ADVERTISEMENT

ಬೆಂಗಳೂರು | ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಅಮೃತಹಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 15:39 IST
Last Updated 15 ಸೆಪ್ಟೆಂಬರ್ 2025, 15:39 IST
ಮಂಜುನಾಥ್‌ 
ಮಂಜುನಾಥ್‌    

ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ನಾಯಿಯನ್ನು ರಕ್ಷಿಸುತ್ತಿದ್ದ ವೇಳೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಮಂಜುನಾಥ್‌ ಬಂಧಿತ ಆರೋಪಿ.

ಸೆ.7ರಂದು ರಾತ್ರಿ 11.50ರ ಸುಮಾರಿಗೆ ಜಕ್ಕೂರು ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಯುವತಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಸ್ನೇಹಿತನೊಂದಿಗೆ ಕಾರಿನಲ್ಲಿ ಯುವತಿ ತೆರಳುತ್ತಿದ್ದರು. ಜಕ್ಕೂರು ಮುಖ್ಯರಸ್ತೆಯಲ್ಲಿ ಅಪಘಾತಕ್ಕೊಳಗಾಗಿ ನಾಯಿಯೊಂದು ನರಳುತ್ತಿತ್ತು. ನಾಯಿಯನ್ನು ಕಂಡು ಕಾರು ನಿಲುಗಡೆ ಮಾಡುವಂತೆ ಸ್ನೇಹಿತನಿಗೆ ಯುವತಿ ಹೇಳಿದ್ದರು. ರಸ್ತೆಯ ಬದಿಗೆ ಕಾರು ನಿಲುಗಡೆ ಮಾಡಿದ ಬಳಿಕ ನಾಯಿ ರಕ್ಷಿಸಲು ಮುಂದಾಗಿದ್ದರು. ನಾಯಿಯನ್ನು ಎತ್ತಿಕೊಂಡು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದಿದ್ದ ಆರೋಪಿ ಯುವತಿಯನ್ನು ಸ್ಪರ್ಶಿಸಿ, ಅಸಭ್ಯವಾಗಿ ವರ್ತಿಸಿದ್ದ. ಯುವತಿ ಕಿರುಚಿಕೊಂಡಾಗ ಬೈಕ್‌ನಲ್ಲಿ ಆರೋಪಿ ಮುಂದೆ ಸಾಗಿದ್ದ. ನಂತರ, ಸಮೀಪದ ಪೆಟ್ರೋಲ್ ಬಂಕ್ ಬಳಿ ಯುವತಿ ನಿಂತಿದ್ದರು. ಅಲ್ಲಿಗೂ ಬಂದಿದ್ದ ಆರೋಪಿ, ಎರಡನೇ ಬಾರಿ ಅದೇ ರೀತಿಯಲ್ಲಿ ಕೃತ್ಯ ಎಸಗಿದ್ದ’ ಎಂದು ಪೊಲೀಸರು ಹೇಳಿದರು.

ಆರೋಪಿ ಹಿಡಿಯಲು ಪ್ರಯತ್ನ: ‘ಯುವತಿ ಹಾಗೂ ಆಕೆಯ ಸ್ನೇಹಿತ ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದ್ದರು. ಆರೋಪಿಯನ್ನು ಹಿಡಿಯುವ ಭರದಲ್ಲಿ ಇಬ್ಬರೂ ಆಯತಪ್ಪಿ ರಸ್ತೆಗೆ ಬಿದ್ದಿದ್ದರು. ಆಗ ಆರೋಪಿ ತಪ್ಪಿಸಿಕೊಂಡು ಪರಾರಿಯಾಗಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಮೃತಹಳ್ಳಿ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.