ADVERTISEMENT

ಲಾಕ್‌ಡೌನ್‌ ಅಂತ್ಯ: ರಾತ್ರಿ ಕರ್ಫ್ಯೂ ಮುಂದುವರಿಕೆ

ಎನ್‌ಎಂಎಚ್‌ ವೈದ್ಯರ ವೇತನ ₹45 ಸಾವಿರಕ್ಕೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 19:40 IST
Last Updated 20 ಜುಲೈ 2020, 19:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯೇ ಲಾಕ್‌ಡೌನ್‌ ಅಂತ್ಯಗೊಳ್ಳಲಿದೆ. ಅದನ್ನು ಮುಂದುವರಿಸುವ ಪ್ರಶ್ನೆಯೇ ಇಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಎಂಟು ವಲಯಗಳ ಕೋವಿಡ್‌ ಉಸ್ತುವಾರಿ ಸಚಿವರ ಸಭೆ ಸೋಮವಾರ ನಡೆಯಿತು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬುಧವಾರದಿಂದ ಜನ ಜೀವನ ಮತ್ತು ಚಟುವಟಿಕೆಗಳು ಸಾಮಾನ್ಯವಾಗಿರಲಿವೆ. ಆದರೆ, ರಾತ್ರಿ 8ರಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಮುಂದುವರಿಯಲಿದೆ’ ಎಂದರು.

ADVERTISEMENT

‘ಉಳಿದ ಜಿಲ್ಲೆಗಳಲ್ಲೂ ಲಾಕ್‌ಡೌನ್ ಮುಂದುವರಿಸುವ ಸಾಧ್ಯತೆ ಇಲ್ಲ. ಕೆಲವೆಡೆ ಪರಿಸ್ಥಿತಿ ಆಧರಿಸಿ ಜಿಲ್ಲಾಡಳಿತ ತೀರ್ಮಾನ ತೆಗೆದುಕೊಳ್ಳಲಿದೆ. ಈ ಹಿಂದಿನ ಆದೇಶದಂತೆ ಭಾನುವಾರಗಳಂದು ಲಾಕ್‌ಡೌನ್‌ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು’ಎಂದು ಅವರು ಹೇಳಿದರು.

‘ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಂಎಚ್) ಅಡಿ ನೇಮಕಗೊಂಡಿರುವ ವೈದ್ಯರ ವೇತನವನ್ನು ₹25 ಸಾವಿರದಿಂದ ₹45 ಸಾವಿರಕ್ಕೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಆರು ತಿಂಗಳವರೆಗೆ ರಾಜ್ಯ ಸರ್ಕಾರವೇ ಪೂರ್ಣ ವೇತನ ಭರಿಸಲಿದೆ. ಮುಂದೆ ಕೇಂದ್ರದ ಜತೆ ಹೊಸ ಒಪ್ಪಂದ ಮಾಡಿಕೊಳ್ಳಲಾಗುವುದು. ಈ ವೈದ್ಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40ರ ಅನುಪಾತದಲ್ಲಿ ವೇತನ ಭರಿಸುತ್ತಿವೆ’ ಎಂದು ಹೇಳಿದರು.

‘ಬೆಂಗಳೂರಿನ ಎಂಟು ವಲಯಗಳಿಗೆ ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಿಸಿದ ಬಳಿಕ ಬೂತ್‌ ಮಟ್ಟದಲ್ಲಿ ಕಾರ್ಯಪಡೆಗಳು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತಿ ಬೂತ್‌ನಲ್ಲಿ 150 ರಿಂದ 400 ಮನೆಗಳ ಸರ್ವೆ ಕಾರ್ಯ ನಡೆಯುತ್ತಿದೆ’ ಎಂದು ಸುಧಾಕರ್‌ ತಿಳಿಸಿದರು.

8 ವಲಯಗಳ ಸಭೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ಮತ್ತು ಗುರುವಾರ ತಲಾ ನಾಲ್ಕು ವಲಯಗಳಂತೆ ಎಂಟು ವಲಯಗಳ ಸಭೆಗಳನ್ನು ನಡೆಸಲಿದ್ದಾರೆ ಎಂದು ಹೇಳಿದರು.

ವೈದ್ಯಕೀಯ ಉಪಕರಣಗಳ ಖರೀದಿ ಮತ್ತು ವೆಚ್ಚಗಳ ಬಗ್ಗೆ ಮುಖ್ಯಮಂತ್ರಿ ಅವರೇ ಇನ್ನೆರಡು ದಿನಗಳಲ್ಲಿ ಸುದ್ದಿಗೋಷ್ಠಿನಡೆಸಿ ದಾಖಲೆಗಳ ಸಮೇತ ಕಾಂಗ್ರೆಸ್‌ ಅಪಪ್ರಚಾರಕ್ಕೆ ಉತ್ತರ ನೀಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.