ADVERTISEMENT

ಹೊರವರ್ತುಲ ರಸ್ತೆ: ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ ?

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2023, 16:17 IST
Last Updated 3 ಅಕ್ಟೋಬರ್ 2023, 16:17 IST
   

ಬೆಂಗಳೂರು: ‘ಹೊರವರ್ತುಲ ರಸ್ತೆಯಲ್ಲಿ ನಿತ್ಯವೂ ವಿಪರೀತ ದಟ್ಟಣೆ ಉಂಟಾಗುತ್ತಿದೆ. ಇದರ ನಿಯಂತ್ರಣಕ್ಕಾಗಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ’ ಎಂದು ಹೊರವರ್ತುಲ ರಸ್ತೆಯ ಕಂಪನಿಗಳ ಒಕ್ಕೂಟ (ಒಆರ್‌ಆರ್‌ಸಿಎ) ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಇತ್ತೀಚಿಗೆ ಭೇಟಿಯಾಗಿ ಮಾತುಕತೆ ನಡೆಸಿದ್ದ ಪದಾಧಿಕಾರಿಗಳು, ‘ಸಂಚಾರ ದಟ್ಟಣೆಯಿಂದ ಸಾಕಷ್ಟು ಸಮಸ್ಯೆಗಳು ಉದ್ಭವಿಸುತ್ತಿವೆ. ದಟ್ಟಣೆ ನಿಯಂತ್ರಣಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳಿ’ ಎಂದು ಕೋರಿದ್ದಾರೆ.

‘ಹೊರ ವರ್ತುಲ ರಸ್ತೆಯಲ್ಲಿ ಸಾಕಷ್ಟು ಕಂಪನಿಗಳ ಕಚೇರಿಗಳಿವೆ. ಸಾವಿರಾರು ಉದ್ಯೋಗಿಗಳು ಹೊರವರ್ತುಲ ರಸ್ತೆ ಮೂಲಕ ಕಚೇರಿಗೆ ಬಂದು ಹೋಗುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಹೊರವರ್ತುಲ ರಸ್ತೆಯಲ್ಲಿ ವಿಪರೀತ ದಟ್ಟಣೆ ಉಂಟಾಗುತ್ತಿದೆ. ಉದ್ಯೋಗಿಗಳು ಕಚೇರಿಗೆ ಬಂದು ಹೋಗಲು ಕಷ್ಟಪಡುತ್ತಿದ್ದಾರೆ. ಇದು ಕಂಪನಿಗಳ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತಿದೆ’ ಎಂದು ಪದಾಧಿಕಾರಿಗಳು ದೂರಿದ್ದಾರೆ.

ADVERTISEMENT

‘ಭಾರಿ ವಾಹನಗಳ ಸಂಚಾರವನ್ನು ತ್ವರಿತವಾಗಿ ನಿರ್ಬಂಧಿಸಬೇಕು. ಸರ್ವೀಸ್ ರಸ್ತೆ, ಪಾದಚಾರಿ ಮಾರ್ಗ ಹಾಗೂ ಬಸ್ ತಂಗುದಾಣಗಳನ್ನು ಅಭಿವೃದ್ಧಿಪಡಿಸಬೇಕು. ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡಬೇಕು. ಅಕ್ರಮವಾಗಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಉಪಮುಖ್ಯಮಂತ್ರಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಒಆರ್‌ಆರ್‌ಸಿಎ ಅಧ್ಯಕ್ಷರಾದ ಮಾನಸ್ ದಾಸ್, ‘ನಮ್ಮ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳುವಂತೆ ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್‌ ಅವರಿಗೆ ಉಪಮುಖ್ಯಮಂತ್ರಿ ಅವರು ಸೂಚನೆ ನೀಡಿದ್ದಾರೆ. ಜೊತೆಗೆ, ಹೊರವರ್ತುಲ ರಸ್ತೆಗೆ ಬಂದು ಪರಿಶೀಲನೆ ನಡೆಸುವುದಾಗಿಯೂ ಆಶ್ವಾಸನೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.