ಬೆಂಗಳೂರು: ತಿಲಕ್‌ನಗರ ಠಾಣೆಯ ಎಎಸ್‌ಐ ಬಿ.ಜಿ.ಮಲ್ಲಿಕಾರ್ಜುನ್ ಅವರು ರಾಗಿಗುಡ್ಡದ (ಜಯನಗರ 9ನೇ ಬ್ಲಾಕ್) ಬಳಿ ಎಂದಿನಂತೆ ಕರ್ತವ್ಯದಲ್ಲಿ ಇದ್ದರು. ಆ ವೇಳೆ ಮಾನಸಿಕ ಅಸ್ವಸ್ಥ ಮಹಿಳೆ, ಎರಡು ವರ್ಷದ ಮಗುವನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ಗಮನಿಸಿ ರಕ್ಷಣೆ ಮಾಡಿದ್ದಾರೆ.
ಮಹಿಳೆ ಕೊರಳಿನಲ್ಲಿ ದೊಡ್ಡದಾದ ಮಣಿ ಸರ ಧರಿಸಿದ್ದರು. ಕೈಯಲ್ಲಿ ಬ್ಯಾಗ್, ತಲೆಗೆ ಬಟ್ಟೆ ಕಟ್ಟಿಕೊಂಡಿದ್ದರು. ಅನುಮಾನಗೊಂಡ ಮಲ್ಲಿಕಾರ್ಜುನ್ ಅವರು ಮಹಿಳೆಯನ್ನು ತಡೆದು ವಿಚಾರಣೆ ನಡೆಸಿದಾಗ ಮೆಟ್ರೊ ಕನ್ವೆನ್ಷನ್ ಹಾಲ್‌ನಿಂದ ಮಗುವನ್ನು ಎತ್ತಿಕೊಂಡು ಬಂದಿರುವುದು ಗೊತ್ತಾಯಿತು.
ತಕ್ಷಣವೇ ಮಲ್ಲಿಕಾರ್ಜುನ್ ಅವರು ದಕ್ಷಿಣ ವಿಭಾಗದ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಫೋಟೊ ಸಹಿತ ಮಾಹಿತಿ ಹಂಚಿಕೊಂಡಿದ್ದರು. ಹೊಯ್ಸಳ ಸಿಬ್ಬಂದಿಗೆ ಮಾಹಿತಿ ರವಾನೆ ಮಾಡಲಾಯಿತು. ಅಷ್ಟರಲ್ಲಿ ಮಗುವಿನ ತಾಯಿ ಪೊಲೀಸ್ ಠಾಣೆಗೆ ಬಂದಿದ್ದರು. ಬಳಿಕ, ಅವರನ್ನು ಸ್ಥಳಕ್ಕೆ ಕರೆದೊಯ್ದು ಮಗುವನ್ನು ಒಪ್ಪಿಸಲಾಯಿತು. ಮಲ್ಲಿಕಾರ್ಜುನ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಕಳೆದ ಶನಿವಾರ ಘಟನೆ ನಡೆದಿತ್ತು. ಮಗುವಿನ ತಾಯಿ ಇವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕನ್ವೆನ್ಷನ್ ಹಾಲ್‌ನಲ್ಲಿ ತಾಯಿ ಕೆಲಸದಲ್ಲಿ ಮಗ್ನರಾಗಿದ್ದರು. ಆ ಸಂದರ್ಭದಲ್ಲಿ ಮಗುವನ್ನು ಮಹಿಳೆ ಎತ್ತಿಕೊಂಡು ಪರಾರಿ ಆಗಿದ್ದರು.
ಠಾಣಾ ವ್ಯಾಪ್ತಿಯಲ್ಲಿ ಬ್ಯಾನರ್‌ವೊಂದನ್ನು ಇತ್ತೀಚೆಗೆ ಹರಿದು ಹಾಕಲಾಗಿತ್ತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಸ್ಥಳಕ್ಕೆ ತೆರಳಿದ್ದ ಪೊಲೀಸ್ ಸಿಬ್ಬಂದಿ ಘಟನೆ ನಡೆದ ಸುತ್ತಮುತ್ತಲ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ, ಇದೇ ಮಹಿಳೆ ಬ್ಯಾನರ್ ಹರಿದು ಹಾಕಿದ್ದರು ಎಂಬುದು ಪತ್ತೆಯಾಗಿತ್ತು. ಕೃತ್ಯ ಎಸಗಿದ ಮಹಿಳೆ ಮಾನಸಿಕ ಅಸ್ವಸ್ಥೆ ಎಂಬುದು ಗೊತ್ತಾಗಿದ್ದರಿಂದ ಯಾರೂ ದೂರು ನೀಡಿರಲಿಲ್ಲ.
‘ಎಎಸ್ಐ ಮಲ್ಲಿಕಾರ್ಜುನ್ ಅವರು ಸಮಯ ಪ್ರಜ್ಞೆ ತೋರಿದ್ದರಿಂದ ಮಗು ನಮ್ಮ ಮಡಿಲು ಸೇರಿತು’ ಎಂದು ಪೋಷಕರು ಸಂತೋಷ ವ್ಯಕ್ತಪಡಿಸಿದರು.