ADVERTISEMENT

ಬೆಂಗಳೂರು–ಮುಂಬೈ ನಡುವೆ ಆರಂಭವಾಗದ ಎಕ್ಸ್‌ಪ್ರೆಸ್‌ ರೈಲು

15 ದಿನಗಳಲ್ಲಿ ಶುರುವಾಗುವ ನಿರೀಕ್ಷೆ * ಬೇರೆ ರೈಲು ಬಗ್ಗೆ ಹಬ್ಬಿದ ವದಂತಿ

ಬಾಲಕೃಷ್ಣ ಪಿ.ಎಚ್‌
Published 20 ಜನವರಿ 2026, 23:30 IST
Last Updated 20 ಜನವರಿ 2026, 23:30 IST
<div class="paragraphs"><p>ರೈಲು ಹಳಿ (ಸಾಂದರ್ಭಿಕ ಚಿತ್ರ)</p></div>

ರೈಲು ಹಳಿ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಮುಂಬೈ–ಎಸ್‌ಎಂವಿಟಿ ಬೆಂಗಳೂರು ನಡುವೆ ವಾರಕ್ಕೆ ಎರಡು ದಿನ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮತಿ ನೀಡಿ ತಿಂಗಳು ಕಳೆದರೂ ಇನ್ನೂ ಸಂಚಾರ ಆರಂಭವಾಗಿಲ್ಲ. ಈ ನಡುವೆ ಹೊಸ ತುರಂತೊ ರೈಲು ಸಂಚರಿಸಲಿದೆ ಎಂಬ ಸುದ್ದಿ ಹರಡಿದೆ. ಅಂಥ ಯಾವುದೇ ನಿರ್ಧಾರವಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ಗೆ ‘ಉದ್ಯಾನ್‌’ ಎಕ್ಸ್‌ಪ್ರೆಸ್‌ ರೈಲು ಇದೆಯಾದರೂ ಅದು ಕಲಬುರಗಿ ಮಾರ್ಗವಾಗಿ ಸಂಚರಿಸುತ್ತಿದೆ. ಹುಬ್ಬಳ್ಳಿ ಮಾರ್ಗವಾಗಿ ಇರುವ ರೈಲು ಬೆಂಗಳೂರು ನಗರದ ಒಳಗೆ ಬಾರದೇ ಇರುವುದರಿಂದ ಹೊಸ ರೈಲಿಗಾಗಿ ಬೇಡಿಕೆ ಇತ್ತು.

ADVERTISEMENT

ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಮುಂಬೈನ ದಾದರ್‌ಗೆ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲು 1983ರಲ್ಲಿ ಆರಂಭವಾಗಿತ್ತು. 2014ರವರೆಗೆ ಈ ರೈಲು ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ಬರುತ್ತಿತ್ತು. ಆನಂತರ ಅದನ್ನು ಯಶವಂತಪುರ ನಿಲ್ದಾಣಕ್ಕೆ ಸೀಮಿತಗೊಳಿಸಲಾಯಿತು. ಅದೇ ಸಮಯದಲ್ಲಿ ಈ ರೈಲನ್ನು ವಾರದಲ್ಲಿ ಮೂರು ದಿನ ಪುದುಚೇರಿಗೆ ಹಾಗೂ ಮೂರು ದಿನ ತಮಿಳುನಾಡಿನ ತಿರುನಲ್ವೇಲಿ ಹಾಗೂ ಒಂದು ದಿನ ಮೈಸೂರಿಗೆ ವಿಸ್ತರಿಸಲಾಯಿತು. ಇದರಿಂದ ನಗರದ ನಾಗರಿಕರಿಗೆ ಈ ರೈಲಿನ ಉಪಯೋಗ ಕಡಿಮೆಯಾಯಿತು.

ಹುಬ್ಬಳ್ಳಿ ಮಾರ್ಗವಾಗಿ ಮುಂಬೈಗೆ ಇನ್ನೊಂದು ರೈಲು ಬೇಕು ಎಂಬ ಬೇಡಿಕೆ ಎರಡು ದಶಕದ ಹಿಂದೆಯೇ ಆರಂಭವಾಗಿತ್ತು. ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲು ಈ ರೀತಿ ಬೇರೆ ದಾರಿಗಳಿಗೆ ತಿರುಗಿದ್ದರಿಂದ ಬೇಡಿಕೆಯ ಒತ್ತಡ ಇನ್ನಷ್ಟು ಹೆಚ್ಚಿತ್ತು. ಬೆಂಗಳೂರು ನಗರ ವ್ಯಾಪ್ತಿಯ ಸಂಸದರು ಕೂಡ 2019ರಲ್ಲಿ ಈ ಬಗ್ಗೆ ಪತ್ರ ಬರೆದಿದ್ದರು. ಆದರೆ, ಹೊಸ ರೈಲು ಬರುವ ಬದಲು ಚಾಲುಕ್ಯ ರೈಲಿನ ನಿಲುಗಡೆಯನ್ನೇ ಬದಲಾಯಿಸಲಾಯಿತು. ಯಶವಂತಪುರಕ್ಕೂ ಬಾರದೇ ಚಿಕ್ಕಬಾಣಾವರದಿಂದಲೇ ಬಾಣಸವಾಡಿ ಮೂಲಕ ಸಂಚರಿಸುವಂತೆ ಮಾಡಲಾಯಿತು. ಇದರಿಂದ ನಗರದ ನಿವಾಸಿಗಳಿಗೆ ಉಪಯೋಗವೇ ಇಲ್ಲದಂತಾಯಿತು.

ಬೆಂಗಳೂರಿಗೆ ರೈಲು ಬೇಕೇ ಬೇಕು ಎಂಬ ಬೇಡಿಕೆಯನ್ನು ರೈಲು ಪ್ರಯಾಣಿಕರು, ವಿವಿಧ ಸಂಘಟನೆಗಳು ಇಟ್ಟಿದ್ದರಿಂದ ರೈಲ್ವೆ ಸಚಿವಾಲಯವು ಸ್ಪಂದಿಸಿತ್ತು. ಸಚಿವಾಲಯದ ಸೂಚನೆಯಂತೆ ಮುಂಬೈನ ಕುರ್ಲಾ ಉಪನಗರದಲ್ಲಿರುವ ಲೋಕಮಾನ್ಯ ತಿಲಕ್‌ ಟರ್ಮಿನಲ್‌ ಮತ್ತು ಬೆಂಗಳೂರಿನ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ನಡುವೆ ವಾರಕ್ಕೆ ಎರಡು ಬಾರಿ ಎಕ್ಸ್‌ಪ್ರೆಸ್‌ ರೈಲು (16553/4) ಸಂಚಾರ ನಡೆಸಲು ರೈಲ್ವೆ ಮಂಡಳಿಯು 2025ರ ಡಿಸೆಂಬರ್‌ 9ರಂದು ಅನುಮೋದನೆ ನೀಡಿತ್ತು. ಆದರೆ, ಸಂಚಾರ ಆರಂಭವಾಗಿಲ್ಲ ಎಂದು ರೈಲು ಪ್ರಯಾಣಿಕರು ದೂರಿದ್ದಾರೆ.

‘ತುರಂತೊ ಮಾಹಿತಿ ಇಲ್ಲ’

ಬೆಂಗಳೂರು–ಮುಂಬೈ ನಡುವೆ ತುರಂತೊ ರೈಲು ಸಂಚರಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ರೈಲ್ವೆ ಮಂಡಳಿಯಲ್ಲಿ ಚರ್ಚೆಯಾಗಿರುವುದು ಗೊತ್ತಿಲ್ಲ. ವಾರಕ್ಕೆ ಎರಡು ದಿನ ಸಂಚರಿಸುವ ರೈಲಿಗೆ ಮಂಡಳಿಯು ಅನುಮತಿ ನೀಡಿದ್ದು ಅದು ಕಾರ್ಯಗತಗೊಳ್ಳಲಿದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್‌ ಕುಮಾರ್ ಸಿಂಗ್‌ ತಿಳಿಸಿದ್ದಾರೆ. ಮುಂಬೈ- ಬೆಂಗಳೂರು ನಡುವೆ 18 ಗಂಟೆಗಳಲ್ಲಿ ಸಂಚರಿಸುವ ಹೊಸ ತುರಂತೊ ಎಕ್ಸ್‌ಪ್ರೆಸ್' ರೈಲನ್ನು ಭಾರತೀಯ ರೈಲ್ವೆ ಪರಿಚಯಿಸಲು ಚಿಂತನೆ ನಡೆಸಿದೆ. ಈ ಹೊಸ ರೈಲು ಪ್ರಸ್ತುತ 24 ಗಂಟೆ ತೆಗೆದುಕೊಳ್ಳುವ ಸೂಪರ್‌ಫಾಸ್ಟ್ ರೈಲಿಗಿಂತ ವೇಗವಾಗಿ ಸಂಚರಿಸಲಿದೆ ಎಂಬ ಸುದ್ದಿ ಮತ್ತು ಅದರ ವೇಳಾಪಟ್ಟಿಯು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಹರಿದಾಡಿತ್ತು.

15 ದಿನಗಳಲ್ಲಿ ಸಂಚಾರ ಶುರು

ಲೋಕಮಾನ್ಯ ತಿಲಕ್‌ ಟರ್ಮಿನಲ್‌ನಿಂದ ಬೆಂಗಳೂರು ಎಸ್‌ಎಂವಿಟಿಗೆ 15 ದಿನಗಳಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎಸ್‌ಎಂವಿಟಿಯಿಂದ ಶನಿವಾರ ಮತ್ತು ಮಂಗಳವಾರ ರಾತ್ರಿ 10.35ಕ್ಕೆ ಹೊರಟು ಮರುದಿನ ರಾತ್ರಿ 10.30ಕ್ಕೆ ಲೋಕಮಾನ್ಯ ತಿಲಕ್‌ ಟರ್ಮಿನಲ್‌ಗೆ ಲೋಕಮಾನ್ಯ ತಿಲಕ್‌ ಟರ್ಮಿನಲ್‌ನಿಂದ ಭಾನುವಾರ ಮತ್ತು ಬುಧವಾರ ರಾತ್ರಿ 11.15ಕ್ಕೆ ಹೊರಟು ಮರುದಿನ ರಾತ್ರಿ 10.40ಕ್ಕೆ ಎಸ್‌ಎಂವಿಟಿಗೆ ತಲುಪುವಂತೆ ವೇಳಾಪಟ್ಟಿಯನ್ನು ರೈಲ್ವೆ ಮಂಡಳಿ ನೀಡಿದೆ. ಈ ವೇಳಾಪಟ್ಟಿ ಬಗ್ಗೆ ಕೇಂದ್ರ ರೈಲ್ವೆ ಮತ್ತು ನೈರುತ್ಯ ರೈಲ್ವೆ ಅಧಿಕಾರಿಗಳು ಜಂಟಿಯಾಗಿ ಚರ್ಚೆ ನಡೆಸಿ ಅಗತ್ಯವಿದ್ದರೆ ಬದಲಾವಣೆ ಮಾಡಿ ವೇಳಾಪಟ್ಟಿ ಅಂತಿಮಗೊಳಿಸಲಿದ್ದಾರೆ. ಆ ನಂತರ ಸಂಚಾರಕ್ಕೆ ಸಂಬಂಧಿಸಿದ ಅಧಿಸೂಚನೆ ಬರಲಿದೆ ಎಂದು ತಿಳಿಸಿದ್ದಾರೆ.

‘ಸಂಸದರಿಗೇ ಗೊತ್ತಿಲ್ಲ’

ಮುಂಬೈ–ಬೆಂಗಳೂರು ನಡುವೆ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲು ರೈಲ್ವೆ ಮಂಡಳಿ ಅನುಮತಿ ನೀಡಿದ್ದರೂ ರೈಲು ಸಂಚರಿಸುತ್ತಿಲ್ಲ ಎಂಬುದು ಇಲ್ಲಿನ ಸಂಸದರಿಗೇ ಗೊತ್ತಿಲ್ಲ ಎಂದು ರೈಲ್ವೆ ಪ್ರಯಾಣಿಕ ಟಿ.ಪಿ. ಲೋಕೇಶ್ ತಿಳಿಸಿದರು. ಅನುಮೋದನೆ ಸಿಕ್ಕಿರುವ ರೈಲು ಸಂಚರಿಸುವಂತೆ ಮಾಡಿ ಎಂದು ಸಂಸದ ತೇಜಸ್ವಿ ಸೂರ್ಯ ಅವರಿಗೆ ಮನವಿ ಮಾಡಲು ಹೋಗಿದ್ದೆವು. ರೈಲು ಸಂಚರಿಸುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದರು. ಇನ್ನೂ ಆರಂಭವಾಗಿಲ್ಲ ಎಂದರೂ ಆರಂಭದಲ್ಲಿ ನಮ್ಮ ಮಾತು ಒಪ್ಪಲಿಲ್ಲ. ಆ ನಂತರ ಅವರೇ ಆಪ್ತ ಸಹಾಯಕರಿಗೆ ಕರೆ ಮಾಡಿ ಖಚಿತಪಡಿಸಿಕೊಂಡರು. ಈ ರೈಲು ಓಡಾಡುವಂತೆ ಜನಪ್ರತಿನಿಧಿಗಳು ಒತ್ತಡ ಹಾಕಬೇಕು ಎಂದು ಒತ್ತಾಯಿಸಿದರು.

24 ಗಂಟೆ ಅವಧಿ ಕಡಿಮೆ ಮಾಡಿ

ರೈಲ್ವೆ ಮಂಡಳಿ ಅನುಮೋದನೆ ನೀಡಿರುವ ರೈಲು ಮುಂಬೈಯಿಂದ ಎಸ್‌ಎಂವಿಟಿಗೆ ಬರಲು ಅಥವಾ ಇಲ್ಲಿಂದ ಮುಂಬೈಗೆ ಹೋಗಲು 24 ತಾಸು ನಿಗದಿಪಡಿಸಲಾಗಿದೆ. ಸಂಚಾರ ಅವಧಿಯನ್ನು ಕಡಿಮೆ ಮಾಡದೇ ಇದ್ದರೆ ಪ್ರಯೋಜನವಿಲ್ಲ ಎಂದು ರೈಲ್ವೆ ಹೋರಾಟಗಾರ ಕೆ.ಎನ್‌. ಕೃಷ್ಣಪ್ರಸಾದ್‌ ‌ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ ಈ ರೈಲು ಕೆಎಸ್‌ಆರ್‌ ನಿಲ್ದಾಣಕ್ಕಾಗಲಿ ಯಶವಂತಪುರಕ್ಕಾಗಲಿ ಬರುತ್ತಿಲ್ಲ. ಅದು ಎಸ್‌ಎಂವಿಟಿಗೆ ನಿಲ್ದಾಣಕ್ಕೆ ಬರುತ್ತಿದೆ. ಅಲ್ಲಿಗೆ ಹೋಗುವುದಕ್ಕೇ ಒಂದೆರಡು ತಾಸು ಬೇಕಾಗುತ್ತದೆ. ರಾತ್ರಿ 10.30ರ ನಂತರ ರೈಲು ಬಂದರೆ ಮನೆ ಸೇರುವುದು ಹೇಗೆ? ರಾತ್ರಿ 11 ಗಂಟೆಯ ನಂತರ ಹೊರಡುವ ರೈಲಿಗೆ ಹೋಗುವುದು ಹೇಗೆ? ಹಾಗಾಗಿ ಸಂಚಾರ ಅವಧಿಯನ್ನು ನಾಲ್ಕು ತಾಸು ಕಡಿಮೆ ಮಾಡಬೇಕು. ಇಲ್ಲವೇ ನಗರದ ಒಳಗೆ ರೈಲು ಬರುವಂತೆ ಮಾಡಬೇಕು ಎಂದು ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.