ADVERTISEMENT

ಪ್ರಯಾಣ ದರ ವಿಪರೀತ: ಮೆಟ್ರೊ ಪಾಸ್‌ಗಾಗಿ ವಿದ್ಯಾರ್ಥಿಗಳ ಅಭಿಯಾನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 23:39 IST
Last Updated 30 ಜುಲೈ 2025, 23:39 IST
ಮೆಟ್ರೊ ರೈಲು
ಮೆಟ್ರೊ ರೈಲು   

ಬೆಂಗಳೂರು: ‘ನಮ್ಮ ಮೆಟ್ರೊ’ದಲ್ಲಿ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ನೀಡಬೇಕು ಎಂದು ‘ಕಲೆಕ್ಟಿವ್‌ ಸ್ಟೂಡೆಂಟ್ಸ್‌ ಬೆಂಗಳೂರು’ ಯುವ ಸಂಘಟನೆಯು ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ.

ಒಂದು ತಿಂಗಳಿನಿಂದ ನಡೆಯುತ್ತಿರುವ ಈ ಅಭಿಯಾನದಲ್ಲಿ 30ಕ್ಕೂ ಅಧಿಕ ಕಾಲೇಜುಗಳ 450ಕ್ಕೂ ಅಧಿಕ ವಿದ್ಯಾರ್ಥಿಗಳು ಸಹಿ ಮಾಡಿದ್ದಾರೆ. 1000 ಸಹಿಗಳಾದ ಮೇಲೆ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ‘ಕಲೆಕ್ಟಿವ್‌ ಸ್ಟೂಡೆಂಟ್ಸ್‌ ಬೆಂಗಳೂರು’ ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.

ಎಲ್ಲ ಮೆಟ್ರೊ ನಿಲ್ದಾಣಗಳಿಂದ ಫೀಡರ್‌ ಬಸ್‌ಗಳು ಇರಬೇಕು. ಆಗ ಮೆಟ್ರೊ ನಿಲ್ದಾಣಗಳಿಂದ ಕೊನೇ ಮೈಲಿ ತಲುಪಲು ಸುಲಭವಾಗಲಿದೆ. ಮೆಟ್ರೊದಲ್ಲಿ ಸಂಚರಿಸಲು ರಿಯಾಯಿತಿ ದರದಲ್ಲಿ ಪಾಸ್‌ ನೀಡಿದರೆ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ಸಂಚರಿಸಲು ಸಾಧ್ಯವಾಗಲಿದೆ ಎಂದು ಅಭಿಯಾನದಲ್ಲಿ ತೊಡಗಿರುವವರು ತಿಳಿಸಿದರು.

ADVERTISEMENT

ಮೆಟ್ರೊ ಪ್ರಯಾಣ ದರವನ್ನು ಈ ವರ್ಷ ಶೇ 71ರಷ್ಟು ಹೆಚ್ಚಳ ಮಾಡಲಾಗಿದೆ. ಇದು ವಿದ್ಯಾರ್ಥಿಗಳಿಗೆ ದುಬಾರಿಯಾಗಿದೆ. ಖಾಸಗಿ ವಾಹನ ಅಥವಾ ಕ್ಯಾಬ್‌ಗಳಲ್ಲಿ ನಿತ್ಯ ಸಂಚರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಹೈದರಾಬಾದ್ ಸಹಿತ ಕೆಲವು ನಗರಗಳ ಮೆಟ್ರೊಗಳಲ್ಲಿ ವಿದ್ಯಾರ್ಥಿಗಳಿಗೆ  ಪಾಸ್‌ ನೀಡಲಾಗುತ್ತಿದೆ. ಮುಂಬೈ, ದೆಹಲಿಯಲ್ಲಿ ವಿದ್ಯಾರ್ಥಿಗಳ ಗುರುತಿನ ಚೀಟಿ ತೋರಿಸಿದರೆ ರಿಯಾಯಿತಿ ನೀಡಲಾಗುತ್ತಿದೆ. ಇದೇ ರೀತಿ ಬೆಂಗಳೂರಿನಲ್ಲಿಯೂ ನೀಡಬೇಕು ಎಂಬುದು ನಮ್ಮ ನ್ಯಾಯಯುತ ಬೇಡಿಕೆ. ಅನೇಕ ಎಂಜಿನಿಯರಿಂಗ್‌ ಕಾಲೇಜುಗಳು ಹೊರವಲಯದಲ್ಲಿವೆ. ಅಲ್ಲೆಲ್ಲ ಮೆಟ್ರೊ ಸಂಪರ್ಕ ಇದೆ. ಆದರೆ, ಅಧಿಕ ದರದಿಂದಾಗಿ ಸಂಚರಿಸುವುದು ಕಷ್ಟವಾಗಿದೆ ಎಂದು ಸಂಘಟನೆಯ ಸದಸ್ಯರಾದ ಶಾಲೋಮ್ ಗೌರಿ, ಅಮಲ್‌ನಾಥ್‌ ಹೇಳಿದರು.

‘ನಮ್ಮ ಮೆಟ್ರೊ ಪ್ರಯಾಣ ದರ ಹೆಚ್ಚಿಸಿದಾಗ ಬೆಂಗಳೂರು ಮೆಟ್ರೊ ಪ್ರಯಾಣಿಕರ ಸಂಘವು ಪ್ರತಿಭಟನೆ ನಡೆಸಿತ್ತು. ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಹಿರಿಯ ನಾಗರಿಕರಿಗೂ ಪಾಸ್‌ ನೀಡಬೇಕು ಎಂದು ಆಗಲೇ ನಾವು ಬಿಎಂಆರ್‌ಸಿಎಲ್‌ನ ಅಧಿಕಾರಿಗಳನ್ನು ಒತ್ತಾಯಿಸಿದ್ದೆವು. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಕೂಡ ಪ್ರತ್ಯೇಕ ನಿಗಮಗಳಾಗಿವೆ. ಅಲ್ಲಿ ರಿಯಾಯಿತಿ ನೀಡಲು ಸಾಧ್ಯವಾಗುವುದಾದರೆ, ಅಂಥದ್ದೇ ಸಂಸ್ಥೆಯಾಗಿರುವ ಮೆಟ್ರೊದಲ್ಲಿ ಯಾಕೆ ಸಾಧ್ಯವಿಲ್ಲ’ ಎಂದು ಮೆಟ್ರೊ ಪ್ರಯಾಣಿಕರ ಸಂಘದ ಸಂಚಾಲಕ ರಾಜೇಶ್‌ ಭಟ್ ಪ್ರಶ್ನಿಸಿದರು.

ಕುಟುಂಬಗಳ ಆದಾಯವು ಬೆಲೆ ಏರಿಕೆಯ ಪ್ರಮಾಣದಲ್ಲಿ ಏರಿಕೆ ಕಾಣದೇ ಸ್ಥಗಿತಗೊಂಡಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನಾ ಶುಲ್ಕ ಹೆಚ್ಚಳವಾಗಿದೆ. ಮೆಟ್ರೊ ದರ ಕೂಡ ಹೆಚ್ಚಳ ಆಗಿರುವುದು ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ. ವಿದ್ಯಾರ್ಥಿಗಳಷ್ಟೇ ಅಲ್ಲ, ಬಡವರು, ದಮನಿತರ ಕುಟುಂಬಗಳ ಕಾರ್ಮಿಕರಿಗೂ ಹೊರೆಯಾಗಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘದ ಕರ್ನಾಟಕ ಸಂಚಾಲಕಿ ಲೇಖಾ ಅಡವಿ ತಿಳಿಸಿದರು.

ಮೆಟ್ರೊ ದರ ವಿಪರೀತ ಹೆಚ್ಚಳ ಮಾಡಿರುವುದರಿಮದ ವಿದ್ಯಾರ್ಥಿಗಳು ಮೆಟ್ರೊವನ್ನು ಕಡಿಮೆ ಬಳಕೆ ಮಾಡುತ್ತಿದ್ದಾರೆ. ಬಸ್‌ಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಬಹುತೇಕ ಮಹಿಳೆಯರು, ವಿದ್ಯಾರ್ಥಿನಿಯರು ಬಸ್‌ಗಳಲ್ಲೇ ಸಂಚರಿಸುತ್ತಿದ್ದಾರೆ. ಮೆಟ್ರೊ ಪಾಸ್‌ ನೀಡಿದರೆ ಮೆಟ್ರೊ ಪ್ರಯಾಣಿಕರ ಪ್ರಮಾಣ ಹೆಚ್ಚಾಗಲಿದೆ ಎಂದು ಸಾರ್ವಜನಿಕ ಸಾರಿಗೆ ಅಭಿಯಾನದ ಕಾರ್ಯಕರ್ತ ಶ್ರೀನಿವಾಸ್ ಅಲವಿಲ್ಲಿ ಅಭಿಪ್ರಾಯಪಟ್ಟರು.

ಸಂಜೆ ಕಾಲೇಜಿನವರಿಗೆ ಬಸ್‌ ಅಗತ್ಯ

ಸಂಜೆ ಕಾಲೇಜಿನಲ್ಲಿ ಓದುತ್ತಿರುವವರು ರಾತ್ರಿ 8.30ರ ನಂತರ ತರಗತಿ ಮುಗಿದ ಬಳಿಕ ಮನೆಗೆ ತೆರಳಲು ಪರದಾಟ ನಡೆಸಬೇಕಾಗಿದೆ. ಈ ಸಮಯದಲ್ಲಿ ಬಿಎಂಟಿಸಿ ಬಸ್‌ಗಳ ಸಂಖ್ಯೆ ಕಡಿಮೆ ಇರುತ್ತದೆ. ಜನದಟ್ಟಣೆ ಹೆಚ್ಚಿರುತ್ತದೆ. ಅದಕ್ಕಾಗಿ ಬಿಎಂಟಿಸಿ ಫೀಡರ್‌ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂದು  ಶಾಲೋಮ್ ಗೌರಿ ಆಗ್ರಹಿಸಿದರು. ಒಂದೆರಡು ಕಿಲೋಮೀಟರ್‌ ಇದ್ದರೆ ನಡೆದುಕೊಂಡೇ ಹೋಗೋಣ ಎಂದು ಸಾಗುವ ವಿದ್ಯಾರ್ಥಿಗಳು ಹಲವು ಬಾರಿ ಕಳ್ಳರ ಹಾವಳಿಗೆ ಸಿಲುಕಿ ಮೊಬೈಲ್‌ ಹಣ ಕಳೆದುಕೊಂಡಿದ್ದಾರೆ ಎಂದು ಅವರು ವಿವರಿಸಿದರು. ಮೆಟ್ರೊ ಫೀಡರ್‌ ಬಸ್‌ಗಳನ್ನು ಕಾಲೇಜುಗಳಿಂದ ಮೆಟ್ರೊ ನಿಲ್ದಾಣಕ್ಕೂ ಆರಂಭಿಸಬೇಕು ಎಂದು ಅಮಲ್‌ನಾಥ್‌ ಒತ್ತಾಯಿಸಿದರು.

46 ವಸತಿ ಪ್ರದೇಶಗಳಿಗೆ ಫೀಡರ್‌ ಬಸ್‌

60 ಮೆಟ್ರೊ ನಿಲ್ದಾಣಗಳಿದ್ದು 46 ನಿಲ್ದಾಣಗಳಿಂದ ಬಿಎಂಟಿಸಿ ಫೀಡರ್‌ ಬಸ್‌ಗಳ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಜನವಸತಿ ಪ್ರದೇಶಗಳಿಗೆ ಅಗತ್ಯ ಇರುವಷ್ಟು ಬಸ್‌ಗಳು ಸಂಚರಿಸುತ್ತಿವೆ. ಯಾವುದೇ ಸಂಚಾರ ಮಾರ್ಗವನ್ನು ಸ್ಥಗಿತಗೊಳಿಸಿಲ್ಲ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ) ಜಿ.ಟಿ. ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.