ADVERTISEMENT

'ಹೊಂಡ' ಸಿಟಿಯ ಪಡಿಪಾಟಲು | ಗುಂಡಿಮಯ ರಸ್ತೆ: ನರಕ ದರ್ಶನ

ಹದಗೆಟ್ಟ ರಸ್ತೆಗಳಿಂದ ವಾಹನ ಸವಾರರು ಹೈರಾಣ; ಸವಾರರಿಗೆ ದೂಳಿನ ಮಜ್ಜನ

ಕೆ.ಎಸ್.ಸುನಿಲ್
Published 23 ಸೆಪ್ಟೆಂಬರ್ 2025, 0:30 IST
Last Updated 23 ಸೆಪ್ಟೆಂಬರ್ 2025, 0:30 IST
ಪಣತ್ತೂರು ರೈಲ್ವೆ ಕೆಳಸೇತುವೆಯ ರಸ್ತೆ ಹದಗೆಟ್ಟಿರುವುದು.  ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಪಣತ್ತೂರು ರೈಲ್ವೆ ಕೆಳಸೇತುವೆಯ ರಸ್ತೆ ಹದಗೆಟ್ಟಿರುವುದು.  ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ರಸ್ತೆ ತುಂಬಾ ಗುಂಡಿಗಳು ಮತ್ತು ಕೆಸರು, ಕಿತ್ತು ಹೋದ ಡಾಂಬರು, ಆಮೆ ವೇಗದಲ್ಲಿ ಸಂಚರಿಸುವ ವಾಹನಗಳು, ರಸ್ತೆ ಮೇಲೆ ಚರಂಡಿ ನೀರು, ದೂಳಿನ ನಡುವೆ ವ್ಯಾಪಾರ–ವಹಿವಾಟು, ಮುಖಗವಸು ಧರಿಸಿ ಓಡಾಡುವ ಜನರು.

ಇದು ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಚಿತ್ರಣ‌.

ಕೆ.ಆರ್.ಪುರ ರೈಲು ನಿಲ್ದಾಣ, ದೊಡ್ಡ ನೆಕ್ಕುಂದಿ, ಮಾರತ್‌ಹಳ್ಳಿ, ಕಾಡು ಬೀಸನಹಳ್ಳಿ ವೃತ್ತ, ಬೆಳ್ಳಂದೂರು ರಸ್ತೆ, ಸರ್ಜಾಪುರ ವೃತ್ತ, ಸರ್ಜಾಪುರ ರಸ್ತೆ, ಗುಂಜೂರು ಪಾಳ್ಯ, ಗುಂಜೂರು, ವರ್ತೂರು, ಬಳಗೆರೆ–ವರ್ತೂರು ರಸ್ತೆ, ಪಣತ್ತೂರು ರೈಲ್ವೆ ಕೆಳಸೇತುವೆ, ಪಣತ್ತೂರು ಮುಖ್ಯ ರಸ್ತೆಯಲ್ಲಿ ಸಾಗಿದರೆ ಗುಂಡಿಗಳ ದರ್ಶನವಾಗುತ್ತದೆ.

ADVERTISEMENT

ಒಂದು ಅಡಿಯಷ್ಟು ಆಳದ ಗುಂಡಿಗಳು ಇವೆ. ಮಳೆಗಾಲಕ್ಕೂ ಮುನ್ನ ಸಣ್ಣದಾಗಿದ್ದ ಗುಂಡಿಗಳು ಈಗ ಹೊಂಡಗಳಾಗಿ ಮಾರ್ಪಟ್ಟಿವೆ. ದಟ್ಟಣೆ, ದೂಳಿನ ಜತೆಗೆ ಬಿಸಿಲು ವಾಹನ ಸವಾರರನ್ನು ಅಕ್ಷರಶಃ ಹೈರಾಣಾಗಿಸುತ್ತಿದೆ. ದಟ್ಟಣೆ ನಿವಾರಿಸಲು ಸಂಚಾರ ಪೊಲೀಸರು ಹರಸಹಾಸ ಪಡುತ್ತಿದ್ದಾರೆ.  

ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣಗಳು, ಆಸ್ಪತ್ರೆಗಳು, ವಿಲ್ಲಾಗಳು ಐಟಿ–ಬಿಟಿಗೆ ಹೆಸರಾಗಿರುವ ಮಹದೇವಪುರ ಕ್ಷೇತ್ರ, ಈಗ ದೊಡ್ಡ ಗುಂಡಿಗಳಿಂದಾಗಿ ಅಪಖ್ಯಾತಿ ಪಡೆಯುತ್ತಿದೆ. ನಿತ್ಯ ಲಕ್ಷಾಂತರ ಜನರು ಸಂಚರಿಸುವ ರಸ್ತೆಗಳು ವಿಪರೀತ ಹದಗೆಟ್ಟಿದ್ದು, ವಾಹನ ಚಲಾಯಿಸುವುದು ಸವಾಲಾಗಿದೆ. ಮಳೆ ಬಂದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.

ರಸ್ತೆ ಗುಂಡಿಗಳ ಬಗ್ಗೆ ಬ್ಲ್ಯಾಕ್‌ಬಕ್ ಸಂಸ್ಥಾಪಕ ರಾಜೇಶ್ ಯಬಾಜಿ ಅವರು ಧ್ವನಿ ಎತ್ತಿದ ಬಳಿಕ ಇಲ್ಲಿನ ರಸ್ತೆಗಳು ಗಮನ ಸೆಳೆದಿವೆ.  

ನಿರ್ವಹಣೆಯ ಕೊರತೆಯಿಂದ ಹೆಜ್ಜೆಗೊಂದು ಗುಂಡಿಗಳಿದ್ದು, ಸಂಚರಿಸುವಾಗ ಸ್ವಲ್ಪ ಎಡವಿದರೂ ಕೈ, ಕಾಲು ಮುರಿಯುವುದು ಖಚಿತ. ಡಾಂಬರು ಕಿತ್ತು ಜಲ್ಲಿ, ಕಲ್ಲುಗಳು ಮೇಲೆ ಬಂದಿವೆ. ಸದ್ಯ ಮಳೆ ನಿಂತಿರುವುದರಿಂದ ರಸ್ತೆ ತುಂಬಾ ದೂಳು ಆವರಿಸಿದೆ. ಈ ಭಾಗದ ರಸ್ತೆಗಳಲ್ಲಿ ಹತ್ತು ನಿಮಿಷಗಳ ಪ್ರಯಾಣಕ್ಕೆ ಅಂದಾಜು 20 ರಿಂದ 30 ನಿಮಿಷ ಹಿಡಿಯುತ್ತಿದೆ. ಜಂಕ್ಷನ್‌ಗಳನ್ನು ದಾಟಿ, ಸಾಗುವುದು, ವಾಹನ ಸವಾರರಿಗೆ ಸವಾಲಾಗಿದೆ. 

ಪಣತ್ತೂರು ಮುಖ್ಯ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಡಾಂಬರು ರಸ್ತೆಗಳು ಅಸ್ತಿಪಂಜರದಂತಾಗಿವೆ. ಗುಂಡಿಗಳ ನಡುವೆ ರಸ್ತೆ ಹುಡುಕುವಂತಾಗಿದೆ. ಒಂದು ಗುಂಡಿ ತಪ್ಪಿಸಿ ಮುಂದೆ ಸಾಗುವಷ್ಟರಲ್ಲಿ ಮತ್ತೊಂದು ಗುಂಡಿ ಎದುರಾಗುವುದರಿಂದ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ‌ವರ್ತೂರು, ಸರ್ಜಾಪುರ ರಸ್ತೆಗಳ ಮೂಲಕವೂ ಸಾವಿರಾರು ಐ.ಟಿ ಉದ್ಯೋಗಿಗಳು ಇಲ್ಲಿಗೆ ಬರುತ್ತಾರೆ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದಾಗಿ ಇಲ್ಲಿನ ಸಂಚಾರ ನರಕವಾಗಿ ಪರಿವರ್ತನೆಗೊಂಡಿದೆ. ಮಳೆ ಬಂದಾಗ ರಸ್ತೆ ಯಾವುದು? ಗುಂಡಿ ಯಾವುದು? ಎಂದು ಗೊತ್ತಾಗದಷ್ಟು ನೀರು ತುಂಬಿರುತ್ತದೆ.

ಈ ಮಧ್ಯೆ, ಜಲಮಂಡಳಿ, ಕೆಪಿಟಿಸಿಎಲ್, ಬೆಸ್ಕಾಂ ಮತ್ತು ಇತರೆ ಖಾಸಗಿ ಸಂಸ್ಥೆಗಳು ಆಪ್ಟಿಕಲ್ ಫೈಬರ್ ಕೇಬಲ್ ಹಾಕಲು ರಸ್ತೆಯನ್ನು ಅಗೆದಿವೆ. ಈ ರಸ್ತೆಗಳು, ದೊಡ್ಡ ಅಪಾರ್ಟ್‌ಮೆಂಟ್‌ ಸಮುಚ್ಛಯ ಮತ್ತು ಹಲವು ಶಾಲೆಗಳಿಗೆ ಸಂಪರ್ಕ ಕಲ್ಪಿಸುತ್ತವೆ.

ಅಧಿಕಾರಿಗಳ ವರ್ತನೆಗೆ ಬೇಸರ: 

‘ಕಾಲಮಿತಿಯಲ್ಲಿ ರಸ್ತೆಗಳನ್ನು ದುರಸ್ತಿಗೊಳಿಸಬೇಕಿದ್ದ ಪಾಲಿಕೆ, ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ. ದ್ವಿಚಕ್ರ ವಾಹನ ಸವಾರರ ಬೆನ್ನು ಮೂಳೆ ಮುರಿಯಲಿ, ಗುಂಡಿಗಳಲ್ಲಿ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳಲಿ, ಅದಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಸಂಪರ್ಕ ಕಲ್ಪಿಸುವ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ನಿವಾಸಿಗಳು, ವಾಹನ ಸವಾರರಿಗೆ ದೂಳಿನ ಮಜ್ಜನವಾಗುತ್ತಿದೆ. ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸಲು ಯಾವ ಪುರುಷಾರ್ಥಕ್ಕಾಗಿ ತೆರಿಗೆ ಪಾವತಿಸಬೇಕು? ’ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

‘ಗುಂಡಿಗಳಿಂದಾಗಿ ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಬಸ್ ಚಾಲಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬಳಗೆರೆ– ಪಣತ್ತೂರು ರಸ್ತೆಯಲ್ಲಿ ಸಾಗುವಾಗ ಬೆಳಿಗ್ಗೆ ಹಾಗೂ ಮಧ್ಯಾಹ್ನ ಬಸ್‌ ಚಕ್ರಗಳು ಗುಂಡಿ ಹಾಗೂ ಕೆಸರಿನಲ್ಲಿ ಸಿಲುಕಿಕೊಂಡಿದ್ದವು. ಬಸ್ ಮೇಲಕ್ಕೆ ಎತ್ತಲು ಸಾಹಸ ಮಾಡಬೇಕಾಯಿತು. ಕಳೆದ ವಾರವೂ ಶಾಲೆಯ ಬಸ್‌, ರಸ್ತೆಯಲ್ಲಿ ಗುಂಡಿಯಿಂದಾಗಿ ವಾಲಿತ್ತು’ ಎಂದು ಚಾಲಕ ರವೀಶ್ ಗೋಳು ತೋಡಿಕೊಂಡರು.

ಗುಂಡಿ ಬಿದ್ದಿರುವ ಗುಂಜೂರು ರಸ್ತೆಯಲ್ಲಿ ವಾಹನ ಸಂಚಾರ   

ಕೆಸರಿನ ರಸ್ತೆಯಲ್ಲಿ ಸವಾರರ ಪರದಾಟ:

ಮಾರತ್‌ಹಳ್ಳಿ, ಕಾಡುಬೀಸನಹಳ್ಳಿ ರಸ್ತೆಗಳು ಹದಗೆಟ್ಟಿವೆ. ಕೆಸರು ತುಂಬಿದ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಪರದಾಡುತ್ತಿದ್ದ ದೃಶ್ಯ ಕಂಡು ಬಂತು. ಅದೇ ರೀತಿ ವರ್ತೂರು–ಗುಂಜೂರು ರಸ್ತೆಯಲ್ಲಿಯೂ ವಾಹನ ಸಂಚಾರ ನರಕಯಾತನೆಯಾಗಿದೆ. ಪೆಟ್ರೋಲ್ ಬಂಕ್ ಮತ್ತು ಪೊಲೀಸ್ ಠಾಣೆ ನಡುವಿನ ರಸ್ತೆ ಬಹುತೇಕ ವಾಹನ ನಿಲುಗಡೆ ಸ್ಥಳವಾಗಿ ಬದಲಾಗುತ್ತಿರುವ ಕಾರಣ ಸಂಚಾರಕ್ಕೆ ತೊಂದರೆಯಾಗಿದೆ. ಒಂದು ಭಾಗದಲ್ಲಿ ಕಾಮಗಾರಿ ನಡೆಯುತ್ತಿದ್ದು, ಮತ್ತೊಂದು ಭಾಗ ಹಾಗೆಯೇ ಉಳಿದಿದೆ.

‘ಮನೆ ಬಿಟ್ಟು ಕಚೇರಿ ತಲುಪಲು ದಟ್ಟಣೆ ಮತ್ತು ಮಳೆ ಸಂದರ್ಭದಲ್ಲಿ ಎರಡು ತಾಸು ಸಾಕಾಗುತ್ತಿಲ್ಲ. ಈ ರಸ್ತೆಯಲ್ಲಿ ಸಂಚರಿಸುವುದರಿಂದ ಬೆನ್ನು ನೋವು ಬರುತ್ತದೆ. ಬುಧವಾರ ಮತ್ತು ಗುರುವಾರ ವಿಪರೀತ ದಟ್ಟಣೆ. ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದರೂ ರಸ್ತೆ ದುರಸ್ತಿ ಮಾಡಿಲ್ಲ’ ಎಂದು ಸರ್ಜಾಪುರದ ಟೆಕಿ ಹರ್ಷ ವಿನಾಯಕ ಹೇಳಿದರು.

ಬೆಳ್ಳಂದೂರಿನಂತೆ ಪ್ರಮುಖ ಸಂಪರ್ಕದ ಜಾಲ ಹೊಂದಿರುವ ಕನ್ನೆಲ್ಲಿ ರಸ್ತೆ, ವರ್ತೂರು ರಸ್ತೆ, ಬೋಗನಹಳ್ಳಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಕೆಲವೆಡೆ ರಸ್ತೆಗಳಿಗೆ ಚರಂಡಿ ವ್ಯವಸ್ಥೆಯೇ ಇಲ್ಲ. ಗುಂಜೂರು ಪಾಳ್ಯದ 100 ಅಡಿ ರಸ್ತೆಯಲ್ಲಿ ಸಾಗಿದರೆ ಗುಂಡಿಗಳ ಜತೆಗೆ ಚರಂಡಿ ನೀರು ಹರಿಯುವುದು ಕಾಣಬಹುದು. ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.

ಬಳಗೆರೆ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು 

ಹದಗೆಟ್ಟ ರಸ್ತೆ, ಗುಂಡಿ ಬಿದ್ದ ಮಾರ್ಗಗಳು...

ಕೆ.ಆರ್.ಪುರ ರೈಲು ನಿಲ್ದಾಣ, ದೊಡ್ಡ ನೆಕ್ಕುಂದಿ, ಮಾರತ್‌ಹಳ್ಳಿ, ಕಾಡು ಬೀಸನಹಳ್ಳಿ ವೃತ್ತ, ಬೆಳ್ಳಂದೂರು ರಸ್ತೆ, ಸರ್ಜಾಪುರ ವೃತ್ತ, ಸರ್ಜಾಪುರ ರಸ್ತೆ, ಗುಂಜೂರು ಪಾಳ್ಯ, ಗುಂಜೂರು, ವರ್ತೂರು, ಬಳಗೆರೆ–ವರ್ತೂರು ರಸ್ತೆ, ಪಣತ್ತೂರು ರೈಲ್ವೆ ಕೆಳಸೇತುವೆ, ಪಣತ್ತೂರು ಮುಖ್ಯ ರಸ್ತೆ

‘ಹೆಚ್ಚಿನ ಅನುದಾನ ಅಗತ್ಯ’

ಕ್ಷೇತ್ರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಹೆಚ್ಚಿನ ಅನುದಾನದ ಅಗತ್ಯವಿದೆ. ಸರ್ಕಾರ ನೀಡಿದ ₹25 ಕೋಟಿ ಅನುದಾನ ಯಾವುದಕ್ಕೂ ಸಾಲದು. ಮಹದೇವಪುರದಲ್ಲಿ ದಟ್ಟಣೆ ಮತ್ತು ಹಾಳಾಗಿರುವ ರಸ್ತೆಗಳಿಂದ ಸಮಸ್ಯೆಗಳಾಗಿವೆ. ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲು ಪ್ರಯತ್ನಿಸುತ್ತಿದ್ದೇನೆ. ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಮಂಜುಳಾ ಲಿಂಬಾವಳಿ ಶಾಸಕಿ ‌ಮಹದೇವಪುರ ವಿಧಾನಸಭಾ ಕ್ಷೇತ್ರ

ಬಳಗೆರೆ ರಸ್ತೆಯ ಒಂದು ಭಾಗದಲ್ಲಿ ಕಾಮಗಾರಿ ನಡೆಯುತ್ತಿದೆ.   

ನಾಗರಿಕರ ಅಭಿಪ್ರಾಯ

ಪಣತ್ತೂರು ಸರ್ಕಲ್ ಬಳಿ ಪಾದಚಾರಿ ಮಾರ್ಗವನ್ನು ಬ್ಯಾರಿಕೇಡ್‌ನಿಂದ ಮುಚ್ಚಲಾಗಿದೆ. ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್

ಕಾಂಕ್ರೀಟ್ ರಸ್ತೆ ನಿರ್ಮಿಸಿ

ಮೂರು ವರ್ಷದಿಂದ ಈ ರಸ್ತೆ ಹಾಳಾಗಿದ್ದರೂ ಕೇಳುವವರು ಯಾರೂ ಇಲ್ಲ. ಶಾಶ್ವತವಾದ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿದರೆ ಪ್ರತಿ ವರ್ಷವೂ ಗುಂಡಿ ಮುಚ್ಚುವುದಕ್ಕೆ ಹಣ ವ್ಯಯಿಸುವುದು ತಪ್ಪುತ್ತದೆ. ‌ಮುಚ್ಚಿದ ಗುಂಡಿಗಳು ಸ್ವಲ್ಪ ದಿನಗಳಲ್ಲೆ ಮತ್ತೆ ಬಾಯ್ತೆರೆಯುತ್ತವೆ. ಅದರ ಅಕ್ಕಪಕ್ಕದಲ್ಲೂ ಗುಂಡಿಗಳು ಬೀಳುತ್ತವೆ. ಮಳೆಗೆ ರಸ್ತೆಗಳು ಹೊಂಡಮಯವಾಗುತ್ತಿವೆ.
ಗಿರೀಶ್ ಕಾರು ಚಾಲಕ, ಬಳಗೆರೆ

ಹಳ್ಳಿಗಳ ರಸ್ತೆಯೇ ಚೆಂದ

ಇದನ್ನು ಯಾರಾದರೂ ರಸ್ತೆ ಎನ್ನುತ್ತಾರೆಯೇ?  ಪಶ್ಚಿಮ ಬಂಗಾಳದಿಂದ ಬಂದು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ಧೇನೆ. ನಮ್ಮ ಹಳ್ಳಿಯ ರಸ್ತೆಗಳು ಎಷ್ಟೋ ಚೆನ್ನಾಗಿವೆ. ಅರ್ಧ ಗಂಟೆಯಲ್ಲಿ ಕಚೇರಿಗೆ ಹೋಗುತ್ತಿದ್ದೆ. ಆದರೆ ಈಗ ಗುಂಡಿ ಬಿದ್ದಿರುವ ಕಾರಣ ಎರಡು ತಾಸು ಬೇಕಾಗಿದೆ. ಮಳೆ ಬಂದಾಗೆಲ್ಲ ಗುಂಡಿಗಳಲ್ಲಿ ನೀರು ನಿಂತು ಓಡಾಡಲು ಆಗುವುದಿಲ್ಲ. ಕಂಪನಿಗಳು ಇಲ್ಲಿಂದ ಹೊರ ರಾಜ್ಯಕ್ಕೆ ಹೋಗುತ್ತವೆ.
ಗೌರವ ಸಾಫ್ಟ್‌ವೇರ್ ಉದ್ಯೋಗಿ ಪಣತ್ತೂರು ರಸ್ತೆ

ರಸ್ತೆ ಕಾಣದಷ್ಟು ದೂಳು

ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿರುವುದರಿಂದ ವಿಪರೀತ ದೂಳು ಏಳುತ್ತದೆ. ದೊಡ್ಡ ವಾಹನಗಳು ಸಂಚರಿಸುತ್ತಿದ್ದರೆ ಹಿಂದಿನವರೆಗೆ ರಸ್ತೆ ಕಾಣದಷ್ಟು ದೂಳು ಆವರಿಸಿಕೊಳ್ಳುತ್ತದೆ. ರಸ್ತೆ ಅಕ್ಕಪಕ್ಕ ಅಂಗಡಿ–ಮಳಿಗೆಗಳು ವ್ಯಾಪಾರಿಗಳು ಹಾಗೂ ನಿವಾಸಿಗಳ ಗೋಳು ಹೇಳತೀರದು. ಮೊದಲು ರಸ್ತೆ ದುರಸ್ತಿಪಡಿಸಲು ಕ್ರಮ ಕೈಗೊಳ್ಳಬೇಕು.
ಭಾಗವತ್‌ ವ್ಯಾಪಾರಿ
ಹೊಂಡದಲ್ಲಿ ಸಿಲುಕಿದ ವಾಹನಗಳು ನಾಲ್ಕು ವರ್ಷದಿಂದ ಈ ರಸ್ತೆ ಹಾಳಾಗಿದೆ. ವಿಪರೀತ ದೂಳು ಹಾಗೂ ಗುಂಡಿಗಳು ಬಿದ್ದಿವೆ. ಪಕ್ಕದಲ್ಲಿರುವ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ಗಲೀಜು ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲ. ಹೊಂಡಗಳಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿವೆ. ಕೆಲವರು ಬಿದ್ದು ಗಾಯಗೊಂಡಿರುವ ಉದಾಹರಣೆಯೂ ಇದೆ. ದೂಳು ವಿಪರೀತವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಸೈಯದ್ ಪಾಷಾ ಚಿಕನ್ ವ್ಯಾಪಾರಿ ಗುಂಜೂರು ಪಾಳ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.