ಬೆಂಗಳೂರು: ನಗರದಲ್ಲಿ ವಾಹನ ದಟ್ಟಣೆಯಲ್ಲಿ ತ್ವರಿತವಾಗಿ ಔಷಧಿಗಳು ಹಾಗೂ ಇತರ ವೈದ್ಯಕೀಯ ಪರಿಕರಗಳನ್ನು ವಾಣಿಜ್ಯ ಡ್ರೋನ್‌ಗಳ ಮೂಲಕ ಕಳುಹಿಸುವ ವ್ಯವಸ್ಥೆ ಮೂರು ವರ್ಷಗಳ ನಂತರ ಆರಂಭವಾಗಿದೆ.
ಈ ಕುರಿತು ಮಾಹಿತಿ ನೀಡಿದ ದೆಹಲಿ ಮೂಲದ ಸ್ಕೈ ಏರ್ ಕಂಪನಿಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಂಕಿತ್ ಕುಮಾರ್, ‘ನಗರದ ಕೋಣನಕುಂಟೆ ಮತ್ತು ಕನಕಪುರ ರಸ್ತೆಗಳಲ್ಲಿ ಈ ಸೌಲಭ್ಯ ಸದ್ಯಕ್ಕೆ ಲಭ್ಯವಿದೆ. ಈ ಪ್ರದೇಶ ವ್ಯಾಪ್ತಿಯ ಜನರು ಡ್ರೋನ್ ಮೂಲಕ ಕೇವಲ ಏಳು ನಿಮಿಷಗಳಲ್ಲಿ ತಮ್ಮ ವಸ್ತುಗಳನ್ನು ಪಡೆಯಬಹುದಾಗಿದೆ. ಎರಡು ವರ್ಷಗಳಿಂದ ಮಾನವ ರಹಿತ ಡ್ರೋನ್ ಬಳಕೆಯ ವಿಷಯ ನಗರದಲ್ಲಿ ದಟ್ಟವಾಗಿದ್ದರೂ, ಈ ಸೌಲಭ್ಯ ಮೊದಲು ದೆಹಲಿಯಲ್ಲಿ ಪ್ರಾರಂಭಗೊಂಡಿತು’ ಎಂದಿದ್ದಾರೆ.
‘ಗುರುಗ್ರಾಮದ ಸೆಕ್ಟರ್ 92ರಲ್ಲಿ ಡ್ರೋನ್ ಸೌಲಭ್ಯ ಆರಂಭಗೊಂಡಿತು. 7.5 ಕಿ.ಮೀ. ದೂರವನ್ನು ರಸ್ತೆ ಮೂಲಕ ಕ್ರಮಿಸಲು ಕನಿಷ್ಠ 15 ನಿಮಿಷ ಬೇಕು. ಆದರೆ, ಡ್ರೋನ್ ಮೂಲಕ ಕೇವಲ 3 ರಿಂದ 4 ನಿಮಿಷಗಳು ಸಾಕು. ವಾಣಿಜ್ಯ ಡ್ರೋನ್‌ಗೆ ಉತ್ತಮ ಪ್ರತಿಕ್ರಿಯೆ ಇದ್ದು, ಗುರುಗ್ರಾಮದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 10 ಲಕ್ಷ ಡೆಲಿವರಿಯನ್ನು ಪೂರ್ಣಗೊಳಿಸಿದ್ದೇವೆ. ಇದರ ಯಶಸ್ಸಿನಲ್ಲೇ ಡ್ರೋನ್ ಸೌಲಭ್ಯವನ್ನು ಬೆಂಗಳೂರಿಗೂ ವಿಸ್ತರಿಸಲಾಗಿದೆ’ ಎಂದಿದ್ದಾರೆ.
‘ಬೇಡಿಕೆ ಮತ್ತು ಮೂಲಸೌರ್ಕಯ ಆಧರಿಸಿ ಮಾರ್ಗ ನಿರ್ಧರಿಸಲಾಗುತ್ತದೆ. ಈ ಡ್ರೋನ್‌ಗಳು ಅನುಮೋದಿತ ಮಾರ್ಗಗಳಲ್ಲಿ ಸಮುದ್ರ ಮಟ್ಟದಿಂದ 120 ಮೀಟರ್ ಎತ್ತರದಲ್ಲಿ ಹಾರಬಹುದು. ಸೇನಾ ನೆಲೆಯ ಮೇಲೆ ಹಾರಾಟ ನಡೆಸುವಂತಿಲ್ಲ. ಆದರೆ, ನಾವು ಆಯ್ಕೆ ಮಾಡಿಕೊಂಡಿರುವ ಪ್ರದೇಶಗಳಲ್ಲಿ ಯಾವುದೇ ಸೇನಾ ನೆಲೆಗಳಿಲ್ಲದಿದ್ದರೂ, ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಈ ಪ್ರದೇಶದಲ್ಲಿದೆ. ಅವರೊಂದಿಗೆ ಸಮನ್ವಯ ಸಾಧಿಸುವ ವಿಶ್ವಾಸವಿದೆ’ ಎಂದು ಕುಮಾರ್ ಮಾಹಿತಿ ನೀಡಿದ್ದಾರೆ.
‘ಪ್ರತಿ ಹಾರಾಟದಲ್ಲಿ ಈ ಡ್ರೋನ್ 10 ಕೆ.ಜಿ. ತೂಕದ ವಸ್ತುವನ್ನು ಹೊತ್ತು ಹಾರಬಲ್ಲದು. 20 ಮೀಟರ್ ಎತ್ತರದವರೆಗೂ ಇಳಿದು ವಸ್ತುಗಳನ್ನು ಇಳಿಸಬಲ್ಲದು. ಇದಕ್ಕಾಗಿ ಸ್ಕೈ ವಿಂಚ್ ಎಂಬ ವ್ಯವಸ್ಥೆ ಅಳವಡಿಸಲಾಗಿದೆ. ಇದು ಸುರಕ್ಷಿತವಾಗಿ ವಸ್ತುಗಳನ್ನು ನಿರ್ದಿಷ್ಟ ಜಾಗದಲ್ಲಿ ಇಳಿಸಲಿದೆ’ ಎಂದು ತಿಳಿಸಿದ್ದಾರೆ.
‘ಭವಿಷ್ಯದ ಸರಕು ಸಾಗಣೆ ವ್ಯವಸ್ಥೆಯು ಡ್ರೋನ್ ಅನ್ನೇ ಅವಲಂಬಿಸಲಿದೆ. ಡ್ರೋನ್ ಮೂಲಕ ಪ್ರತಿ ವಸ್ತು ತಲುಪಿಸಿದಲ್ಲಿ ವಾತಾವರಣಕ್ಕೆ ಸೇರಬಹುದಾದ 520 ಗ್ರಾಂ ಇಂಗಾಲವನ್ನು ತಡೆಯಬಹುದಾಗಿದೆ. ಸ್ಕೈಏರ್ ಕಂಪನಿಯು ಬ್ಲೂಡಾರ್ಟ್, ಡಿಟಿಡಿಸಿ, ಶಿಪ್‌ರಾಕೆಟ್ ಮತ್ತು ಇಕಾಮ್ ಎಕ್ಸ್‌ಪ್ರೆಸ್‌ನಂತ ಕಂಪನಿಗಳನ್ನು ತನ್ನ ಗ್ರಾಹಕರನ್ನಾಗಿ ಹೊಂದಿದೆ. ಶೀಘ್ರದಲ್ಲಿ ಬನ್ನೇರುಘಟ್ಟ ಪ್ರದೇಶಕ್ಕೂ ಸೌಲಭ್ಯ ವಿಸ್ತರಿಸಲಿದ್ದೇವೆ. ಜತೆಗೆ ಆಹಾರವನ್ನೂ ಡ್ರೋನ್ ಮೂಲಕ ತಲುಪಿಸುವ ವ್ಯವಸ್ಥೆಯನ್ನೂ ಜಾರಿಗೆ ತರಲಿದ್ದೇವೆ’ ಎಂದು ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ಮೂಲದ ಸ್ಕಾನ್‌ಡ್ರೋನ್ ಎಂಬ ಕಂಪನಿಯು ಗರಿಷ್ಠ 200 ಕೆ.ಜಿ. ತೂಕವನ್ನು ಹೊತ್ತು ಸಾಗುವ ಡ್ರೋನ್ ಪರಿಚಯಿಸುವುದಾಗಿ ಘೋಷಿಸಿತ್ತು. ಇದರ ಮೂಲಕ ಕಸಿಗಾಗಿ ಅಂಗಾಂಗ ಸಾಗಣೆ, ವೈದ್ಯಕೀಯ ಉಪಕರಣಗಳನ್ನು ಸಾಗಿಸಲು ಅನುಕೂಲವಾಗಲಿದೆ ಎಂದು ಕಂಪನಿ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.