ಬೆಂಗಳೂರು: ಡ್ರಗ್ಸ್ ಮಾರಾಟ ಮಾಡುವವರ ಸ್ನೇಹ ಸಂಪಾದಿಸಿ ಅವರೊಂದಿಗೆ ಪಾರ್ಟಿ ನಡೆಸಿದ್ದ ಹಾಗೂ ಡ್ರಗ್ಸ್ ನಿಯಂತ್ರಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳದ ಆರೋಪದ ಮೇರೆಗೆ ಚಾಮರಾಜಪೇಟೆ ಠಾಣೆಯ ಇನ್‌ಸ್ಪೆಕ್ಟರ್ ಮಂಜಣ್ಣ ಸೇರಿದಂತೆ 10 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಚಾಮರಾಜಪೇಟೆ ಠಾಣೆಯ ಆರು ಹಾಗೂ ಜೆ.ಜೆ. ನಗರದ ನಾಲ್ಕು ಸಿಬ್ಬಂದಿ ಸೇರಿ 10 ಮಂದಿಯನ್ನು ಅಮಾನತು ಮಾಡಲಾಗಿದೆ.
ಮಂಜಣ್ಣ ಅವರನ್ನು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಅಮಾನತು ಮಾಡಿದ್ದರೆ, ಉಳಿದ ಸಿಬ್ಬಂದಿ ವಿರುದ್ಧ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ಕ್ರಮ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಅಮಾನತುಗೊಂಡವರು ಯಾರು?:
ಚಾಮರಾಜಪೇಟೆ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ಗಳಾದ ರಮೇಶ್ ಹಾಗೂ ಶಿವರಾಜ್, ಕಾನ್‌ಸ್ಟೆಬಲ್‌ಗಳಾದ ಮಧುಸೂದನ್, ಪ್ರಸನ್ನ, ಶಂಕರ್, ಆನಂದ್, ಜೆ.ಜೆ. ನಗರ ಠಾಣೆಯ ಎಎಸ್‌ಐ ಕುಮಾರ್, ಹೆಡ್‌ಕಾನ್‌ಸ್ಟೆಬಲ್ ಆನಂದ್ ಹಾಗೂ ಸಿಬ್ಬಂದಿ ಬಸವನಗೌಡ ಸೇರಿ ಹತ್ತು ಮಂದಿ ಅಮಾನತುಗೊಂಡಿದ್ದಾರೆ.
‘ಡ್ರಗ್ಸ್ ಮಾರಾಟ ಮಾಡುವವರ ಜತೆಗೆ ಪೊಲೀಸ್ ಸಿಬ್ಬಂದಿಗೆ ನೇರ ಸಂಬಂಧವಿದೆ. ಅವರ ಜತೆಗೆ ಪಾರ್ಟಿ ನಡೆಸಿದ್ದಾರೆ ಎಂಬುದರ ಕುರಿತು ದೂರು ಬಂದಿತ್ತು. ಪ್ರಾಥಮಿಕ ಪರಿಶೀಲನೆಯ ವೇಳೆ ದೂರಿನಲ್ಲಿ ಸತ್ಯಾಂಶವಿದ್ದಂತೆ ಕಂಡುಬಂದಿದ್ದು, ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ. ಡ್ರಗ್ಸ್ ಮಾರಾಟ ಮಾಡುವವರು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಹಣಕಾಸು ವರ್ಗಾವಣೆ ಆಗಿದೆಯೇ ಎಂಬುದರ ಕುರಿತೂ ಪರಿಶೀಲನೆ ನಡೆಯುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.