ಬೆಂಗಳೂರು: ಆಟ-ಗಲಾಟ ಸಂಸ್ಥೆಯು ಇದೇ 5 ಮತ್ತು 6ಕ್ಕೆ ‘ಬೆಂಗಳೂರು ಕಾವ್ಯ ಉತ್ಸವ’ದ ಏಳನೇ ಆವೃತ್ತಿಯನ್ನು ಹಳೆ ಮದ್ರಾಸ್ ರಸ್ತೆಯಲ್ಲಿರುವ ಗೋಪಾಲನ್ ಮಾಲ್‌ನಲ್ಲಿ ಹಮ್ಮಿಕೊಂಡಿದೆ.
ಉತ್ಸವದಲ್ಲಿ ದೇಶದ ಹಳೆಯ ಮತ್ತು ಹೊಸ ತಲೆಮಾರಿನ ಬಹುಭಾಷಾ ಕವಿಗಳು, ಗೀತ ರಚನೆಕಾರರು, ಹಾಡುಗಾರರು, ಸಂಗೀತಗಾರರು ಭಾಗವಹಿಸಲಿದ್ದಾರೆ. ಉತ್ಸವವು ಕವಿತೆ, ಸಂವಾದ, ಭಾಷಣಗಳು ಹಾಗೂ ಕಾರ್ಯಾಗಾರಗಳನ್ನು ಒಳಗೊಂಡಿದೆ. ‘ಕವಿತೆಗಳಿಗೆ ವೇದಿಕೆಯಾಗಿ ಸಾಮಾಜಿಕ ಜಾಲತಾಣ’ ಎಂಬ ವಿಷಯದ ಮೇಲೆ ಅನುಕೃತಿ ಉಪಾಧ್ಯಾಯ, ಮೇಘಾ ರಾವ್, ಮೆಹಕ್ ಗೋಯಲ್ ಮತ್ತು ನಿಶಿ ಜಗವತ್ ಚರ್ಚಿಸಲಿದ್ದಾರೆ. ಕವಿ ಕೆ. ಸಚ್ಚಿದಾನಂದನ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಉತ್ಸವದ ನಿರ್ದೇಶಕಿ ಶೈನಿ ಆ್ಯಂಟನಿ ತಿಳಿಸಿದ್ದಾರೆ.
‘ಮಕ್ಕಳಿಗಾಗಿ ಎರಡೂ ದಿನ ಪ್ರತ್ಯೇಕ ವೇದಿಕೆಗಳನ್ನು ಒದಗಿಸಲಾಗುತ್ತದೆ. ಕಥೆ ಹೇಳುವಿಕೆ ಸೇರಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಪ್ರತ್ಯೇಕ ಕಾರ್ಯಾಗಾರವೂ ಇರಲಿದೆ. ಎರಡು ದಿನಗಳ ಈ ಉತ್ಸವದಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳಂ, ಬಂಗಾಳಿ ಸೇರಿ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಕವಿತೆಗಳ ವಾಚನ ನಡೆಯಲಿದೆ’ ಎಂದು ಹೇಳಿದ್ದಾರೆ.
‘2016ರಿಂದ 2019ರವರೆಗೆ ಹಾಗೂ 2022ರಲ್ಲಿ ನಡೆದ ಉತ್ಸವದಲ್ಲಿ ಪ್ರತಿವರ್ಷ 5 ಸಾವಿರಕ್ಕೂ ಹೆಚ್ಚು ಕಾವ್ಯಾಸಕ್ತರು ಭಾಗವಹಿಸಿದ್ದರು. ಈ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಬೆಂಗಳೂರು ಸಾಹಿತ್ಯೋತ್ಸವ ಪುಸ್ತಕ ಬಹುಮಾನ ನೀಡಲಾಗುತ್ತದೆ. ಅತ್ಯುತ್ತಮ ಮುಖಪುಟ ವಿನ್ಯಾಸ ಸೇರಿ ವಿವಿಧ ವಿಭಾಗಗಳಲ್ಲಿ 7 ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
‘ಈ ಬಾರಿಯಿಂದ ‘ಅತ್ಯುತ್ತಮ ಯುವ ಲೇಖಕರ ಪುಸ್ತಕ’ ಮತ್ತು ‘ಅತ್ಯುತ್ತಮ ಮಕ್ಕಳ ಪುಸ್ತಕ’ ಎಂದು ಚಿತ್ರ ಪುಸ್ತಕಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಕನ್ನಡದಲ್ಲಿ ಸಾಹಿತ್ಯ ಸಾಧನೆಗಾಗಿ ಲೇಖಕರಿಗೆ ವಾರ್ಷಿಕ ಪ್ರಶಸ್ತಿ ಸಹ ನೀಡಲಾಗುವುದು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.