ADVERTISEMENT

ಕಸಗುಡಿಸುವ ಯಂತ್ರಗಳಿಗೆ ದುಬಾರಿ ಬಾಡಿಗೆ: ಮರುಪರಿಶೀಲನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 0:23 IST
Last Updated 22 ನವೆಂಬರ್ 2025, 0:23 IST
<div class="paragraphs"><p>ಕಸಗುಡಿಸುವ ಯಂತ್ರ</p></div>

ಕಸಗುಡಿಸುವ ಯಂತ್ರ

   

ಬೆಂಗಳೂರು: ಯಾಂತ್ರಿಕ ಕಸ ಗುಡಿಸುವ ಯಂತ್ರಗಳಿಗೆ (ಮೆಕ್ಯಾನಿಕಲ್‌ ಸ್ವೀಪಿಂಗ್ ಮಷಿನ್‌) ದುಬಾರಿ ಬಾಡಿಗೆ ನೀಡುವುದಕ್ಕೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಈ ಯೋಜನೆಯ ವೆಚ್ಚದ ಬಗ್ಗೆ ಮೂರನೇ ವ್ಯಕ್ತಿಯ ಮೂಲಕ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರವು ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಸೂಚಿಸಿದೆ.

46 ಕಸ ಗುಡಿಸುವ ಯಂತ್ರಗಳಿಗೆ ₹613 ಕೋಟಿ ಬಾಡಿಗೆ ನೀಡುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಕಸ ಗುಡಿಸುವ ಯಂತ್ರಗಳಿಗೆ ದುಬಾರಿ ಬಾಡಿಗೆ ನೀಡುವಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ, ಜೆಡಿಎಸ್ ಸೇರಿದಂತೆ ರಾಜಕೀಯ ಪಕ್ಷಗಳು ಆರೋಪಿಸಿದ್ದವು. ಹೀಗಾಗಿ ಮರುಮೌಲ್ಯಮಾಪನಕ್ಕೆ ಸರ್ಕಾರ ಸೂಚನೆ ನೀಡಿದೆ.

ADVERTISEMENT

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. ಯಾವುದೇ ಟೆಂಡರ್ ಕರೆಯುವ ಮೊದಲು ವೆಚ್ಚದ ಅಂದಾಜುಗಳನ್ನು ಮರುಮೌಲ್ಯಮಾಪನ ಮಾಡಲು ಮೂರನೇ ವ್ಯಕ್ತಿಯ ಏಜೆನ್ಸಿಯನ್ನು ನೇಮಿಸಬೇಕು ಎಂದು ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಜಿಬಿಎ ವಿವಿಧ ಕಸ ಗುಡಿಸುವ ಯಂತ್ರಗಳ ಮಾದರಿಗಳು ಮತ್ತು ವಿಶೇಷಣಗಳನ್ನು ಹೋಲಿಸಬೇಕು ಮತ್ತು ಐದು ಪಾಲಿಕೆಗಳಿಗೆ ಹೆಚ್ಚು ಸೂಕ್ತವಾದ ಬ್ರ್ಯಾಂಡ್ ಮತ್ತು ವೈಶಿಷ್ಟ್ಯಗಳನ್ನು ಶಿಫಾರಸು ಮಾಡಬೇಕು’ ಎಂದು ತಿಳಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆದೇಶದ ಮೇರೆಗೆ ತುಷಾರ್‌ ಗಿರಿನಾಥ್ ಪತ್ರ ಬರೆದಿದ್ದಾರೆ.

ಒಟ್ಟು ₹781.08 ಕೋಟಿ ವೆಚ್ಚದಲ್ಲಿ ಏಳು ವರ್ಷಗಳ ಕಾಲ 59 ಕಸ ಗುಡಿಸುವ ಯಂತ್ರಗಳನ್ನು ಬಾಡಿಗೆಗೆ ಪಡೆಯಲು ಆಡಳಿತಾತ್ಮಕ ಅನುಮೋದನೆ ನೀಡುವಂತೆ ಜಿಬಿಎ ಅಕ್ಟೋಬರ್‌ನಲ್ಲಿ ನಗರಾಭಿವೃದ್ಧಿ ಇಲಾಖೆಯನ್ನು ಕೋರಿತ್ತು. ನಗರಾಭಿವೃದ್ಧಿ ಇಲಾಖೆಯು ಯೋಜನೆಯನ್ನು ಪರಿಷ್ಕರಿಸಿತ್ತು. ಯಂತ್ರಗಳ ಸಂಖ್ಯೆಯನ್ನು 46ಕ್ಕೆ ಮತ್ತು ವೆಚ್ಚವನ್ನು ₹ 613.25 ಕೋಟಿಗೆ ಇಳಿಸಿತ್ತು. ರಾಜ್ಯ ಸಚಿವ ಸಂಪುಟವು ಇದನ್ನು ಅಂಗೀಕರಿಸಿತ್ತು. ಆದರೂ ಇದು ದುಬಾರಿ ಬೆಲೆ ಎಂದು ಆಕ್ಷೇಪಕ್ಕೆ ಒಳಗಾಗಿತ್ತು.

‘ಯಂತ್ರಗಳನ್ನು ಖರೀದಿಸಲು ₹308 ಕೋಟಿ ಸಾಕಾಗುತ್ತದೆ. ಆದರೆ, ₹ 613 ಕೋಟಿ ವೆಚ್ಚ ಮಾಡಿ ಬಾಡಿಗೆ ಪಡೆಯುತ್ತಿರುವುದು ದೊಡ್ಡ ಹಗರಣ. ಕೇಂದ್ರ ಸರ್ಕಾರವು ₹ 72 ಲಕ್ಷಕ್ಕೆ ಒಂದು ವಾಹನವನ್ನು ಖರೀದಿಸಿದರೆ, ರಾಜ್ಯ ಸರ್ಕಾರವು ₹ 2.5 ಕೋಟಿ ಖರ್ಚು ಮಾಡುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದ್ದರು.

ಮೆಕ್ಯಾನಿಕಲ್‌ ಯಂತ್ರದ ಮೂಲಕ ಗಂಟೆಗೆ 2 ಕಿ.ಮೀ. ಮಾತ್ರ ಸ್ವಚ್ಛಗೊಳಿಸಬಹುದು. ಒಂದು ಗಂಟೆಯಲ್ಲಿ 40 ಕಿ.ಮೀ. ಸ್ವಚ್ಛಗೊಳಿಸಿದಂತೆ ಬಿಲ್ ಮಾಡುತ್ತಾರೆ. ನಗರದ ಸಂಚಾರ ದಟ್ಟಣೆಯ ನಡುವೆ ಇಷ್ಟು ವೇಗವಾಗಿ ಸ್ವಚ್ಛಗೊಳಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದರು.

ಕಸ ಪೊರಕೆ (ಸಾಂದರ್ಭಿಕ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.