ADVERTISEMENT

ಬೆಂಗಳೂರು: ಕಳ್ಳತನಕ್ಕೆ ಬಂದನೆಂದು ಶಂಕಿಸಿ ಹೊಡೆದು ಕೊಂದರು

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 6:39 IST
Last Updated 5 ಜೂನ್ 2020, 6:39 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಬೆಂಗಳೂರು: ಕಳ್ಳತನಕ್ಕೆ ಬಂದನೆಂದು ತಿಳಿದು ಜಗನ್ (23) ಎಂಬುವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಸೆಕ್ಯುರಿಟಿ ಗಾರ್ಡ್‌ಗಳು ಸೇರಿ ಆರು ಆರೋಪಿಗಳನ್ನು ಶ್ರೀರಾಮಪುರ ಪೊಲೀಸರು ಬಂಧಿಸಿದ್ದಾರೆ.

'ತಾಪ್ಸು ಬರ್ಮನ್, ಜಯರಾಮ್, ದೀಪಕ್‌ ಬೋರಾ, ಜೋಯ್ ದೀಪ್, ನಾರಾಯಣ ಹಾಗೂ ಧನಂಜಯ ಬಂಧಿತರು. ಇರೆಲ್ಲರೂ ಮಾಗಡಿ ರಸ್ತೆಯ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಕೆಲಸ ಮಾಡುತ್ತಿದ್ದರು' ಎಂದು ಪೊಲೀಸರು ಹೇಳಿದರು.

'ಸೆಂಟ್ರಿಂಗ್ ಕೆಲಸ‌ ಮಾಡುತ್ತಿದ್ದ ಜಗನ್, ಮೇ 31ರಂದು ರಾತ್ರಿ ಅಪಾರ್ಟ್‌ಮೆಂಟ್ ಸಮುಚ್ಚಯದ ಬಳಿ ಹೋಗಿದ್ದರು. ಇದೇ ವೇಳೆಯೇ ಆರೋಪಿಗಳು ಅವರ ಮೇಲೆ ಹಲ್ಲೆ ಮಾಡಿದ್ದರು. ಬೂಟಿನಿಂದ ಒದ್ದು ಪೈಪ್‌ನಿಂದ ಹೊಡೆದಿದ್ದರು. ತೀವ್ರ ಗಾಯಗೊಂಡ ಜಗನ್ ಮೃತಪಟ್ಟಿದ್ದರು.'

ADVERTISEMENT

'ಜೂನ್ 1ರಂದು ಬೆಳಿಗ್ಗೆ ಮೃತದೇಹ ನೋಡಿದ್ದ ಸ್ನೇಹಿತರು ದೂರು ನೀಡಿದ್ದರು. ಅದನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ' ಎಂದೂ ಪೊಲೀಸರು ಹೇಳಿದರು.

'ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದವು. ಹೀಗಾಗಿ, ರಾತ್ರಿಯಿಡಿ ಗಸ್ತು ತಿರುಗುತ್ತಿದ್ದೆವು. ಕಳ್ಳತನ ಮಾಡುವ ಉದ್ದೇಶದಿಂದ ಜಗನ್ ಚರಂಡಿ ಪೈಪ್ ಮೂಲಕ ಅಪಾರ್ಟ್‌ಮೆಂಟ್ ಸಮುಚ್ಚಯದೊಳಗೆ ಬಂದಿದ್ದರು. ಅದು ಗೊತ್ತಾಗುತ್ತಿದ್ದಂತೆ ಹಿಡಿದುಕೊಂಡು ಥಳಿಸಿದೆವು ಎಂಬುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ' ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.