ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಇಬ್ಬರು ಮಕ್ಕಳನ್ನು ಕೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಗುಂಟೆಯ ಭುವನೇಶ್ವರಿನಗರದಲ್ಲಿ ನಡೆದಿದೆ.
ನಾಲ್ಕು ವರ್ಷದ ಪುತ್ರಿ ಬೃಂದಾ ಹಾಗೂ ಒಂದೂವರೆ ವರ್ಷದ ಪುತ್ರ ಭುವನ್‌ನನ್ನು ಕೊಂದು ತಾಯಿ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐದು ವರ್ಷದ ಹಿಂದೆ ವಿಜಯಲಕ್ಷ್ಮಿ ಅವರು ರಮೇಶ್ ಜೊತೆ ಮದುವೆಯಾಗಿದ್ದರು. ರಮೇಶ್ ಅವರು ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು.
‘ರಮೇಶ್ ಅವರು ಕೆಲಸದ ನಿಮಿತ್ತ ಊರಿಗೆ ಹೋಗಿದ್ದರು. ಇವರ ಜೊತೆ ನೆಲಸಿದ್ದ ರಮೇಶ್ ಅವರ ಚಿಕ್ಕಮ್ಮ ಎಂದಿನಂತೆ ಗುರುವಾರ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬರೇ ಇದ್ದ ವಿಜಯಲಕ್ಷ್ಮಿ ತನ್ನ ಇಬ್ಬರು ಮಕ್ಕಳಿಗೆ ವೇಲ್‌ನಿಂದ ಕುತ್ತಿಗೆಗೆ ಬಿಗಿದು ಕೊಂದು, ತಾನೂ ಕೂಡ ಫ್ಯಾನಿಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಜೊತೆಗೆ ವಾಸವಿದ್ದ ರಮೇಶ್ ಅವರ ಚಿಕ್ಕಮ್ಮ ಗುರುವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಘಟನೆ ಗೊತ್ತಾಗಿದೆ.
‘ಕೌಟುಂಬಿಕ ಸಮಸ್ಯೆಯಿಂದ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. ಯಾವುದೇ ಮರಣಪತ್ರ ಸಿಕ್ಕಿಲ್ಲ’ ಎಂದು ಪೊಲೀಸರು ಹೇಳಿದರು.
‘ತಾನು ಮತ್ತೊಂದು ಮದುವೆಯಾಗಿದ್ದು, ವಿಚ್ಛೇದನ ಕೊಡುವಂತೆ ಪತ್ನಿಗೆ ಪತಿ ರಮೇಶ್ ಬೆದರಿಕೆ ಹಾಕುತ್ತಿದ್ದರು. ಅಲ್ಲದೇ ಬೇರೆ ಮಹಿಳೆಯ ಜತೆಗೆ ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ನಡೆಸುತ್ತಿದ್ದರು. ಕಳೆದ ತಿಂಗಳು ಊರಿಗೆ ಕರೆದೊಯ್ದು ಸಂಧಾನ ನಡೆಸಿ ಕಳುಹಿಸಲಾಗಿತ್ತು. ಬೆಂಗಳೂರಿಗೆ ಬಂದ ಬಳಿಕ ಮತ್ತೆ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆಯಿಂದ ಬೇಸತ್ತು ಮಕ್ಕಳನ್ನು ಕೊಂದು ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ರಮೇಶ್ ಅವರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.