
ಬೆಂಗಳೂರು: ‘ಪರಸ್ಪರ ಅನ್ಯೋನ್ಯತೆ ದೈಹಿಕ ವಾಂಛೆಯಲ್ಲಿ ಚಿಗುರೊಡೆದು ಕೊನೆಗೊಂದು ದಿನ ಅತ್ಯಾಚಾರದ ಆರೋಪ ಹೊತ್ತುಕೊಂಡರೆ ಅಂತಹ ಪ್ರಕರಣಗಳನ್ನು ಬಹಳ ಎಚ್ಚರಿಕೆಯಿಂದ ಪರಿಶೀಲಿಸಬೇಕು’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
‘ಅತ್ಯಾಚಾರದ ಆರೋಪ ಹೊರಿಸಿ ನನ್ನ ವಿರುದ್ಧ ತರುಣಿ (21) ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ನಗರದ ತರುಣನೊಬ್ಬ (23) ಸಲ್ಲಿಸಿದ್ದ ರಿಟ್ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ತರುಣನ ವಿರುದ್ಧ ತರುಣಿ ದಾಖಲಿಸಿದ್ದ ಅತ್ಯಾಚಾರದ ದೂರನ್ನು ರದ್ದುಪಡಿಸಿದೆ.
‘ಒಪ್ಪಂದದ ಅನ್ಯೋನ್ಯತೆ ಮತ್ತು ಅತ್ಯಾಚಾರದ ಗಂಭೀರ ಆರೋಪದ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಸುಪ್ರೀಂ ಕೋರ್ಟ್ ಈ ಹಿಂದೆ ಹಲವು ಬಾರಿ ಸ್ಪಷ್ಟವಾಗಿ ಗುರುತಿಸಿದೆ’ ಎಂದು ಪುನರುಚ್ಚರಿಸಿರುವ ನ್ಯಾಯಪೀಠ, ‘ಪರಸ್ಪರ ಇಚ್ಛೆಯಿಂದ ಜನಿಸುವ ಸಂಬಂಧಗಳು ಕೆಲವೊಮ್ಮೆ ನಿರಾಶೆಯಲ್ಲಿ ಕೊನೆಗೊಂಡಾಗ ಭೂತಕಾಲದ ಅನ್ಯೋನ್ಯತೆಯನ್ನು ಒರೆಗೆ ಹಚ್ಚುವ ಅಗತ್ಯವಿದೆ’ ಎಂದು ನುಡಿದಿದೆ.
‘ಇಂತಹ ಆರೋಪಗಳನ್ನು ಹೊತ್ತು ನ್ಯಾಯಾಲಯದ ಮೆಟ್ಟಿಲೇರುವ ಪ್ರಕರಣಗಳಲ್ಲಿ ಕೆಲವೊಂದು ಸ್ಪಷ್ಟ ಪ್ರಕರಣಗಳನ್ನು ಹೊರತುಪಡಿಸಿ, ಎಲ್ಲವನ್ನೂ ಸಾರಾಸಗಟಾಗಿ ಕ್ರಿಮಿನಲ್ ಕಾನೂನಿನಡಿಯಲ್ಲಿ ಅಪರಾಧವಾಗಿ ಪರಿವರ್ತಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ವಿವರಿಸಿದೆ.
ರಾಜ್ಯ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದ ಹೆಚ್ಚುವರಿ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ದೂರುದಾರಳ ಮೇಲೆ ಅರ್ಜಿದಾರರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅದನ್ನು ಸಮ್ಮತಿಯುಕ್ತ ಲೈಂಗಿಕ ಕ್ರಿಯೆ ಎಂದು ಪರಿಗಣಿಸಲಾಗದು. ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಕ್ರಿಯೆ ನಡೆಸುವುದೂ ಭಾರತೀಯ ನ್ಯಾಯ ಸಂಹಿತೆ–2023ರ (ಬಿಎನ್‌ಎಸ್) ಅಡಿಯಲ್ಲಿ ಅಪರಾಧವಾಗುತ್ತದೆ. ಇದು ಅಂತಹ ಪ್ರಕರಣ ಅಲ್ಲದಿದ್ದರೂ, ಸಮ್ಮತಿಯುಕ್ತ ಲೈಂಗಿಕ ಕ್ರಿಯೆ ನಡೆದಿದೆಯೇ ಅಥವಾ ಇಲ್ಲವೇ ಎಂಬುದು ವಿಚಾರಣೆಯ ಮೂಲಕವೇ ತೀರ್ಮಾನವಾಗಬೇಕಿದೆ. ಆದ್ದರಿಂದ, ಅರ್ಜಿಯನ್ನು ವಜಾಗೊಳಿಸಬಾರದು’ ಎಂದು ಕೋರಿದ್ದರು.
ಆದರೆ, ಇದನ್ನು ತಳ್ಳಿ ಹಾಕಿರುವ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ತರುಣಿ ದಾಖಲಿಸಿದ್ದ ದೂರು, ತನಿಖೆ ನಡೆಸಿ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿ ಮತ್ತು ದೂರುದಾರರು ಮತ್ತು ಆರೋಪಿಗಳ ನಡುವಿನ ಸಂದೇಶದ (ಚಾಟ್) ವಿವರಗಳನ್ನು ಉಲ್ಲೇಖಿಸಿ, ‘ಆರೋಪಿ ಮತ್ತು ದೂರುದಾರಳ ನಡುವೆ ಮೊಬೈಲ್ ಫೋನ್‌ನಲ್ಲಿ ಹಂಚಿಕೊಂಡಿರುವ ಸಂದೇಶಗಳು ಉತ್ತಮ ಅಭಿರುಚಿಯಿಂದ ಕೂಡಿಲ್ಲ’ ಎಂದು ವಿವರಿಸಿದೆ. ಅರ್ಜಿದಾರ ತರುಣನ ಪರ ಹೈಕೋರ್ಟ್ ವಕೀಲ ಆತ್ರೇಯ ಸಿ.ಶೇಖರ್ ವಾದ ಮಂಡಿಸಿದ್ದರು.
ಇಬ್ಬರ ನಡುವಿನ ಕ್ರಿಯೆಗಳು ಸಮ್ಮತಿಯಿಂದ ಕೂಡಿವೆ ಎಂಬುದು ಢಾಳಾಗಿ ಗೋಚರಿಸುತ್ತದೆ. ಹೀಗಾಗಿ ಅರ್ಜಿದಾರ ತರುಣನ ವಿರುದ್ಧ ನ್ಯಾಯಿಕ ವಿಚಾರಣೆಗೆ ಅವಕಾಶ ನೀಡಿದ್ದೇ ಆದರೆ ಅದು ಕಾನೂನು ಪ್ರಕ್ರಿಯೆಯ ದುರುಪಯೋಗ ಆದಂತಾಗುತ್ತದೆ.ನ್ಯಾ. ಎಂ.ನಾಗಪ್ರಸನ್ನ
ಸಂಧಿಸಲು ನೆರವಾದ ‘ಬಂಬಲ್’ ಆ್ಯಪ್
ಡೇಟಿಂಗ್ ಆ್ಯಪ್ ‘ಬಂಬಲ್’ ಮೂಲಕ ಪರಿಚಿತರಾಗಿ ಆತ್ಮೀಯತೆ ಬೆಳೆಸಿಕೊಂಡಿದ್ದ ತರುಣ ಮತ್ತು ತರುಣಿ ಓಯೋ ರೂಮ್ ಬುಕ್ ಮಾಡಿ ಸಂಧಿಸಿದ್ದರು. ‘ನಾವಿಬ್ಬರೂ ಹೋಟೆಲ್ ರೂಂನಲ್ಲಿ ಸೇರಿದ್ದಾಗ ತರುಣ ನನ್ನ ಒಪ್ಪಿಗೆ ಇಲ್ಲದೆ ನನ್ನ ಇಚ್ಛೆಗೆ ವಿರುದ್ಧವಾಗಿ ಸಂಭೋಗ ನಡೆಸಿದ್ದಾನೆ’ ಎಂದು ಆರೋಪಿಸಿ ತರುಣಿ ಅತ್ಯಾಚಾರದ ಆರೋಪ ಹೊರಿಸಿ ದೂರು ನೀಡಿದ್ದರು. ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಬಿಎನ್‌ಎಸ್ ಕಲಂ 64ರ ಅಡಿಯಲ್ಲಿ ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
330 ಪ್ರಕರಣಗಳ ವಿಚಾರಣೆ
ಸದ್ಯ ಧಾರವಾಡ ಪೀಠದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಸೋಮವಾರ ಒಟ್ಟು 330 ಪ್ರಕರಣಗಳ ವಿಚಾರಣೆ ನಡೆಸಿ ಅವುಗಳಲ್ಲಿ 90 ಪ್ರಕರಣಗಳನ್ನು ವಿಲೇವಾರಿ ಮಾಡಿ ತಮ್ಮ ದಾಖಲೆಯನ್ನು ಮುಂದುವರಿಸಿದರು. ಬೆಳಿಗ್ಗೆ 10 ಗಂಟೆಗೇ ಪೀಠಾಸೀನರಾದ ನ್ಯಾ.ನಾಗಪ್ರಸನ್ನ ಅವರು ಸಂಜೆ 5.15ಕ್ಕೆಲ್ಲಾ 330 ಪ್ರಕರಣಗಳ ವಿಚಾರಣೆ ಪೂರೈಸಿದರು. ಅವುಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ವರ್ಗಗಳ ರಿಟ್ ವ್ಯಾಪ್ತಿಯ ಪ್ರಕರಣಗಳಾಗಿದ್ದು ಸದ್ಯ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಕರಣಗಳ ಕ್ಷಿಪ್ರ ವಿಲೇವಾರಿಯ ಅಗ್ರೇಸರ ಎಂಬ ಪಟ್ಟವನ್ನು ಕಾಯ್ದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.