ADVERTISEMENT

ಟರ್ಕಿಯಲ್ಲಿ ಬೆಂಗಳೂರು ಎಂಜಿನಿಯರ್ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 19:13 IST
Last Updated 11 ಫೆಬ್ರುವರಿ 2023, 19:13 IST
ವಿಜಯ್‌ಕುಮಾರ್
ವಿಜಯ್‌ಕುಮಾರ್   

ಬೆಂಗಳೂರು: ಕಂಪನಿ ಕೆಲಸಕ್ಕೆಂದು ಹೋಗಿ ನಾಪತ್ತೆಯಾಗಿದ್ದ ಬೆಂಗಳೂರಿನ ಎಂಜಿನಿಯರ್ ವಿಜಯ್‌ಕುಮಾರ್ (36) ಅವರ ಮೃತದೇಹ ಟರ್ಕಿಯಲ್ಲಿ ಅವಶೇಷಗಳಡಿ ಪತ್ತೆಯಾಗಿದೆ.

ಡೆಹರಾಡೂನ್‌ನ ವಿಜಯ್‌ಕುಮಾರ್, ಬೆಂಗಳೂರು ಪೀಣ್ಯದಲ್ಲಿರುವ ಆಮ್ಲಜನಕ ಹಾಗೂ ನೈಟ್ರೋಜನ್ ತಯಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಂಪನಿಯ ಹೊಸ ಘಟಕ ಸ್ಥಾಪನೆ ಕೆಲಸಕ್ಕಾಗಿ ಜ. 25ರಂದು ಟರ್ಕಿಗೆ ಹೋಗಿದ್ದರು. ಟರ್ಕಿಯಲ್ಲಿ ಭೂಕಂಪ ಸಂಭವಿಸಿದ ಬಳಿಕ, ಅವರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ವಿಜಯ್‌ಕುಮಾರ್ ಅವರನ್ನು ಹುಡುಕಿಕೊಡುವಂತೆ ಸಂಬಂಧಿಕರು ಭಾರತೀಯ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದರು.

‘ವಿಜಯ್‌ಕುಮಾರ್ ಅವರು ಉಳಿದುಕೊಂಡಿದ್ದ ಹೋಟೆಲ್‌ ನೆಲಸಮವಾಗಿತ್ತು. ಅದರ ಅವಶೇಷಗಳಡಿ ಶುಕ್ರವಾರ ವಿಜಯ್‌ಕುಮಾರ್ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ರಾಯಭಾರಿ ಕಚೇರಿ ಅಧಿಕಾರಿಗಳು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ’ ಎಂದು ಕಂಪನಿ ಪ್ರತಿನಿಧಿಯೊಬ್ಬರು ತಿಳಿಸಿದರು.

ADVERTISEMENT

‘ಆರಂಭದಲ್ಲಿ ವಿಜಯ್‌ಕುಮಾರ್ ಮೃತದೇಹ ಗುರುತಿಸಲು ಸಾಧ್ಯವಾಗಿರಲಿಲ್ಲ. ಅವರ ಎಡಗೈ ಮೇಲೆ ‘ಓಂ’ ಎಂಬ ಹಚ್ಚೆ ಇತ್ತು. ಅದರ ಫೋಟೊವನ್ನು ಅಧಿಕಾರಿಗಳು, ಕುಟುಂಬಸ್ಥರಿಗೆ ಕಳುಹಿಸಿದ್ದರು. ಹಚ್ಚೆ ನೋಡಿಯೇ ಮೃತದೇಹವನ್ನು ಕುಟುಂಬಸ್ಥರು ಗುರುತಿಸಿದ್ದಾರೆ. ಮೃತದೇಹ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.