ಸಾವು
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಕೆಲಸ ಹುಡುಕಲೆಂದು ನಗರಕ್ಕೆ ಬಂದು ಲಾಡ್ಜ್‌ನಲ್ಲಿ ತಂಗಿದ್ದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಯುವಕ ತಕ್ಷಿತ್ (20) ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಎಂಟು ದಿನಗಳ ಹಿಂದೆ ತಕ್ಷಿತ್ ಅವರು ಕೊಡಗು ಜಿಲ್ಲೆಯ ವಿರಾಜಪೇಟೆಯ ಸ್ನೇಹಿತೆಯೊಂದಿಗೆ ನಗರಕ್ಕೆ ಬಂದಿದ್ದರು. ವಿವಿಧೆಡೆ ಕೆಲಸ ಹುಡುಕುತ್ತಿದ್ದರು. ಮಡಿವಾಳದ ಗ್ರ್ಯಾಂಡ್ ಚಾಯ್ಸ್ ಹೋಟೆಲ್‌ನಲ್ಲಿ ತಂಗಿದ್ದರು. ಎರಡು ದಿನಗಳ ಹಿಂದೆ ಯುವತಿ ತಮ್ಮೂರಿಗೆ ವಾಪಸ್ ತೆರಳಿದ್ದರು. ಹೀಗಾಗಿ, ತಕ್ಷಿತ್ ಒಬ್ಬರೇ ಕೊಠಡಿಯಲ್ಲಿ ಇದ್ದರು. ಕೊಠಡಿಗೆ ಊಟ, ತಿಂಡಿ ತರಿಸಿಕೊಳ್ಳುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಕೊಠಡಿಯಿಂದ ಯಾರೂ ಹೊರಗೆ ಬಾರದ ಕಾರಣಕ್ಕೆ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಶುಕ್ರವಾರ ಸಂಜೆ ಕೊಠಡಿಯ ಬಾಗಿಲು ಒಡೆದು ಪರಿಶೀಲಿಸಿದಾಗ ಯುವಕ ಮೃತಪಟ್ಟಿರುವುದು ಪತ್ತೆಯಾಗಿತ್ತು. ತಕ್ಷಣವೇ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಯುವಕನ ಪೋಷಕರಿಗೂ ಮಾಹಿತಿ ನೀಡಿದ್ದಾರೆ’ ಎಂದು ಗೊತ್ತಾಗಿದೆ.
‘ಮೃತ ಯುವಕ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಜತೆಗೆ, ಹೆಚ್ಚು ಸಿಗರೇಟು ಸೇದುತ್ತಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಾವಿಗೆ ನಿಖರ ಗೊತ್ತಾಗಲಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.