ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗದ ಆರ್.ವಿ. ರಸ್ತೆ ನಿಲ್ದಾಣದಲ್ಲಿ ಸ್ಟೀಲ್ ಬ್ಯಾರಿಕೇಡ್‌ಗಳನ್ನು ಬಿಎಂಆರ್‌ಸಿಎಲ್ ಅಳವಡಿಸಿದೆ.
ಆರ್.ವಿ. ರಸ್ತೆ ಇಂಟರ್‌ಚೇಂಜ್ ನಿಲ್ದಾಣವಾಗಿದ್ದು, ಹಳದಿ ಮಾರ್ಗ ಮತ್ತು ಹಸಿರು ಮಾರ್ಗ ಇಲ್ಲಿ ಸಂಪರ್ಕಿಸುತ್ತವೆ. ಜನದಟ್ಟಣೆ ವಿಪರೀತ ಆಗಿರುವುದರಿಂದ ಅಪಾಯ ಎದುರಾಗುವ ಸಾಧ್ಯತೆ ಬಗ್ಗೆ ‘ಪ್ರಜಾವಾಣಿ’ ಗಮನ ಸೆಳೆದಿತ್ತು.
‘ಆರ್.ವಿ. ರಸ್ತೆ ನಿಲ್ದಾಣದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದ್ದು, ಅಂತಿಮ ಹಂತಕ್ಕೆ ಬಂದಿದೆ. ಇದೇ ರೀತಿ ಹಳದಿ ಮಾರ್ಗದ ನಿಲ್ದಾಣಗಳಲ್ಲಿ ಎಲ್ಲೆಲ್ಲಿ ಅಗತ್ಯವಿದೆ ಎಂದು ನೋಡಿಕೊಂಡು ಸ್ಟೀಲ್ ಬ್ಯಾರಿಕೇಡ್ ಅಳವಡಿಸಲಾಗುವುದು’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.
ಆರ್.ವಿ. ರಸ್ತೆ–ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ 19.15 ಕಿ.ಮೀ. ಮಾರ್ಗದಲ್ಲಿ ನಮ್ಮ ಮೆಟ್ರೊ ಸಂಚಾರಕ್ಕೆ ಆ.10ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಆ.11ರಿಂದ ವಾಣಿಜ್ಯ ಸಂಚಾರ ಆರಂಭವಾಗಿತ್ತು. 25 ನಿಮಿಷಕ್ಕೊಂದು ಮೆಟ್ರೊ ಸಂಚರಿಸುತ್ತಿರುವುದರಿಂದ ಆರ್.ವಿ. ರಸ್ತೆ ಮೆಟ್ರೊ ನಿಲ್ದಾಣದಲ್ಲಿ ವಿಪರೀತ ಜನದಟ್ಟಣೆ ಉಂಟಾಗಿದೆ.
‘ಪ್ಲಾಟ್‌ಫಾರ್ಮ್ ಸ್ಕ್ರೀನಿಂಗ್ ಡೋರ್ (ಪಿಎಸ್‌ಡಿ) ಇಲ್ಲವೇ ಬ್ಯಾರಿಕೇಡ್ ಅಳವಡಿಸದೇ ಇದ್ದರೆ ಸಮಸ್ಯೆ ಉಂಟಾಗಲಿದೆ’ ಎಂದು ಸಾರ್ವಜನಿಕರು ಆಗ್ರಹಿಸಿದ್ದರು. ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ ಎಂಬುದರ ಬಗ್ಗೆಯೂ ಗಮನ ಸೆಳೆದಿದ್ದರು.
‘ಆಸನಗಳ ವ್ಯವಸ್ಥೆ ಶೀಘ್ರದಲ್ಲಿ ಮಾಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.