(ಸಾಂದರ್ಭಿಕ ಚಿತ್ರ)
ಬೆಂಗಳೂರು: ಸ್ನೇಹಿತನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ಬಗೋಡಿ ಬಳಿಯ ತಿರುಪಾಳ್ಯದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ತಿರುಪಾಳ್ಯ ನಿವಾಸಿ ಮಂದಿರಾ ಮಂಡಲ್ (27) ಕೊಲೆಯಾದ ಮಹಿಳೆ. ಸುಮನ್ ಮಂಡಲ್ (28) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಆರೋಪಿ.
ಪಶ್ಚಿಮ ಬಂಗಾಳದ ಮಂದಿರಾ ಮಂಡಲ್ ಅವರು ಎಂಟು ವರ್ಷಗಳ ಹಿಂದೆ ಬಿಜೋನ್ ಮಂಡಲ್ ಎಂಬಾತನನ್ನು ಮದುವೆಯಾಗಿದ್ದರು. ಕೌಟುಂಬಿಕ ಕಲಹದ ಕಾರಣಕ್ಕೆ ಪತಿಯಿಂದ ದೂರವಾಗಿದ್ದ ಅವರು, ಆರು ವರ್ಷದ ಮಗನ ಜತೆ ತಿರುಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅಪಾರ್ಟ್‍ಮೆಂಟ್‍ನಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಂಡಮಾನ್‍ನಲ್ಲಿ ಬಿಜೋನ್ ನೆಲಸಿದ್ದು, ಆತನ ಸ್ನೇಹಿತನಾದ ಸುಮನ್, ಮಂದಿರಾ ಅವರಿಗೂ ಪರಿಚಿತನಾಗಿದ್ದ. ಆಗಾಗ್ಗೆ ಅವರ ಮನೆಗೆ ಬರುತ್ತಿದ್ದ. ಮಂಗಳವಾರ ರಾತ್ರಿ ಮಂದಿರಾ ಅವರ ಮನೆಗೆ ಬಂದಿದ್ದ ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಈ ಹಂತದಲ್ಲಿ ಆತ ಮಂದಿರಾ ಅವರ ಕತ್ತಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ನಂತರ ಅವರ ಮನೆಯ ಕೊಠಡಿಯಲ್ಲೇ ನೇಣು ಹಾಕಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮೃತಳ ಪೋಷಕರು ಆಕೆಯ ಮನೆಯ ಸಮೀಪದಲ್ಲೇ ವಾಸವಾಗಿದ್ದಾರೆ. ಘಟನಾ ಸಂದರ್ಭದಲ್ಲಿ ಮಂದಿರಾ ಮಗ, ಅಜ್ಜ-ಅಜ್ಜಿಯ ಮನೆಯಲ್ಲಿದ್ದ. ಮಂದಿರಾ ಪೋಷಕರು ರಾತ್ರಿ ಮಗಳ ಮನೆಯ ಬಳಿ ಬಂದಾಗ ಕೊಲೆ ಮತ್ತು ಆತ್ಮಹತ್ಯೆ ಗೊತ್ತಾಗಿದೆ. ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.