ADVERTISEMENT

ಇತಿಹಾಸದ ಪುಟ ಸೇರಿದ ಬಿಬಿಎಂಪಿ: ಗ್ರೇಟರ್‌ ಬೆಂಗಳೂರಿಗೆ 5 ಪಾಲಿಕೆ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಆಡಳಿತ ಯಂತ್ರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 23:30 IST
Last Updated 2 ಸೆಪ್ಟೆಂಬರ್ 2025, 23:30 IST
ಬಿಬಿಎಂಪಿ ಅಸ್ತಂಗತ... ನಗರದ ಎನ್‌.ಆರ್‌. ಚೌಕದಲ್ಲಿರುವ ಪ್ರಧಾನ ಕಚೇರಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಫಲಕವನ್ನು ತೆರವುಗೊಳಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಫಲಕವನ್ನು ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ನೇತೃತ್ವದಲ್ಲಿ ಅಳವಡಿಸಲಾಯಿತು
ಬಿಬಿಎಂಪಿ ಅಸ್ತಂಗತ... ನಗರದ ಎನ್‌.ಆರ್‌. ಚೌಕದಲ್ಲಿರುವ ಪ್ರಧಾನ ಕಚೇರಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಫಲಕವನ್ನು ತೆರವುಗೊಳಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಫಲಕವನ್ನು ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ನೇತೃತ್ವದಲ್ಲಿ ಅಳವಡಿಸಲಾಯಿತು   

ಬೆಂಗಳೂರು: ರಾಜಧಾನಿಯ ಆಡಳಿತ ಯಂತ್ರವನ್ನು ನಿಭಾಯಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ದ (ಜಿಬಿಎ) ಅಡಿಯಲ್ಲಿ ಐದು ನಗರ ಪಾಲಿಕೆಗಳು ರಚನೆಯಾಗಿವೆ.

‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ– 2024’ (ಜಿಬಿಜಿಎ) ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯನ್ನು ‘ಗ್ರೇಟರ್‌ ಬೆಂಗಳೂರು ಪ್ರದೇಶ’ (ಜಿಬಿಎ) ಎಂದು ಗುರುತಿಸಿ 2025ರ ಮೇ 15ರಂದು ಸರ್ಕಾರ ಅಧಿಸೂಚಿಸಿತ್ತು. ‘ಗ್ರೇಟರ್‌ ಬೆಂಗಳೂರು ಪ್ರದೇಶ’ದಲ್ಲೇ ಐದು ನಗರ ಪಾಲಿಕೆಗಳನ್ನು ರಚಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಬಿಬಿಎಂಪಿ ತನ್ನ ಅಸ್ತಿತ್ವ ಕಳೆದುಕೊಂಡಿದೆ.

ಜಿಬಿಜಿಎ ಕಾಯ್ದೆಯ ಪ್ರಕರಣ 4ರ ಉಪ ಪ್ರಕರಣ (1) ಹಾಗೂ ಪ್ರಕರಣ 7ರ ಉಪ ಪ್ರಕರಣದಡಿ (1) ಅಧಿಕಾರ ಚಲಾಯಿಸಿರುವ ಸರ್ಕಾರ, ಜನಸಂಖ್ಯೆ, ವಿಸ್ತೀರ್ಣ, ಜನಸಂಖ್ಯಾ ಸಾಂದ್ರತೆ, ಬರುವ ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗ ಪ್ರಮಾಣ, ಆರ್ಥಿಕ ಪ್ರಾಮುಖ್ಯವನ್ನು ಪರಿಗಣಿಸಿ ಐದು ನಗರ ಪಾಲಿಕೆಗಳನ್ನು ರಚಿಸಿದೆ.

ADVERTISEMENT

ವಿಧಾನಸಭೆಯಂತೆ ವಿಂಗಡಣೆ ಇಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ 225 ವಾರ್ಡ್‌ಗಳನ್ನು ಮರುರಚಿಸಿ 2023ರ ಸೆಪ್ಟೆಂಬರ್‌ 25ರಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಹೊಸ ಐದು ನಗರ ಪಾಲಿಕೆಗಳನ್ನು ಬಿಬಿಎಂಪಿ ಚುನಾವಣೆ ನಡೆದಿದ್ದ 198 ವಾರ್ಡ್‌ಗಳಿಗೆ ಅನುಗುಣವಾಗಿ ವಿಂಗಡಿಸಲಾಗಿದೆ. ಜೊತೆಗೆ 225 ವಾರ್ಡ್‌ಗಳ ವಿಂಗಡಣೆ ಸಮಯದಲ್ಲಿ ಸೇರಿಸಲಾದ ಪ್ರದೇಶಗಳನ್ನು ಸೇರಿಸಿಕೊಳ್ಳಲಾಗಿದೆ.

712 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳನ್ನು ರಚಿಸಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಆನೇಕಲ್‌ ವಿಧಾನಸಭೆ ಕ್ಷೇತ್ರದ ಸಿಂಗಸಂದ್ರ (ಕೂಡ್ಲು) ವಾರ್ಡ್‌ ಸೇರಿದಂತೆ 225 ವಾರ್ಡ್‌ಗಳನ್ನು ಪುನರ್‌ ವಿಂಗಡಿಸಿದಾಗ ಸೇರಿಕೊಂಡ ಪ್ರದೇಶಗಳು ಸೇರಿದಂತೆ 9 ಚದರ ಕಿ.ಮೀ. ವೃದ್ಧಿಸಿ 720.9 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳ ಗಡಿಗಳನ್ನು ಗುರುತಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

2025ರ ಆಸ್ತಿ ತೆರಿಗೆ ಸಂಗ್ರಹವನ್ನು ಐದು ನಗರ ಪಾಲಿಕೆಗಳಿಗೆ ವಿಂಗಡಿಸಿದರೆ, ಮಹದೇವಪುರ ಹಾಗೂ ಕೆ.ಆರ್. ಪುರ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಲಿರುವ ಪೂರ್ವ ನಗರ ಪಾಲಿಕೆಗೆ ಅತಿಹೆಚ್ಚು (₹912 ಕೋಟಿ) ಸಂಗ್ರಹ ಇರಲಿದೆ. ಉತ್ತರ ನಗರ ಪಾಲಿಕೆಗೆ ಅತಿ ಕಡಿಮೆ (₹543 ಕೋಟಿ) ತೆರಿಗೆ ಸಂಗ್ರಹವಾಗಲಿದೆ.

ಒಂದು ಚದರ ಕಿ.ಮೀ.ಗೆ ಸರಾಸರಿ 20,225 ಜನಸಂಖ್ಯೆ ಸಾಂದ್ರತೆ ಬರುವಂತೆ ವಿಂಗಡಿಸಲಾಗಿದೆ. ಕೇಂದ್ರ ನಗರ ಪಾಲಿಕೆಯಲ್ಲಿ ಅತಿಹೆಚ್ಚು ಜನಸಂಖ್ಯೆ ಸಾಂದ್ರತೆ (32,051) ಇರಲಿದ್ದು, ಪೂರ್ವ ನಗರ ಪಾಲಿಕೆಯಲ್ಲಿ ಅತಿ ಕಡಿಮೆ ಜನಸಂಖ್ಯೆ ಸಾಂದ್ರತೆ (7,738) ಇರಲಿದೆ. ಪ್ರತಿ ನಗರ ಪಾಲಿಕೆಯ ಗಡಿಯಲ್ಲಿ ಅತಿದೊಡ್ಡ ರಸ್ತೆ ಇರುವಂತೆ ವಿಂಗಡಣೆ ಮಾಡಲಾಗಿದೆ.

ನ.30ಕ್ಕೆ ವಾರ್ಡ್ ಮೀಸಲಾತಿ ಪ್ರಕಟ: ಡಿಸಿಎಂ

ಐದು ನಗರ ಪಾಲಿಕೆಗಳ ವಾರ್ಡ್‌ ಪುನರ್‌ ವಿಂಗಡಣೆಗೆ ಆಯೋಗ ರಚಿಸಿದ್ದು ನವೆಂಬರ್‌ 1ಕ್ಕೆ ವಾರ್ಡ್‌ಗಳ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ನ.30ರಂದು ವಾರ್ಡ್‌ಗಳ ಮೀಸಲಾತಿ ಅಧಿಸೂಚನೆ ಹೊರಡಿಸಿ ಚುನಾವಣೆ ನಡೆಸಲಾಗುತ್ತದೆ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.

‘ನಾವು ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದ್ದು ನಮಗೆ ಕಾಲಮಿತಿ ಇದೆ. ವಾರ್ಡ್‌ ಮೀಸಲಾತಿ ಅಧಿಸೂಚನೆಯಾದ ನಂತರ ಆಯೋಗಕ್ಕೆ ನೀಡಿ ಚುನಾವಣೆ ನಡೆಸಲು ಮನವಿ ಮಾಡಲಾಗುತ್ತದೆ. ಚುನಾವಣೆ ನಡೆಸಲು ಪೂರ್ವಸಿದ್ಧತೆ ಆರಂಭಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಅತಿ ಶೀಘ್ರದಲ್ಲೇ ಅವರು ಮತದಾರರ ಪಟ್ಟಿ ಸಿದ್ಧಪಡಿಸಲಿದ್ದಾರೆ’ ಎಂದು ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಪಾಲಿಕೆಗಳ ಮೇಲೆ ಜಿಬಿಎ ಇರುವುದರಿಂದ 74ನೇ ತಿದ್ದುಪಡಿಗೆ ತೊಂದರೆಯಾಗುವುದಿಲ್ಲವೇ ಇದನ್ನು ಪ್ರಶ್ನಿಸಿ ಯಾರಾದರೂ ನ್ಯಾಯಾಲಯದ ಮೊರೆ ಹೋಗುವುದಿಲ್ಲವೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್‌ ‘ಎಲ್ಲಾ ನ್ಯಾಯಾಲಯಗಳಲ್ಲಿ ಅರ್ಜಿ ಹಾಕಿ ಅವೆಲ್ಲವೂ ತಿರಸ್ಕೃತವಾಗಿವೆ. ಸುಪ್ರೀಂ ಕೋರ್ಟ್ ನಮ್ಮ ಪ್ರಮಾಣಪತ್ರ ಒಪ್ಪಿದೆ. ವಾರ್ಡ್ ಪುನರ್ ವಿಂಗಡಣೆ ಬಳಿಕ ನವೆಂಬರ್ 3ರಂದು ವಿಚಾರಣೆಗೆ ಬರುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ’ ಎಂದರು.

ನಾಗರಿಕ ಸ್ನೇಹಿ ಸೇವೆ ಉತ್ತಮ ಆಡಳಿತ ಪರಿಣಾಮಕಾರಿಯಾಗಿ ಯೋಜನೆಗಳನ್ನು ಜಾರಿಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಜಾರಿಗೆ ತಂದು ಐದು ಪಾಲಿಕೆಗಳನ್ನು ರಚಿಸಲಾಗಿದೆ.
-ಡಿ.ಕೆ. ಶಿವಕುಮಾರ್‌ ಉಪ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.