ವಿಶ್ವ ಒಕ್ಕಲಿಗರ ಮಹಾ ವೇದಿಕೆ ಶನಿವಾರ ಆಯೋಜಿಸಿದ್ದ ನಮ್ಮ ಮೆಟ್ರೊಗೆ ‘ನಾಡಪ್ರಭು ಕೆಂಪೇಗೌಡ ಮೆಟ್ರೊ’ ಎಂದು ಮರುನಾಮಕರಣಕ್ಕೆ ಒತ್ತಾಯಿಸುವ ಸಭೆಯಲ್ಲಿ ವಿವೇಕ್ ಸುಬ್ಬಾರೆಡ್ಡಿ, ಕೆ.ಇ. ರಾಧಾಕೃಷ್ಣ ಚರ್ಚೆಯಲ್ಲಿ ತೊಡಗಿದ್ದರು. ಟಿ. ಕೋನಪ್ಪರೆಡ್ಡಿ, ಭಾರತಿ ಶಂಕರ್ ಉಪಸ್ಥಿತರಿದ್ದರು.
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಹೆಸರಿನ ಹಿಂದೆ ಪರಂಪರೆ, ಅಸ್ಮಿತೆ ಮತ್ತು ಅಸ್ತಿತ್ವ ಇರುತ್ತದೆ. ಹಾಗಾಗಿ ನಮ್ಮ ಮೆಟ್ರೊಗೆ ‘ನಮ್ಮ ಕೆಂಪೇಗೌಡ ಮೆಟ್ರೊ’ ಎಂದು ಹೆಸರಿಡಬೇಕು’ ಎಂದು ಕೆ.ಇ. ರಾಧಾಕೃಷ್ಣ ಆಗ್ರಹಿಸಿದರು.
ನಮ್ಮ ಮೆಟ್ರೊಗೆ ‘ನಾಡಪ್ರಭು ಕೆಂಪೇಗೌಡ ಮೆಟ್ರೊ’ ಎಂದು ಮರುನಾಮಕರಣಕ್ಕೆ ಒತ್ತಾಯಿಸಿ ವಿಶ್ವ ಒಕ್ಕಲಿಗರ ಮಹಾ ವೇದಿಕೆ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೆಂಪೇಗೌಡರು ಬೆಂಗಳೂರು ನಗರವನ್ನು ಮಾತ್ರ ಕಟ್ಟಿದ್ದಲ್ಲ. ಸುತ್ತಮುತ್ತಲಿನ ನೀರಿಲ್ಲದ ಪ್ರದೇಶಗಳಲ್ಲಿ ಕೆರೆ ಕಟ್ಟಿ ಕೃಷಿ ಭೂಮಿಯನ್ನಾಗಿ ಮಾಡಿದ್ದರು. ಕೃತಜ್ಞಾ ಪೂರ್ವಕವಾಗಿ ಅವರ ಹೆಸರನ್ನು ಮೆಟ್ರೊಗೆ ಇಡಬೇಕು’ ಎಂದು ಹೇಳಿದರು.
‘ಬಸವಣ್ಣ ಅವರ ವಿಚಾರಧಾರೆ ದೇಶಕ್ಕೆ ಅನ್ವಯವಾಗುವಂಥದ್ದು. ಅವರನ್ನು ರಾಜ್ಯಕ್ಕೆ ಸೀಮಿತಗೊಳಿಸದೇ ದೇಶಕ್ಕೆ ಅನ್ವಯವಾಗುವ ಯೋಜನೆಗೆ ಅವರ ಹೆಸರು ಇಡಬೇಕು’ ಎಂದು ಸಲಹೆ ನೀಡಿದರು.
‘ಆಸ್ಪತ್ರೆಗೆ ‘ವಿಕ್ಟೋರಿಯಾ’ ಹೆಸರು ಇಟ್ಟಿರುವುದು ಸರಿಯಲ್ಲ. ವಿಕ್ಟೋರಿಯಾ ಸೇರಿದಂತೆ ಎಲ್ಲ ಇಂಗ್ಲಿಷರ ಹೆಸರನ್ನು ತೆಗೆಯಬೇಕು. ಜನಪರ ಆಡಳಿತ ನೀಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ಸಾಹಿತಿಗಳಾದ ಕುವೆಂಪು, ಬೇಂದ್ರೆ, ಕಾರಂತ, ಸಂಗೀತ ಕ್ಷೇತ್ರದ ಅಧ್ವರ್ಯು ಇಬ್ರಾಹಿಂ ಆದಿಲ್ ಶಾ ಹೆಸರು ಇಡಬೇಕು’ ಎಂದು ಹೇಳಿದರು.
ವಿಶ್ವ ಒಕ್ಕಲಿಗರ ಸಂಘದ ಅಧ್ಯಕ್ಷ ವೈ.ಡಿ. ರವಿಶಂಕರ್ ಮಾತನಾಡಿ, ‘ನಮ್ಮ ಮೆಟ್ರೊಗೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಲು ಸರ್ಕಾರ ಮುಕ್ತವಾಗಿದೆ ಎಂದು 10 ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಈಗ ಬಸವಣ್ಣನ ಹೆಸರಿಡುವ ಬಗ್ಗೆ ಹೇಳಿದ್ದಾರೆ. ಹಿಂದೆ ಹೇಳಿರುವುದನ್ನು ನೆನಪಿಟ್ಟುಕೊಂಡು ಕೆಂಪೇಗೌಡರ ಹೆಸರನ್ನು ಇಡಬೇಕು’ ಎಂದು ಆಗ್ರಹಿಸಿದರು.
ಬೆಂಗಳೂರು ವಕೀಲ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮಾತನಾಡಿ, ‘ಕೆಂಪೇಗೌಡರು ಒಕ್ಕಲಿಗರಿಗಷ್ಟೇ ಸೇರಿದವರಲ್ಲ. ಮೆಟ್ರೊಗೆ ಅವರ ಹೆಸರು ಇಡಲು ಎಲ್ಲ ಸಮುದಾಯದವರು ಹೋರಾಟ ಮಾಡಬೇಕು’ ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪರೆಡ್ಡಿ, ವಿಶ್ವ ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಭಾರತಿ ಶಂಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.