ADVERTISEMENT

Bengaluru Metro Fare Hike | ಬೇಕಾಬಿಟ್ಟಿ ಪ್ರಯಾಣ ದರ ಏರಿಕೆ ಎಷ್ಟು ಸರಿ?

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 0:30 IST
Last Updated 19 ಫೆಬ್ರುವರಿ 2025, 0:30 IST
<div class="paragraphs"><p>ನಮ್ಮ ಮೆಟ್ರೊ</p></div>

ನಮ್ಮ ಮೆಟ್ರೊ

   

(ಸಂಗ್ರಹ ಚಿತ್ರ)

ಬೆಂಗಳೂರು: ‘ನಮ್ಮ ಮೆಟ್ರೊ ಪ್ರಯಾಣ ದರವನ್ನು ವಿಪರೀತ ಏರಿಸಿರುವ ಬಿಎಂಆರ್‌ಸಿಎಲ್‌ ಆನಂತರ ಕೆಲವು ಸ್ಟೇಜ್‌ಗಳಿಗೆ ಸ್ವಲ್ಪ ಪ್ರಮಾಣದಲ್ಲಿ ದರ ಇಳಿಸಿ ಮುಂಗೈಗೆ ಬೆಲ್ಲ ಸವರುವ ಕೆಲಸ ಮಾಡಿದೆ. ಆದರೆ ಎಲ್ಲ ಸ್ಟೇಜ್‌ಗಳ ಪ್ರಯಾಣ ದರ ಇಳಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ADVERTISEMENT

****

ಮೆಟ್ರೊ ಪ್ರಯಾಣ ದರವನ್ನು ಏಕಾಏಕಿ ಏರಿಕೆ ಮಾಡಿರುವುದು ಸರಿಯಲ್ಲ. ಅತ್ಯಂತ ವೇಗವಾಗಿ ಸಂಚರಿಸಿ ಗುರಿ ಮುಟ್ಟುವ ಮೆಟ್ರೊ ರೈಲು, ದರ ಏರಿಕೆ ಮಾಡುವುದರಲ್ಲಿಯೂ ಅಷ್ಷೇ ಮುಂಚೂಣಿಯಲ್ಲಿದೆ. ಸಾರ್ವಜನಿಕ ಸಾರಿಗೆಗಳಾದ ಬಸ್‌, ಮೆಟ್ರೊ ಸಾರ್ವಜನಿಕರಿಗೆ ಸೇವೆ ನೀಡಬೇಕು. ಅದನ್ನು ಬಿಟ್ಟು ಬೇಕಾಬಿಟ್ಟಿ ಪ್ರಯಾಣ ದರ ಏರಿಕೆ ಮಾಡುವುದು ಎಷ್ಟು ಸರಿ? ಬಿಎಂಆರ್‌ಸಿಎಲ್ ಕೂಡಲೇ ಮೆಟ್ರೊ ಪ್ರಯಾಣ ದರ ಇಳಿಸಬೇಕು.

-ಪೂಜಾ ಭಾರತೀಶ ತಟ್ಟಿ ಜಾಲವಾದಿ, ಜೆ.ಪಿ. ನಗರ

****

ನಮ್ಮ ಮೆಟ್ರೊ ಎಂಬುದು ಹೆಸರಿಗೆ ಮಾತ್ರ ಸೀಮಿತವಾಗಿದೆ. ಮೆಟ್ರೊ ಪ್ರಯಾಣ ದರ ನೋಡಿದರೆ ಸಾರ್ವಜನಿಕರು ಮೆಟ್ರೊ ಕಡೆ ತಲೆ ಕೂಡ ಹಾಕುವಂತಿಲ್ಲ. ಸಾರ್ವಜನಿಕ ಸಾರಿಗೆಗಳಿಗೆ ಸಂಬಂಧಿಸಿದಂತೆ ಪ್ರಯಾಣ ದರಗಳನ್ನು ಹೆಚ್ಚಿಸುವ ಸಂದರ್ಭದಲ್ಲಿ ಜನಸಾಮಾನ್ಯರ ಬಗ್ಗೆ ಚಿಂತನೆ ಮಾಡಬೇಕು. ಬಡ ಮತ್ತು ಮಧ್ಯಮ ವರ್ಗದವರಿಗೆ ಬರುವ ಸಂಬಳದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಇಂದಿನ ಬೆಲೆ ಏರಿಕೆ ಸಂದರ್ಭದಲ್ಲಿ ಮೆಟ್ರೊ ಪ್ರಯಾಣ ದರ ಹೆಚಿಸಿರುವುದರಿಂದ ಸಾರ್ವಜನಿಕರಿಗೆ ಹೊರೆಯಾಗಿದೆ.

-ಹೇಮಾವತಿ, ರಾಘವೇಂದ್ರ ಬಡಾವಣೆ

****

ಬೆಲೆ ಏರಿಕೆಯ ಗಾಯಗಳ ಮೇಲೆ ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆ ಮಾಡುವುದರ ಮೂಲಕ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ. ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಪರಿಸರ ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ನಮ್ಮ ಮೆಟ್ರೊ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆದರೆ ಈಗ ಪ್ರಯಾಣ ದರ ಹೆಚ್ಚಿಸಿರುವ ಪರಿಣಾಮ ಸಾರ್ವಜನಿಕರು, ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಚರ್ಚಿಸಿ ಮೆಟ್ರೊ ಪ್ರಯಾಣ ದರವನ್ನು ಕಡಿತಗೊಳಿಸಬೇಕು. 

-ಜಯಶ್ರೀ ಬಿ., ಕುಮಾರಸ್ವಾಮಿ ಬಡಾವಣೆ 

****

ಬೆಂಗಳೂರು ನಗರದಲ್ಲಿರುವ ಎಲ್ಲ ವರ್ಗದ ಜನರು ಮೆಟ್ರೊ ಪ್ರಯಾಣವನ್ನು ಅವಲಂಬಿಸಿದ್ದಾರೆ. ಆದರೆ ಬಿಎಂಆರ್‌ಸಿಎಲ್‌ ಏಕಾಏಕಿ ಮೆಟ್ರೊ ಪ್ರಯಾಣ ದರವನ್ನು ಶೇಕಡ 100ರಷ್ಟು ಹೆಚ್ಚಳ ಮಾಡಿರುವುದು ಖಂಡನೀಯ. ಇದರಿಂದ ಮೆಟ್ರೊದಲ್ಲಿ ಪ್ರಯಾಣಿಸುವ ಸಾರ್ವಜನಿಕರ ಸ್ಥಿತಿ ಏನಾಗಬೇಕು? ಬಿಎಂಆರ್‌ಸಿಎಲ್‌ ಮೊದಲು ತನ್ನ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕು. ದ್ವಿಚಕ್ರ ವಾಹನ ಹಾಗೂ ಕಾರುಗಳ ನಿಲುಗಡೆ ಮಾಡುವ ಸ್ಥಳಗಳನ್ನು ಹೆಚ್ಚಿಸಬೇಕು. ಖಾಲಿ ಜಾಗಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸಲು ಅವಕಾಶ ನೀಡಿದರೆ ಮೆಟ್ರೊಗೆ ಹೆಚ್ಚು ಆದಾಯ ಬರುತ್ತದೆ.

-ಮೋಹನ್ ಕುಮಾರ್, ವಿಜಯನಗರ

****

ಮೆಟ್ರೊ ರೈಲು ಮಾರ್ಗ ನಿರ್ಮಾಣ ಹಾಗೂ ಇತರ ಮೂಲಸೌಕರ್ಯ ಒದಗಿಸಲು ಮಾಡಿರುವ ಸಾಲ ಮತ್ತು ಇತರ ವೆಚ್ಚದ ಒಟ್ಟು ಮೊತ್ತವನ್ನು ಪ್ರಯಾಣಕರಿಂದ ವಸೂಲಿ ಮಾಡಬೇಕು ಎಂಬ ಅವೈಜ್ಞಾನಿಕ ನಡೆಯನ್ನು ಬಿಎಂಆರ್‌ಸಿಎಲ್‌ ಅನುಸರಿಸುತ್ತಿದೆ. ಈ ಮಾನದಂಡದ ಆಧಾರದ ಮೇಲೆ ಮೆಟ್ರೊ ಪ್ರಯಾಣ ದರವನ್ನು ನಿರ್ಧರಿಸಿದರೆ ಮುಂದಿನ ಐದು ವರ್ಷಗಳಲ್ಲಿ 1 ಕಿ. ಮೀ ಮೆಟ್ರೊ ಪ್ರಯಾಣ ದರ ₹15, ಕನಿಷ್ಠ ₹40 ಹಾಗೂ ಗರಿಷ್ಠ ₹300 ಆಗಲಿದೆ. ಪ್ರಯಾಣಿಕರ ಮೇಲಿನ ಹೊರೆ ತಗ್ಗಿಸಲು ಮೆಟ್ರೊ ಪ್ರಯಾಣ ದರವನ್ನು ಕಡಿತಗೊಳಿಸಬೇಕು.

-ರಾಜಶೇಖರ್ ವಿ.ಎನ್., ಶೇಷಾದ್ರಿಪುರ

****

ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ಉದ್ದೇಶದಿಂದ ನಮ್ಮ ಮೆಟ್ರೊ ಪ್ರಾರಂಭಿಸಲಾಗಿದೆ. ಇದರಿಂದ ಜನರು ತಮ್ಮ ಸ್ವಂತ ವಾಹನಗಳನ್ನು ರಸ್ತೆಗೆ ಇಳಿಸದೆ ಸುಗಮ ಸಂಚಾರಕ್ಕೆ ಸಹಕರಿಸುವುದಾಗಿತ್ತು. ಅದು ತಕ್ಕಮಟ್ಟಿಗೆ ಯಶಸ್ವಿಯೂ ಆಗಿತ್ತು. ಈಗ ಅವೈಜ್ಞಾನಿಕವಾಗಿ ಮೆಟ್ರೊ ಪ್ರಯಾಣ ದರವನ್ನು ಏರಿಕೆ ಮಾಡುವ ಮೂಲಕ ಮೂಲ ಉದ್ದೇಶಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಮೆಟ್ರೊ ಪ್ರಯಾಣ ದರ ಹೆಚ್ಚಳವಾಗಿರುವುದರಿಂದ ಸಾರ್ವಜನಿಕರು ಮತ್ತೆ ತಮ್ಮ ವಾಹನಗಳನ್ನು ರಸ್ತೆಗೆ ಇಳಿಸುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ, ಪರಿಸರ ಮಾಲಿನ್ಯ ಉಂಟಾಗುತ್ತಿದೆ. 

-ಕಡೂರು ಫಣಿಶಂಕರ್, ತಲಘಟ್ಟಪುರ

****

ಮೆಟ್ರೊ ಪ್ರಯಾಣ ದರ ಏರಿಕೆ ಮಾಡಿರುವುದು ಎಲ್ಲ ವರ್ಗದವರಿಗೆ ಆಘಾತ ಉಂಟುಮಾಡಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ, ಬಸ್‌ ಪ್ರಯಾಣ ದರ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಮೆಟ್ರೊ ದರ ಏರಿಕೆ ಆಘಾತ ನೀಡಿದೆ. ಬಿಎಂಆರ್‌ಸಿಎಲ್‌ ಏಕಾಏಕಿ ಅವೈಜ್ಞಾನಿಕವಾಗಿ ದರ ಹೆಚ್ಚಳ ಮಾಡಿರುವುದು ಖಂಡನೀಯ. ಜನರ ಸಂಕಷ್ಟಕ್ಕೆ ಪೂರಕವಾಗಿ ಸ್ಪಂದಿಸಬೇಕಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಕಿತ್ತಾಟದಲ್ಲಿ ನಿರತರಾಗಿರುವುದು ದುರಂತ. ಕೂಡಲೇ ಮೆಟ್ರೊ ಪ್ರಯಾಣ ದರ ಇಳಿಸಿ, ಸಾರ್ವಜನಿಕರ ಹಿತ ಕಾಪಡಬೇಕು.

-ಶ್ರೀನಿವಾಸ್, ಮೂಡಲಪಾಳ್ಯ

****

ಇತ್ತೀಚೆಗೆ ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆ ಮಾಡಿರುವುದರಿಂದ ಇದು ಶ್ರೀಮಂತರ ಮೆಟ್ರೊ ಎಂದು ಭಾಸವಾಗುತ್ತಿದೆ. ಬಿಎಂಆರ್‌ಸಿಎಲ್‌ ನಷ್ಟದಲ್ಲಿದ್ದರೆ ಶೇ 5ರಿಂದ 10ರಷ್ಟು ಪ್ರಯಾಣ ದರ ಏರಿಕೆ ಮಾಡಬೇಕಿತ್ತು. ಅದನ್ನು ಬಿಟ್ಟು ಏಕಾಏಕಿಯಾಗಿ ಶೇ 100ರಷ್ಟು ಪ್ರಯಾಣ ದರ ಏರಿಕೆ ಮಾಡಿರುವುದರಿಂದ ಸಾರ್ವಜನಿಕರಿಗೆ ಆರ್ಥಿಕ ಹೊರೆ ಆಗುತ್ತಿದೆ. ಕೂಡಲೇ ಸಂಬಂಧಪಟ್ಟ ಮೆಟ್ರೊ ಪ್ರಯಾಣ ದರ ಇಳಿಸಬೇಕು.

-ಜಗದೀಶ, ಮೆಟ್ರೊ ‍ಪ‍್ರಯಾಣಿಕ

****

ಮೆಟ್ರೊ ಪ್ರಯಾಣ ದರವನ್ನು ಶೇ 47ರಷ್ಟು ಹೆಚ್ಚಿಸುವುದಾಗಿ ಪ್ರಕಟಿಸಲಾಗಿತ್ತು. ಆದರೆ ಬಿಎಂಆರ್‌ಸಿಎಲ್‌ ಶೇ 70ರಷ್ಟು ಪ್ರಯಾಣ ದರ ಹೆಚ್ಚಿಸುವ ಮೂಲಕ ಸಾರ್ವಜನಿಕರಿಗೆ ಅನ್ಯಾಯ ಮಾಡಿದೆ. ತರಕಾರಿ, ಹಣ್ಣುಗಳ ದರ ಗಗನಕ್ಕೇರಿದ್ದರಿಂದ ಮೊದಲೇ ಸೋತು ಸುಣ್ಣವಾಗಿರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬಿಎಂಆರ್‌ಸಿಎಲ್‌ನವರು ಸುಟ್ಟ ಗಾಯಕ್ಕೆ ಸುಣ್ಣ ಹಾಕಿದ್ದಾರೆ. ಮೆಟ್ರೊ ದರ ಪರಿಷ್ಕರಣೆಯ ಆದೇಶ ಕೂಡಲೇ ಹಿಂಪಡೆಯಬೇಕು. 

-ವೈ.ವಿ. ಪ್ರಭಾಕರ, ಗುಬ್ಬಲಾಳ

****

ಬಿಎಂಆರ್‌ಸಿಎಲ್‌ ಮಾಡುವ ಖರ್ಚು ಮತ್ತು ಆದಾಯ ಎರಡನ್ನೂ ಗಮನದಲ್ಲಿಟ್ಟುಕೊಂಡು ಒಂದೇ ಬಾರಿಗೆ ಶೇ 100ರಷ್ಟು ಪ್ರಯಾಣ ದರ ಏರಿಕೆ ಮಾಡಲಾಗಿದೆ. ಐದು ವರ್ಷಕ್ಕೊಮ್ಮೆ ಅಗತ್ಯಕ್ಕೆ ಅನುಗುಣವಾಗಿ ಪ್ರಯಾಣಿಕರಿಗೆ ಹೊರೆಯಾಗದಂತೆ ಮೆಟ್ರೊ ಪ್ರಯಾಣ ದರವನ್ನು ಹೆಚ್ಚಿಸಬೇಕಿತ್ತು. ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಆರೋಪ ಮಾಡುವುದನ್ನು ಬಿಟ್ಟು ಮೆಟ್ರೊ ಪ್ರಯಾಣ ದರ ಇಳಿಸಬೇಕು. 

-ಕೆ.ಎಸ್. ನಾಗರಾಜ್, ಹನುಮಂತನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.