ಬೆಂಗಳೂರು: ನಗರದ ವ್ಯಾಪ್ತಿ ವಿಸ್ತಾರಗೊಂಡ ಬೆನ್ನಲ್ಲೇ ಬೆಂಗಳೂರು ಪೊಲೀಸ್ ಕಮಿಷನರೇಟ್‌ನಲ್ಲಿ ಹೊಸದಾಗಿ ಮೂರು ಪೊಲೀಸ್ ವಿಭಾಗಗಳನ್ನು ಸೃಜಿಸಲಾಗಿದ್ದು, 20 ಪೊಲೀಸ್ ಠಾಣೆಗಳನ್ನು ಸೇರ್ಪಡೆ ಮಾಡಲಾಗಿದೆ. ಹೊಸ ವಿಭಾಗಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನೂತನ ಡಿಸಿಪಿಗಳನ್ನೂ ನೇಮಿಸಿದೆ.
ಇದುವರೆಗೂ ನಗರದಲ್ಲಿ 8 ಪೊಲೀಸ್ ವಿಭಾಗಗಳಿದ್ದವು. ಅವುಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಹೊಸ ವಿಭಾಗಗಳಾದ ವಾಯವ್ಯ, ನೈಋತ್ಯ ಹಾಗೂ ಎಲೆಕ್ಟ್ರಾನಿಕ್ ಸಿಟಿ ವಿಭಾಗಕ್ಕೆ ತಲಾ 13 ಕಾರ್ಯಕಾರಿ ಹುದ್ದೆಗಳನ್ನೂ ಸರ್ಕಾರ ಮಂಜೂರು ಮಾಡಿದ್ದು, ಪ್ರತ್ಯೇಕವಾಗಿ ಕೆಲಸ ಆರಂಭವಾಗಿದೆ.
ಉದ್ಯೋಗ, ಶಿಕ್ಷಣ, ವ್ಯಾಪಾರಕ್ಕೆಂದು ನಗರಕ್ಕೆ ಬರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರೀಕರಣದ ಜತೆಗೆ ಅಪರಾಧ ಪ್ರಕರಣಗಳೂ ನಗರದಲ್ಲಿ ಹೆಚ್ಚಾಗುತ್ತಿವೆ. ಮನೆ ಕಳ್ಳತನ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು, ಸೈಬರ್ ಅಪರಾಧ ಪ್ರಕರಣಗಳು, ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳೂ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವುದು, ತನಿಖೆಯಲ್ಲಿ ಗುಣಮಟ್ಟ ಹೆಚ್ಚಿಸುವುದು ಹಾಗೂ ಆರೋಪಿಗಳನ್ನು ತ್ವರಿತವಾಗಿ ಬಂಧಿಸಿ ಕ್ರಮ ಕೈಗೊಳ್ಳಲು ನೆರವಾಗಲೆಂದು ಹೊಸ ವಿಭಾಗಗಳನ್ನು ಸೃಜಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ಐದು ವಿಭಾಗಗಳಿದ್ದವು:
ಜನಸಂಖ್ಯೆ ಹಾಗೂ ಅಪರಾಧ ಪ್ರಕರಣಗಳನ್ನು ಆಧರಿಸಿ 2008ರ ಅಂತ್ಯದವರೆಗೂ ಬೆಂಗಳೂರು ಕಮಿಷನ್‌ರೇಟ್ ವ್ಯಾಪ್ತಿಯಲ್ಲಿ ಕೇವಲ 5 ಕಾನೂನು ಸುವ್ಯವಸ್ಥೆ ವಿಭಾಗಗಳು ಹಾಗೂ ಎರಡು ಸಂಚಾರ ಪೊಲೀಸ್ ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದವು. ನಗರದ ವ್ಯಾಪ್ತಿ ಕ್ರಮೇಣ ವಿಸ್ತಾರವಾದ ಕಾರಣಕ್ಕೆ ಕಾನೂನು ಸುವ್ಯವಸ್ಥೆ ವಿಭಾಗಗಳನ್ನು ಎಂಟಕ್ಕೆ ಹಾಗೂ ಸಂಚಾರ ವಿಭಾಗಗಳನ್ನು ನಾಲ್ಕಕ್ಕೆ ಏರಿಕೆ ಮಾಡಲಾಗಿತ್ತು. ಇದೀಗ ಕಾನೂನು ವಿಭಾಗಗಳ ಸಂಖ್ಯೆಯೇ 11ಕ್ಕೆ ಏರಿದೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಹಾಗೂ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳು, ಮಾದಕ ದ್ರವ್ಯ ನಿಗ್ರಹ ಕಾಯ್ದೆ(ಎನ್‌ಡಿಪಿಎಸ್) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (ಐಟಿ) ನಾಲ್ಕು ವರ್ಷಗಳಲ್ಲಿ (ಎಂಟು ವಿಭಾಗದಲ್ಲಿ) 2.42 ಲಕ್ಷ ಅಪರಾಧ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಶ್ಚಿಮ ವಿಭಾಗದಲ್ಲಿ ನಾಲ್ಕು ಎಸಿಪಿ ಉಪ ವಿಭಾಗಗಳು ಹಾಗೂ 21 ಪೊಲೀಸ್ ಠಾಣೆಗಳಿದ್ದವು. ಪಶ್ಚಿಮ ವಿಭಾಗವು ಭೌಗೋಳಿಕವಾಗಿ ದೊಡ್ಡ ವಿಭಾಗವಾಗಿತ್ತು. ಕೆಂಗೇರಿ ಪ್ರದೇಶವು ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ ಸಹ ಇದೆ. ವಿವಿಧೆಡೆ ವಸತಿ ಪ್ರದೇಶಗಳೂ ಅಭಿವೃದ್ಧಿ ಹೊಂದುತ್ತಿವೆ. ಹೀಗಾಗಿ, ಹೊಸದಾಗಿ ನೈಋತ್ಯ ವಿಭಾಗ ಸೃಜಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಾಕಷ್ಟು ಐ.ಟಿ ಕಂಪನಿಗಳಿವೆ. ಈ ಪ್ರದೇಶದಲ್ಲೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಐ.ಟಿ ಕಂಪನಿಗಳು ಸ್ಥಾಪನೆಯಾಗುವ ನಿರೀಕ್ಷೆಯಿದೆ. ಈ ಪ್ರದೇಶವನ್ನು ಒಳಗೊಂಡಂತೆ ಎಲೆಕ್ಟ್ರಾನಿಕ್ ಸಿಟಿ ವಿಭಾಗವನ್ನು ಅಸ್ತಿತ್ವಕ್ಕೆ ತರಲಾಗಿದೆ. ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಸ್ತುತ ಎರಡು ಟರ್ಮಿನಲ್‌ಗಳಿವೆ. ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದ್ದು, ವಾಯವ್ಯ ವಿಭಾಗವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.