ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಜೂನ್ ತಿಂಗಳಲ್ಲಿ 2.23 ಕೋಟಿ ಮಂದಿ ಪ್ರಯಾಣಿಸಿದ್ದು, ಜೂನ್ 19ರಂದು ಒಂದೇ ದಿನ ದಾಖಲೆಯ 8.08 ಲಕ್ಷ ಜನ ಪ್ರಯಾಣಿಸಿದ್ದಾರೆ.
ಶೇ 50.06ರಷ್ಟು ಪ್ರಯಾಣಿಕರು ಸ್ಮಾರ್ಟ್‌ಕಾರ್ಡ್ ಬಳಕೆ ಮಾಡಿದ್ದಾರೆ. ಶೇ 30.45ರಷ್ಟು ಪ್ರಯಾಣಿಕರು ಟೋಕನ್ ಬಳಸಿದ್ದಾರೆ. ಶೇ 19.49ರಷ್ಟು ಮಂದಿ ಕ್ಯೂಆರ್ ಕೋಡ್ ಟಿಕೆಟ್ ಮೂಲಕ ಪ್ರಯಾಣಿಸಿದ್ದಾರೆ. ಜೂನ್ ತಿಂಗಳಲ್ಲಿ ಬಿಎಂಆರ್‌ಸಿಎಲ್‌ಗೆ ₹ 58.23 ಕೋಟಿ ಆದಾಯ ಬಂದಿದೆ.
ಹೆಚ್ಚಿದ ಪ್ರಮಾಣ: ನಗರದ ವಾಹನದಟ್ಟಣೆಯಿಂದ ತಪ್ಪಿಸಿಕೊಳ್ಳಲು ಜನರು ನಮ್ಮ ಮೆಟ್ರೊವನ್ನು ಅವಲಂಬಿಸುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿ–ಕೆ.ಆರ್.ಪುರ ನಡುವಿನ ಕಾಮಗಾರಿ ಪೂರ್ಣಗೊಂಡು ವೈಟ್‌ಫೀಲ್ಡ್‌ವರೆಗೆ ನೇರ ಮೆಟ್ರೊ ರೈಲು ಆರಂಭಗೊಂಡ ಬಳಿಕ ಹಸಿರು ಮತ್ತು ನೇರಳೆ ಮಾರ್ಗದಲ್ಲಿ 6.5 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಕೆಲವು ತಿಂಗಳಿನಿಂದ 7 ಲಕ್ಷ ದಾಟಿತ್ತು. ಜುಲೈ ತಿಂಗಳಲ್ಲಿ ಪ್ರತಿದಿನ ಸರಾಸರಿ 7.45 ಲಕ್ಷ ಜನರು ಪ್ರಯಾಣಿಸಿದ್ದಾರೆ.
ನೇರಳೆ ಮಾರ್ಗದಲ್ಲಿ ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ವಿಪರೀತ ಜನಸಂದಣಿ ಇದ್ದು, ರೈಲಿನ ಬಾಗಿಲು ಮುಚ್ಚಲು ಕಷ್ಟಪಡುವಷ್ಟು ಪ್ರಯಾಣಿಕರು ತುಂಬಿರುತ್ತಾರೆ. ದಟ್ಟಣೆಯ ಅವಧಿಯಲ್ಲಿ ಮೆಜೆಸ್ಟಿಕ್‌ನಿಂದ ಹೆಚ್ಚುವರಿಯಾಗಿ 15 ರೈಲುಗಳು ಸಂಚರಿಸುತ್ತಿದ್ದರೂ ಸಾಕಾಗುತ್ತಿಲ್ಲ. 2025ರ ಜೂನ್‌ವರೆಗೆ ಈಗಿರುವ ಕೋಚ್‌ಗಳೇ ಇರಲಿವೆ. ಆನಂತರ 21 ಕೋಚ್‌ಗಳು ಸೇರ್ಪಡೆಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.