ADVERTISEMENT

Bengaluru Metro: ಸದ್ಯಕ್ಕಿಲ್ಲ ಮೆಟ್ರೊ ಪ್ರಯಾಣ ದರ ಏರಿಕೆ

ಬಾಲಕೃಷ್ಣ ಪಿ.ಎಚ್‌
Published 17 ಜನವರಿ 2026, 1:00 IST
Last Updated 17 ಜನವರಿ 2026, 1:00 IST
ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ಜನಸಂದಣಿ (ಸಾಂದರ್ಭಿಕ ಚಿತ್ರ)
ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ಜನಸಂದಣಿ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಬಿಎಂಆರ್‌ಸಿಎಲ್‌ ಪ್ರತಿ ವರ್ಷ ಶೇ 5ರಷ್ಟು ಪ್ರಯಾಣದರ ಹೆಚ್ಚಳ ಮಾಡಬಹುದು ಎಂದು ದರ ನಿಗದಿ ಸಮಿತಿ (ಎಫ್‌ಎಫ್‌ಸಿ) ಶಿಫಾರಸು ಮಾಡಿದ್ದರೂ ಸದ್ಯಕ್ಕೆ ಮೆಟ್ರೊ ಪ್ರಯಾಣ ದರ ಏರಿಸುವ ಚಿಂತನೆ ಇಲ್ಲ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇಂಧನ ವೆಚ್ಚ, ಸಿಬ್ಬಂದಿ ವೆಚ್ಚ, ನಿರ್ವಹಣೆ ವೆಚ್ಚ, ಇತರ ವೆಚ್ಚಗಳನ್ನು ಹಿಂದಿನ ವರ್ಷಕ್ಕೆ ಹೋಲಿಸಿ ಎಷ್ಟು ಹೆಚ್ಚಾಗಿದೆ ಎಂಬುದನ್ನು ಲೆಕ್ಕಾಚಾರ ಮಾಡಿ ಅದರ ಸರಾಸರಿಯಂತೆ ಪ್ರಯಾಣ ದರ ಹೆಚ್ಚಿಸಬೇಕು. ಇಲ್ಲವೇ ವಾರ್ಷಿಕ ಶೇ 5ರಷ್ಟು ಹೆಚ್ಚಳ ಮಾಡಬೇಕು. ಈ ಎರಡರಲ್ಲಿ ಕಡಿಮೆ ಯಾವುದೋ ಅದನ್ನೇ ಪಾಲಿಸಬೇಕು ಎಂದು ದರ ನಿಗದಿ ಸಮಿತಿ ತನ್ನ ವರದಿಯಲ್ಲಿ ತಿಳಿಸಿತ್ತು.

‘ದರ ನಿಗದಿ ಸಮಿತಿ ಶಿಫಾರಸು ಮಾಡಿರುವುದು ನಿಜ. ಆದರೆ, ದರ ಏರಿಕೆಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಯನ್ನು ಆರಂಭಿಸಿಲ್ಲ. ಸದ್ಯಕ್ಕೆ ಏರಿಕೆ ಮಾಡುವುದಿಲ್ಲ. ಮುಂದೆ ಏರಿಕೆ ಮಾಡಲು ನಿರ್ಧರಿಸಿದಾಗ ಮಾಹಿತಿ ನೀಡಲಾಗುವುದು’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಶಿಫಾರಸು ಪಾಲನೆಯಾಗಿರಲಿಲ್ಲ: ದರ ಹೆಚ್ಚಳಕ್ಕಾಗಿ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ರಾಜ್ಯ ಸರ್ಕಾರವನ್ನು ಬಿಎಂಆರ್‌ಸಿಎಲ್‌ 2024ರಲ್ಲಿ ಕೋರಿತ್ತು. ಅದರಂತೆ ರಾಜ್ಯದ ಮೂಲಸೌಕರ್ಯ ಇಲಾಖೆಯು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಕೇಂದ್ರ ಸರ್ಕಾರವು ದರ ನಿಗದಿ ಸಮಿತಿಯನ್ನು ನೇಮಕ ಮಾಡಿತ್ತು. ಸಮಿತಿಯು ಸಾರ್ವಜನಿಕರಿಂದ, ಬಿಎಂಆರ್‌ಸಿಎಲ್‌ ಅಧಿಕಾರಿಗಳಿಂದ, ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಿತ್ತು. 

2017ರಲ್ಲಿ ಕೊನೇ ಬಾರಿ ದರ ಪರಿಷ್ಕರಣೆ ಮಾಡಲಾಗಿತ್ತು. ಆಗ ಮೊದಲ ಎರಡು ಕಿ.ಮೀ.ಗೆ ಕನಿಷ್ಠ ದರ ₹ 10 ಹಾಗೂ ಗರಿಷ್ಠ ಅಂದರೆ 22 ಕಿ.ಮೀ.ಯಿಂದ 30 ಕಿ.ಮೀ.ವರೆಗೆ ₹ 60 ದರ ನಿಗದಿಯಾಗಿತ್ತು. ಅದಾಗಿ 7.5 ವರ್ಷಗಳಾಗಿರುವುದರಿಂದ ವೇತನ ಹೆಚ್ಚಳ, ಸಾಮಗ್ರಿಗಳ ಬೆಲೆ ಹೆಚ್ಚಳ, ಸಾಲ ಹೆಚ್ಚಳ ಹೀಗೆ ಎಲ್ಲವೂ ಅಧಿಕವಾಗಿರುವುದರಿಂದ ಶೇ 105.5ರಷ್ಟು ಹೆಚ್ಚಳ ಮಾಡಬೇಕು ಎಂದು ಬಿಎಂಆರ್‌ಸಿಎಲ್‌ ಬೇಡಿಕೆ ಮುಂದಿಟ್ಟಿತ್ತು.

12 ಸ್ಲ್ಯಾಬ್‌ ಮಾಡಬೇಕು. ಕನಿಷ್ಠದರ ₹21 ಹಾಗೂ ಗರಿಷ್ಠ ದರ ₹123ಕ್ಕೆ ಏರಿಸಬೇಕು ಎಂದು ತಿಳಿಸಿತ್ತು. ದೇಶದ ವಿವಿಧ ಮೆಟ್ರೊಗಳಲ್ಲಿ ಇರುವ ದರ, ವಿದೇಶಗಳಲ್ಲಿ ಇರುವ ದರ ಪರಿಷ್ಕರಣೆ ವ್ಯವಸ್ಥೆ ಎಲ್ಲವನ್ನೂ ಅಧ್ಯಯನ ನಡೆಸಿದ ದರ ನಿಗದಿ ಸಮಿತಿಯು 12 ಸ್ಲ್ಯಾಬ್‌ಗಳ ಬದಲು 10 ಸ್ಲ್ಯಾಬ್‌ಗಳನ್ನು ಶಿಫಾರಸು ಮಾಡಿತ್ತು. ಅಲ್ಲದೇ ಕನಿಷ್ಠ ದರವನ್ನು ₹ 10 ಇರುವುದನ್ನು ಹಾಗೇ ಉಳಿಸಿಕೊಂಡು ಗರಿಷ್ಠ ದರವನ್ನು ₹ 90ಕ್ಕೆ ನಿಗದಿ ಮಾಡಿತ್ತು. ಶೇ 51.55ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿತ್ತು.

ಬಿಎಂಆರ್‌ಸಿಎಲ್‌ ಆಡಳಿತ ಮಂಡಳಿಯು ಫೆ.9ರಂದು ಪರಿಷ್ಕೃತ ದರ ಜಾರಿಗೆ ತರುವಾಗ ಕೆಲವು ಶಿಫಾರಸುಗಳನ್ನು ಪಾಲಿಸಿರಲಿಲ್ಲ. ಶೇ 51.55 ರಷ್ಟು ಹೆಚ್ಚಳದ ಶಿಫಾರಸಿನ ಬದಲು ಶೇ 100ಕ್ಕೂ ಅಧಿಕ ದರ ವಿಧಿಸಿತ್ತು. ಪ್ರಯಾಣಿಕರಿಂದ ಪ್ರತಿಭಟನೆ ಎದುರಾದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರು. ದುಪ್ಪಟ್ಟು ಇರುವಲ್ಲಿ ದರ ಇಳಿಕೆ ಮಾಡಲು ಕ್ರಮ ಕೈಗೊಂಡಿತ್ತು. ಕೊನೆಗೆ ಗರಿಷ್ಠ ಹೆಚ್ಚಳವನ್ನು ಶೇ 71.5ಕ್ಕೆ ಇಳಿಸಿತ್ತು.

ಒಂದು ವರ್ಷ ‍ಪೂರ್ಣಗೊಂಡ ಕೂಡಲೇ ಮತ್ತೆ ದರ ಹೆಚ್ಚಿಸಿದರೆ ‍ಪ್ರಯಾಣಿಕರಿಂದ ವಿರೋಧ ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ಕಾದು ನೋಡುವ ತಂತ್ರವನ್ನು ಬಿಎಂಆರ್‌ಸಿಎಲ್‌ ಅನುಸರಿಸುತ್ತಿದೆ. ಒಂದೆರಡು ತಿಂಗಳ ಬಳಿಕ ಮತ್ತೆ ದರ ಏರಿಕೆಗೆ ಮುಂದಾಗಬಹುದು ಎಂದು ಬಿಎಂಆರ್‌ಸಿಎಲ್‌ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ನಿಲ್ಲಲು ಜಾಗವಿಲ್ಲದಿರುವುದೇ ಐಷಾರಾಮಿ

ಸುರಕ್ಷಿತ ಸಮಯ ಪಾಲನೆ ಮತ್ತು ಐಷಾರಾಮಿ ಪ್ರಯಾಣಕ್ಕೆ ನಮ್ಮ ಮೆಟ್ರೊದಲ್ಲಿ ಸಂಚರಿಸಿ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಮೆಟ್ರೊದಲ್ಲಿ ಕಾಲಿರಿಸಲು ಜಾಗವಿಲ್ಲದಷ್ಟು ಜನ ಇರುತ್ತಾರೆ. ಇದನ್ನೇ ಸುರಕ್ಷಿತ ಮತ್ತು ಐಷಾರಾಮಿ ಪ್ರಯಾಣ ಎಂದು ಕರೆದಿರಬೇಕು. ಸಮಯ ಪಾಲನೆ ಒಂದೇ ಸರಿ ಇರುವುದು. ಬೆಂಗಳೂರು ನಗರದ ವಾಹನ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವುದರಿಂದ ಪಾರಾಗಲು ಮಾತ್ರ ಜನರು ಮೆಟ್ರೊದಲ್ಲಿ ದುಬಾರಿ ದರ ಪಾವತಿಸಿ ಸಂಚರಿಸುತ್ತಿದ್ದಾರೆ. ಮತ್ತೆ ಪ್ರಯಾಣ ದರ ಏರಿಕೆ ಮಾಡುವುದು ಸರಿಯಲ್ಲ ಎಂದು ಐಟಿ ಉದ್ಯೋಗಿ ಪ್ರಜ್ವಲ್‌ ಕುಮಾರ್‌ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.