ADVERTISEMENT

ಬೆಂಗಳೂರು: ಫುಟ್‌ಬಾಲ್‌ನಂತೆ ಮಗು ಒದ್ದ ಜಿಮ್‌ ತರಬೇತುದಾರ!

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 11:46 IST
Last Updated 19 ಡಿಸೆಂಬರ್ 2025, 11:46 IST
   

ಬೆಂಗಳೂರು: ಮನೆಯ ಎದುರು ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಐದು ವರ್ಷದ ಮಗುವಿಗೆ ಕಾಲಿನಿಂದ ಒದ್ದಿದ್ದ ಆರೋಪಿಯನ್ನು ಬನಶಂಕರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ರಂಜನ್(35) ಬಂಧಿತ ಆರೋಪಿ.

ಠಾಣಾ ವ್ಯಾಪ್ತಿಯ ತ್ಯಾಗರಾಜನಗರದ ನಿವಾಸಿ ದೀಪಿಕಾ ಜೈನ್‌ ಅವರು ನೀಡಿದ ದೂರಿನ ಮೇರೆಗೆ ಬಿಎನ್‌ಎಸ್‌ ಸೆಕ್ಷನ್‌ 115(2)ರ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಭಾನುವಾರ ಮಧ್ಯಾಹ್ನ 1ರ ಸುಮಾರಿಗೆ ತ್ಯಾಗರಾಜನಗರದ ಹಳೇ ಅಂಚೆ ಕಚೇರಿಯ ರಸ್ತೆಯಲ್ಲಿರುವ ತಮ್ಮ ಅಣ್ಣನ ಮನೆಗೆ ದೀಪಿಕಾ ಜೈನ್‌ ಅವರು ಐದು ವರ್ಷದ ಪುತ್ರ ನೀವ್‌ ಜೈನ್‌ ಕರೆದುಕೊಂಡು ಬಂದಿದ್ದರು. ಮನೆಯ ಎದುರು ನೀವ್‌ ಜೈನ್‌ ಇತರೆ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಪಕ್ಕದ ಮನೆಯ ನಿವಾಸಿ, ಆರೋಪಿ ರಂಜನ್‌ ಏಕಾಏಕಿ ಬಂದು ನೀವ್‌ ಜೈನ್‌ಗೆ ಒದ್ದಿದ್ದ. ಒದ್ದ ರಭಸಕ್ಕೆ ಕೆಳಕ್ಕೆ ಬಿದ್ದ ಮಗುವಿನ ಕಾಲು, ಮುಖಕ್ಕೆ ಗಾಯವಾಗಿತ್ತು. ರಕ್ತ ಬಂದಿತ್ತು’ ಎಂದು ಪೊಲೀಸರು ಹೇಳಿದರು.

‘ರಂಜನ್‌ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾನೆ. ಆರೋಪಿ ಈ ಹಿಂದೆ ಜಿಮ್‌ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆರೋಪಿಗೆ ಕೌನ್ಸೆಲಿಂಗ್‌ ನಡೆಸಲಾಗುವುದು. ಗಾಯಗೊಂಡ ಮಗುವಿಗೆ ಪೋಷಕರು ಚಿಕಿತ್ಸೆ ಕೊಡಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

ರಂಜನ್

‘ಆರೋಪಿ ರಂಜನ್‌ ಈ ಹಿಂದೆಯೂ ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಜತೆಗೆ ಇದೇ ರೀತಿಯಾಗಿ ವರ್ತಿಸಿದ್ದಾನೆ ಎಂಬುದು ಗೊತ್ತಾಗಿದೆ. ಆತನಿಗೆ ಶಿಕ್ಷೆ ಆಗಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ ಕೇಳಿದ ಆಯೋಗ: ಮಗುವಿಗೆ ಫುಟ್‌ಬಾಲ್‌ನಂತೆ ಒದೆಯುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆರೋಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಪೊಲೀಸರಿಂದ ವರದಿ ಕೇಳಿದೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.