
‘ಥಂಪ್! ಸೆಲೆಬ್ರೇಷನ್ ಬೆಂಗಳೂರು’ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಜನರು ಸಂಭ್ರಮದಿಂದ ಓಡಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ಸೂರ್ಯೋದಯಕ್ಕೂ ಮುನ್ನವೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರ ಗುಂಪು, ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಉತ್ಸಾಹದಿಂದ ಉತ್ತಮ ಆರೋಗ್ಯಕ್ಕಾಗಿ ಓಡಿತು. ಈ ಓಟಕ್ಕಾಗಿ ಮಹಿಳೆಯರು ಮತ್ತು ವೃದ್ಧರು ಸಹ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದದ್ದು ‘ಮ್ಯಾರಥಾನ್’ಗೆ ಮೆರಗು ನೀಡಿತು.
ಲೈಫ್ ಈಸ್ ಕಾಲಿಂಗ್ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಲಿಮಿಟೆಡ್ ಸಂಸ್ಥೆಯು ನೈಸ್ ರಸ್ತೆಯಲ್ಲಿ ಹಮ್ಮಿಕೊಂಡಿದ್ದ 12ನೇ ಆವೃತ್ತಿಯ ‘ಥಂಪ್! ಸೆಲೆಬ್ರೇಷನ್ ಬೆಂಗಳೂರು’ ಹಾಫ್ ಮ್ಯಾರಥಾನ್ ಮತ್ತು 10ಕೆ ಓಟದಲ್ಲಿ 4,500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಮಾಧ್ಯಮ ಸಹಯೋಗದಲ್ಲಿ ಈ ಓಟದ ಕಾರ್ಯಕ್ರಮ ನಡೆಯಿತು. ಮುಂಜಾನೆ 5.30ರ ವೇಳೆಗೆ ನಗರದ ವಿವಿಧೆಡೆಯಿಂದ ಬಂದಿದ್ದ ಜನರು, ಸಂಗೀತಕ್ಕೆ ಹೆಜ್ಜೆ ಹಾಕುವ ಜತೆಗೆ ಓಟವನ್ನು ಸಂಭ್ರಮಿಸಿದರು.
ಅನುಭವಿ ಓಟಗಾರರು ಮತ್ತು ಹಿರಿಯರಿಗೆ ಪ್ರತ್ಯೇಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. 5 ಕಿ.ಮೀ. ‘ಸೆಲೆಬ್ರೇಷನ್’ ಓಟದಲ್ಲಿ 94 ವರ್ಷದ ದತ್ತಾತ್ರೇಯ ಎಂಬುವರು ಭಾಗವಹಿಸಿದ್ದರು. ಅವರು ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಹಿರಿಯ ಸದಸ್ಯರಾಗಿದ್ದರು.
20 ಮೈಲಿ, ಹಾಫ್ ಮ್ಯಾರಥಾನ್, 10 ಕಿ.ಮೀ. ಮತ್ತು 5 ಕಿ.ಮೀ. ಸಂಭ್ರಮದ ಓಟವು ವಿವಿಧ ವಿಭಾಗದಲ್ಲಿ ನಡೆದವು. ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ಬಳಿ ಇರುವ ನೈಸ್ ಟೋಲ್ ಪ್ಲಾಜಾದಲ್ಲಿ ಓಟಗಳಿಗೆ ಚಾಲನೆ ನೀಡಲಾಯಿತು. 20 ಮೈಲಿಯ ಪುರುಷರ ಮುಕ್ತ ವಿಭಾಗದಲ್ಲಿ ಸಾತ್ವಿಕ್ ಎಸ್. ಅವರು 12 ಗಂಟೆ 15 ನಿಮಿಷದ ಎರಡು ಸೆಕೆಂಡುಗಳಲ್ಲಿ ಮೊದಲಿಗರಾಗಿ ಓಟ ಮುಗಿಸಿದರು. ಮಹಿಳೆಯರ ಮುಕ್ತ ವಿಭಾಗದಲ್ಲಿ ಲತಿಕಾ ಅರವಿಂದ ಅವರು 3 ಗಂಟೆ 5 ನಿಮಿಷದ 58 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದರು.
ಎರಡನೇ ಓಟವಾದ ಹಾಫ್ ಮ್ಯಾರಥಾನ್‌ಗೆ ಬೆಳಿಗ್ಗೆ 5.45ಕ್ಕೆ ಚಾಲನೆ ನೀಡಲಾಯಿತು. ಪುರುಷರ ಮುಕ್ತ ವಿಭಾಗದಲ್ಲಿ ಓಜಸ್ ಸಾಹು ಅವರು 1 ಗಂಟೆ 25 ನಿಮಿಷ 24 ಸೆಕೆಂಡುಗಳಲ್ಲಿ ಓಟ ಮುಗಿಸಿದರು. ಮಹಿಳಾ ಮುಕ್ತ ವಿಭಾಗದಲ್ಲಿ ಸಪ್ನಾ ಅಗರ್ವಾಲ್ ವಿಜೇತರಾದರು. ಅವರು 1 ಗಂಟೆ 59 ನಿಮಿಷ 12 ಸೆಕೆಂಡುಗಳಲ್ಲಿ ಓಟ ಮುಗಿಸಿದರು.
10 ಕಿ.ಮೀ. ಪುರುಷರ ಮುಕ್ತ ವಿಭಾಗದಲ್ಲಿ ಮುಗೇಶ್ ಎಂ.ಯು. ಅವರು 42 ನಿಮಿಷ 57 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಕ ಜಯಶೀಲರಾದರು. ಮಹಿಳೆಯರ ವಿಭಾಗದಲ್ಲಿ ಶ್ರಿಯಾ ಗಾಣಿಗರ್ ಅವರು 57 ನಿಮಿಷ 46 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಮೊದಲಿಗರಾಗಿ ಗುರಿ ತಲುಪಿದರು.
5 ಕಿ.ಮೀ. ಸಂಭ್ರಮದ ಓಟದಲ್ಲಿ ಮಕ್ಕಳು, ವೃದ್ಧರು ಸೇರಿ ವಿವಿಧ ವಯೋಮಾನದವರು ಪಾಲ್ಗೊಂಡಿದ್ದರು. ಹಿರಿಯ ನಾಗರಿಕರಿಗೆ 5 ಕಿ.ಮೀ. ನಡಿಗೆಯೂ ಇತ್ತು. ಹರ್ಷೋದ್ಗಾರದೊಂದಿಗೆ ಜನರು ಹೆಜ್ಜೆ ಹಾಕಿದರು.
5 ಕಿ.ಮೀ. ರಿಲೆ ಹಾಗೂ 10 ಕಿ.ಮೀ. ಓಟದಲ್ಲಿ 50 ಅಂಧರು ಕೂಡ ಭಾಗವಹಿಸಿದ್ದು ವಿಶೇಷ. ಸಹಾಯಕರೊಂದಿಗೆ ಅವರು ಓಡಿದರು. 4 ಗಂಟೆಗಳ ಕಾಲ ನಡೆದ ಓಟದ ಈ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತವು ಜನಸಮೂಹವನ್ನು ರಂಜಿಸಿತು. ಸಂಗೀತ ಬ್ಯಾಂಡ್‌ಗಳು, ನೃತ್ಯ ಪ್ರದರ್ಶನಗಳು ಓಟದ ಸಂಭ್ರಮಕ್ಕೆ ಮೆರಗು ನೀಡಿತು. ಓಟಗಾರರನ್ನು ಪ್ರೋತ್ಸಾಹಿಸಲು ಮಾರ್ಗ ಮಧ್ಯೆ ಮನರಂಜನೆ ಮತ್ತು ಪ್ರದರ್ಶನಗಳು ಸಹ ಇದ್ದವು.
ಓಟಕ್ಕೆ ಬೆಂಗಳೂರಿಗರಿಂದ ಉತ್ತಮ ಸ್ಪಂದನೆ ದೊರೆತಿದ್ದು ಸಂತಸವನ್ನುಂಟು ಮಾಡಿದೆ. ಗ್ರಾಮೀಣ ಶಿಕ್ಷಣಕ್ಕೆ ಪ್ರೋತ್ಸಾಹದ ಜತೆಗೆ ಮಕ್ಕಳ ಶಿಕ್ಷಣ ಮತ್ತು ಕ್ರೀಡಾ ಸೌಲಭ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆಸುನಿಲ್ ಪಿ.ವಿ. ಲೈಫ್ ಈಸ್ ಕಾಲಿಂಗ್ ಸ್ಪೋರ್ಟ್ಸ್‌ನ ರೇಸ್ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.