಿದೆ. ನಮ್ಮ ಸುರಂಗ ರಸ್ತೆ ದೇಶದ ಇತರೆ ಸುರಂಗ ರಸ್ತೆಗಳ ವೆಚ್ಚಕ್ಕಿಂತ ಶೇ 60ರಿಂದ ಶೇ 70ರಷ್ಟು ಕಡಿಮೆ ಇದೆ’ ಎಂದು ಶಿವಕುಮಾರ್ ಮಾಹಿತಿ ನೀಡಿದರು.
ಮೆಟ್ರೊ ರೀತಿ ಈ ಸುರಂಗ ರಸ್ತೆ, ರಸ್ತೆ ಕೆಳಗೆ ಹೋಗುವುದಿಲ್ಲ, ಕಟ್ಟಡಗಳ ಕೆಳಗೂ ಸಾಗುತ್ತದೆ. ಹೀಗಾಗಿ ಇದನ್ನು ನಿರ್ಮಿಸುವಾಗ ಸುರಕ್ಷತಾ ಕ್ರಮ ವಹಿಸಬೇಕಾಗುತ್ತದೆ. ಮುಖ್ಯಮಂತ್ರಿಯವರು ಜಾಗತಿಕ ಟೆಂಡರ್ ಕರೆದು ಯೋಜನೆ ಮಾಡಲು ಸೂಚಿಸಿದ್ದರು. ಅದರಂತೆ, ನಿರ್ಮಾಣ, ಕಾರ್ಯಾಚರಣೆ, ವರ್ಗಾವಣೆ (ಬೂಟ್) ಆಧಾರದಲ್ಲಿ ಟೆಂಡರ್ ಕರೆಯಲಾಗಿದೆ. ನಾವು ಶೇ 40ರಷ್ಟು, ಗುತ್ತಿಗೆಯವರು ಶೇ 60ರಷ್ಟು ವೆಚ್ಚ ಭರಿಸುತ್ತಾರೆ. ನಂತರ ಶುಲ್ಕ ವಿಧಿಸಲಾಗುವುದು’ ಎಂದರು.
‘ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ವರೆಗೂ ಪ್ರಾಯೋಗಿಕವಾಗಿ ಡಬಲ್ ಡೆಕರ್ ಯೋಜನೆ ಮಾಡಲಾಗಿದೆ. ಪ್ರಧಾನಮಂತ್ರಿಯವರೂ ಇದನ್ನು ಮೆಚ್ಚಿ ಅಭಿನಂದನೆ ಸಲ್ಲಿಸಿದ್ದಾರೆ. 44 ಕಿ.ಮೀ. ಉದ್ದದ ಡಬಲ್ ಡೆಕರ್, 113 ಕಿ.ಮೀ. ಉದ್ದದಷ್ಟು ಎಲಿವೇಟೆಡ್ ಕಾರಿಡಾರ್ ಮಾಡಲು ಡಿಪಿಆರ್ ಸಿದ್ಧಪಡಿಸಲಾಗಿದ್ದು, ಟೆಂಡರ್ ಕರೆಯಲಾಗುತ್ತಿದೆ’ ಎಂದು ಹೇಳಿದರು.
‘ನೀವು ಅಧಿಕಾರದಲ್ಲಿದ್ದಾಗ ಅನೇಕ ಯೋಜನೆಗಳನ್ನು ಮಾಡಿದ್ದೀರಿ. ಅವುಗಳ ಉದ್ದೇಶ ಹಣ ಮಾಡುವುದಾ? ಜನ ಸೇವೆ ದೃಷ್ಟಿಯಿಂದ ನೀವು ಹೇಗೆ ಯೋಜನೆ ಮಾಡಿದ್ದೀರೋ, ನಾವು ಕೂಡ ಅದೇ ರೀತಿ ಈ ಸುರಂಗ ರಸ್ತೆ, ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕರ್, ಬಫರ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇಲ್ಲಿ ವ್ಯವಹಾರ ನೋಡುತ್ತಿಲ್ಲ. ಬೆಂಗಳೂರಿನ ಮೇಲೆ ಬಹಳ ಆಸಕ್ತಿ ಹೊಂದಿದ್ದು, ನಗರದಲ್ಲಿ ನನ್ನದೇ ಆದ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂದು ತೀರ್ಮಾನಿಸಿದ್ದೇನೆ. ‘ನೀವು ಈ ಯೋಜನೆಯಲ್ಲಿ ಮುಂದುವರಿಯಿರಿ, ನಿಮ್ಮ ಪ್ರಸ್ತಾವವನ್ನು ಪರಿಶೀಲನೆ ಮಾಡುತ್ತೇನೆ’ ಎಂದು ನರೇಂದ್ರ ಮೋದಿ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.