ADVERTISEMENT

ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇ: ಅಪಘಾತ ತಡೆಗೆ ಜಂಟಿ ಸಮೀಕ್ಷೆ

ಅಪಾಯಕಾರಿ, ಅಪಘಾತ ಸ್ಥಳಗಳ ಸಮೀಕ್ಷೆ * ಸರ್ಕಾರಕ್ಕೆ ವರದಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2023, 20:30 IST
Last Updated 5 ಜುಲೈ 2023, 20:30 IST
ರಾಮನಗರ ಹೊರವಲಯದ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇ ಸರ್ವೀಸ್ ರಸ್ತೆಗೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ರಾಮನಗರ ಹೊರವಲಯದ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇ ಸರ್ವೀಸ್ ರಸ್ತೆಗೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ರಾಮನಗರ: ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಗ್ಗಿಸುವ ಉದ್ದೇಶದಿಂದ ಹೆದ್ದಾರಿಯಲ್ಲಿರುವ ಅಪಾಯಕಾರಿ ಮತ್ತು ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಲು ಶೀಘ್ರ ಜಂಟಿ ಸಮೀಕ್ಷೆ ಆರಂಭವಾಗಲಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸ್, ಸರ್ವೇ ಹಾಗೂ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಈ ಸಮೀಕ್ಷೆ ನಡೆಸಲಿವೆ. 

ಎಕ್ಸ್‌ಪ್ರೆಸ್‌ವೇ ನಲ್ಲಿ ಅಪಘಾತ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸರ್ಕಾರ ನೀಡಿದ ಸೂಚನೆ ಮೇರೆಗೆ ಈ  ಸಮೀಕ್ಷೆ ಆರಂಭವಾಗಿದೆ. ಅದರ ಭಾಗವಾಗಿ ಬುಧವಾರ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಸೇರಿದಂತೆ ಇತರ ಇಲಾಖೆಗಳ ಹಿರಿಯ ಅಧಿಕಾರಿಗಳು ಹೆದ್ದಾರಿಯ ಕೆಲವು ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ADVERTISEMENT

‘ಹೆದ್ದಾರಿ ಗುಣಮಟ್ಟ, ಅಪಾಯಕಾರಿ ಸ್ಥಳಗಳು, ಪ್ರವೇಶ–ನಿರ್ಗಮನ, ಅಂಕುಡೊಂಕು ಮಾರ್ಗ ಸೇರಿದಂತೆ ಅಪಘಾತಕ್ಕೆ ಕಾರಣ ಹಾಗೂ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕೊಡಲಾಗುವುದು’ ಎಂದು ಈ ತಂಡದಲ್ಲಿದ್ದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚಾರ ಆರಂಭವಾದ ನಂತರ  ಒಂಬತ್ತು ತಿಂಗಳಲ್ಲಿ ನಡೆದ ಅಪಘಾತಗಳಲ್ಲಿ ಒಟ್ಟು 158 ಜನರು ಮೃತಪಟ್ಟಿದ್ದಾರೆ. ‘ಪ್ರಜಾವಾಣಿ’ಯಲ್ಲಿ ಈ ವರದಿ ಪ್ರಕಟವಾದ ಬೆನ್ನಲ್ಲೇ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಅಧಿಕಾರಿಗಳೊಂದಿಗೆ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅದಕ್ಕೂ ಮುಂಚೆ, ಜಿಲ್ಲಾ ಪೊಲೀಸ್‌ ಇಲಾಖೆ ಕೂಡ ಅಪಘಾತ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ನೀಡಿತ್ತು.

‘ಎಡಿಜಿಪಿ ಸೂಚನೆಯಂತೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ವೇಗದ ಮೇಲೆ ನಿಗಾ ಇಡಲು ರೇಡಾರ್ ನಿಯೋಜಿಸಲಾಗಿದೆ. ವೇಗವಾಗಿ ಸಂಚರಿಸುವ ವಾಹನಗಳನ್ನು ಗುರುತಿಸಿ ದಂಡ ವಿಧಿಸಲಾಗುತ್ತಿದೆ. ಜೊತೆಗೆ ರಸ್ತೆಯಲ್ಲಿ ನಾಲ್ಕು ಗಸ್ತು ವಾಹನ ಹಾಗೂ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ’ ಎಂದು ಸಂಚಾರ ಪೊಲೀಸ್ ಸಿಬ್ಬಂದಿಯೊಬ್ಬರು ಹೇಳಿದರು.

ರಾಮನಗರ ಹೊರವಲಯದ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇ ಸರ್ವೀಸ್ ರಸ್ತೆಗೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಅತಿ ವೇಗ: ದಂಡದ ಬಿಸಿ ಎಕ್ಸ್‌ಪ್ರೆಸ್‌ ವೇ ನಲ್ಲಿ ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿದ್ದ ವಾಹನಗಳ ಮೇಲೆ ಸ್ಪೀಡ್ ರೇಡಾರ್‌ ಮೂಲಕ ನಿಗಾ ಇಟ್ಟಿರುವ ಸಂಚಾರ ಪೊಲೀಸರು ಇದುವರೆಗೂ 44 ಚಾಲಕರಿಗೆ ದಂಡ ವಿಧಿಸಿದ್ದಾರೆ. ಈ ವಿಷಯನ್ನು ಎಡಿಜಿಪಿ ಅಲೋಕ್ ಕುಮಾರ್ ಟ್ವಿಟರ್‌ನಲ್ಲಿ ಫೊಟೊ ಸಮೇತ ಪೋಸ್ಟ್ ಮಾಡಿದ್ದಾರೆ. ಎಕ್ಸ್‌ಪ್ರೆಸ್‌ನಲ್ಲಿ ವಾಹನಗಳ ವೇಗದ ಮಿತಿ ಗಂಟೆಗೆ ಗರಿಷ್ಟ ನೂರು ಕಿ.ಮೀ. ಇದೆ.

ದ್ವಿಚಕ್ರ ವಾಹನಗಳ ನಿರ್ಬಂಧಕ್ಕೆ ಪರಿಶೀಲನೆ

ಬೆಂಗಳೂರು: ‘ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ನಿರ್ಬಂಧಿಸುವ ಪ್ರಸ್ತಾವ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಅತಿಯಾದ ವೇಗದಿಂದ ಈ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಲೇನ್‌ ಶಿಸ್ತಿನ ಕೊರತೆ ಮತ್ತು ನಿಗದಿತ ವೇಗದ ಮಿತಿಯಾದ ಪ್ರತಿ ಗಂಟೆಗೆ 100 ಕಿ.ಮೀ. ಮೀರುವ ವಾಹನಗಳು ಅಪಘಾತಕ್ಕೆ ಪ್ರಮುಖ ಕಾರಣವಾಗಿವೆ. ವಾಹನ ಸವಾರರಿಗೆ ವೇಗದ ಮಿತಿ ಬಗ್ಗೆ ಅರಿವು ಮೂಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.

‘ಈ ರಸ್ತೆ ವೈಜ್ಞಾನಿಕವಾಗಿ ನಿರ್ಮಿಸಿಲ್ಲ. ಹೆದ್ದಾರಿಯಲ್ಲಿನ ಸಮಸ್ಯೆಗಳ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(ಎನ್‌ಎಚ್‌ಎಐ) ಅಧಿಕಾರಿಗಳ ಜತೆ ಚರ್ಚಿಸಲಾಗುವುದು’ ಎಂದರು. ಮರಿತಿಬ್ಬೇಗೌಡ ಮಾತನಾಡಿ, ‘ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇ ರಾಷ್ಟ್ರೀಯ ಹೆದ್ದಾರಿ ಅಲ್ಲ, ಸಾವಿನ ದಾರಿಯಾಗಿದೆ. ಕೇವಲ ಆರು ತಿಂಗಳಲ್ಲಿ 512 ಅಪಘಾತಗಳು ಸಂಭವಿಸಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪ್ರತಿ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದರೂ ನಿಯಂತ್ರಣಕ್ಕೆ ಕ್ರಮಕೈಗೊಂಡಿಲ್ಲ. ಹೆದ್ದಾರಿಯಲ್ಲಿ ಕಳ್ಳತನಗಳು ನಡೆಯುತ್ತಿವೆ. ಹೀಗಾಗಿ, ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.